ಬೆಂಗಳೂರು :  ಜೆಡಿಎಸ್‌-ಕಾಂಗ್ರೆಸ್‌ ದೋಸ್ತಿ ಸರ್ಕಾರದಲ್ಲಿನ ಗುದ್ದಾಟ ಮುಂದುವರಿದಿದ್ದು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಚಿವ ಎಚ್‌.ಡಿ. ರೇವಣ್ಣ ‘ಸೋದರರ ಜೋಡಿ’ಯ ಹೇಳಿಕೆಗಳಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಶುಕ್ರವಾರ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನ್ನು 12 ಸ್ಥಾನಗಳಲ್ಲಿ ಗೆಲ್ಲಿಸಿಕೊಡಿ’ ಎಂದು ತಮ್ಮ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ ನೀಡಿದ ಬಗ್ಗೆ ಅಸಮಾಧಾನ ಹೊರಹಾಕಿರುವ ದಿನೇಶ್‌, ‘ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗದೆ ಬಹಿರಂಗ ಹೇಳಿಕೆ ನೀಡುವುದು ಬೇಡ’ ಎಂದು ಹೇಳಿದ್ದಾರೆ.

ಇನ್ನು ‘ಕಾಂಗ್ರೆಸ್‌ ಪಕ್ಷವು ಸಂಚು ನಡೆಸಿ ದಲಿತ ನಾಯಕರಾದ ಡಾ.ಜಿ. ಪರಮೇಶ್ವರ್‌ ಅವರಿಂದ ಗೃಹ ಖಾತೆ ಕಸಿದುಕೊಂಡಿದೆ. ಪರಿಶಿಷ್ಟಸಮುದಾಯದ ನಾಯಕನ ಕಾಂಗ್ರೆಸ್‌ನವರೇ ಸಹಿಸದಿದ್ದರೆ ಹೇಗೆ’ ಎಂಬ ಸಚಿವ ಎಚ್‌.ಡಿ. ರೇವಣ್ಣ ಅವರ ಹೇಳಿಕೆಗೂ ಆಕ್ರೋಶ ವ್ಯಕ್ತಪಡಿಸಿದ ದಿನೇಶ್‌, ‘ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷವಾಗಿರುವ ಕಾಂಗ್ರೆಸ್‌ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡದಂತೆ ರೇವಣ್ಣ ಅವರಿಗೆ ಸಲಹೆ ನೀಡುತ್ತೇನೆ. ಬಹಿರಂಗವಾಗಿ ಒಂದು ಪಕ್ಷದ ಬಗ್ಗೆ ಮಾತನಾಡಬಾರದು’ ಎಂದು ಹೇಳಿದರು.

ಎಚ್‌ಡಿಕೆ ಬಗ್ಗೆ ಅತೃಪ್ತಿ:  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್‌, ‘ಜೆಡಿಎಸ್‌ಗೆ 12 ಸ್ಥಾನ ಬಿಟ್ಟು​ಕೊ​ಡುವ ಕುರಿತು ಎಲ್ಲೂ ಚರ್ಚೆಯಾಗಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಅವರು ಜೆಡಿಎಸ್‌ ವೇದಿಕೆಯಲ್ಲಿ ಮಾತ್ರ ಚರ್ಚೆ ಮಾಡಿದ್ದಾರೆ. ಲೋಕಸಭೆ ಚುನಾವಣೆ ಸ್ಥಾನಗಳ ಹಂಚಿಕೆಗಳ ಬಗ್ಗೆ ಇನ್ನೂ ಎರಡೂ ಪಕ್ಷಗಳ ನಡುವೆ ಚರ್ಚೆಯಾಗಿಲ್ಲ. ಚರ್ಚೆಯಾಗದೆ ಅಂತಹ ವಿಚಾರಗಳ ಬಗ್ಗೆ ಬಹಿರಂಗವಾಗಿ ಹೇಳುವುದು ಬೇಡ. ಇಷ್ಟಕ್ಕೂ ಕ್ಷೇತ್ರಗಳ ಸಂಖ್ಯೆ ಮುಖ್ಯವಲ್ಲ. ಬದಲಿಗೆ ನಮಗೆ ಗೆಲ್ಲುವುದು ಮಾತ್ರ ಮುಖ್ಯ’ ಎಂದು ಹೇಳಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಾಗಿ ಈಗಾಗಲೇ ಘೋಷಿಸಿವೆ. ಆದರೆ, ಲೋಕಸಭಾ ಸ್ಥಾನಗಳ ಹಂಚಿಕೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಹೀಗಿದ್ದರೂ ಗುರುವಾರ ನಡೆದ ಜೆಡಿಎಸ್‌ ಲೋಕಸಭೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಕುಮಾರಸ್ವಾಮಿ ಅವರು, ‘16 ಸ್ಥಾನ ಗೆಲ್ಲುವ ಮೂಲಕ ದೇವೇಗೌಡ ಪ್ರಧಾನಮಂತ್ರಿಯಾಗಿದ್ದರು. ಈ ಬಾರಿ ಜೆಡಿಎಸ್‌ಗೆ 12 ಸ್ಥಾನ ಗೆಲ್ಲಿಸಿಕೊಡಿ. ನಮ್ಮನ್ನು ಹಂಗಿಸುತ್ತಿರುವ ನರೇಂದ್ರ ಮೋದಿ ಅವರು ದೇವೇಗೌಡರ ಮನೆ ಬಾಗಿಲ ಬಳಿ ನಿಲ್ಲುತ್ತಾರೆ’ ಎಂದಿದ್ದರು. ಈ ಹಿನ್ನೆಲೆಯಲ್ಲಿ ದಿನೇಶ್‌ ಈ ಮಾತುಗಳನ್ನಾಡಿದರು.