ಶಾಲೆಗೆ ಹೋಗೋ ಮಕ್ಕಳನ್ನು ಬೆಳಿಗ್ಗೆ ಎಬ್ಬಿಸೋದೇ ತಲೆನೋವು ಎಂಬುದು ಪ್ರತಿಯೊಬ್ಬರ ತಂದೆ ತಾಯಿಯ ಗೊಣಗಾಟ. ಹೀಗಾಗಿ ಬಹುತೇಕ ಅಮ್ಮಂದಿರು ಅಲಾರಾಂ ಇಟ್ಟು ಮಲಗಿ ಬಿಡುತ್ತಾರೆ. ಆದರೆ ಅಲಾರಾಂ ಶಬ್ದಕ್ಕಿಂತ ಅಮ್ಮ ಕೂಗುವ ಧ್ವನಿ ಕೇಳಿಯೇ ಮಕ್ಕಳು ಬೇಗ ಎದ್ದೇಳುತ್ತಾರೆ ಅಂತ ಸಮೀಕ್ಷೆಯೊಂದು ಹೇಳಿದೆ.

ಸಾಮಾನ್ಯವಾಗಿ ಅಲಾರಾಂ ಬಡಿದುಕೊಂಡು ಕನಿಷ್ಠ 5 ನಿಮಿಷ ತಡವಾಗಿಯೇ ಮಕ್ಕಳು ಏಳುತ್ತಾರೆ. ಆದರೆ ಅಮ್ಮನ ಕೂಗು ಕೇಳಿ ನಾಲ್ಕೇ ನಾಲ್ಕು ಸೆಕೆಂಡ್‌ಗಳಲ್ಲಿ ಮಕ್ಕಳು ಹಾಸಿಗೆ ಬಿಟ್ಟು ಹೊರಬರುತ್ತಾರಂತೆ. ಅಮೆರಿಕದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ. 5-12 ವರ್ಷದೊಳಗಿನ 176 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಬೆಡ್‌ರೂಂ ನಂತೆಯೇ ಕೋಣೆಯೊಂದನ್ನು ಸಿದ್ಧಪಡಿಸಿ, ಗಾಢ ನಿದ್ರೆಗೆ ಹೋಗುವಂತೆ ಪ್ರಚೋದಿಸಲಾಗಿತ್ತು. ಅನಂತರ 4 ರೀತಿಯಲ್ಲಿ ಅಲಾರಾಂ ಇಟ್ಟು ಹಾಸಿಗೆಯಿಂದ ಏಳಲು ಎಷ್ಟುಸಮಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ಪರಿಶೀಲಿಸಲಾಗುತ್ತಿತ್ತು.

ಇವುಗಳ ಮಧ್ಯದಲ್ಲಿ ತಾಯಿಯ ಧ್ವನಿ ಇರುವ ಅಲಾರಾಂ ಕೂಡ ಇಡಲಾಗಿತ್ತು. ತಾಯಿಯ ಧ್ವನಿ ಕೇಳಿದಾಕ್ಷಣ ಬಹುತೇಕ ಮಕ್ಕಳು ಎದ್ದಿದ್ದರು. ಶೇ.6ರಷ್ಟುಮಕ್ಕಳು ಯಾವುದೇ ಶಬ್ದಕ್ಕೂ ವೇಗವಾಗಿ ಪ್ರತಿಕ್ರಿಯಿಸದೆ 5 ನಿಮಿಷದ ಬಳಿಕವೇ ಎಚ್ಚರಗೊಂಡರು. ಈ ಸಮೀಕ್ಷೆಯ ಸಂಶೋಧಕರೊಬ್ಬರಾದ, ಡಾ. ಗೇರಿ ಸ್ಮಿತ್‌ ‘ಮಹಿಳೆಯರ ಧ್ವನಿಗೆ ಆ ಒಂದು ವಿಶಿಷ್ಟಶಕ್ತಿ ಇರುವುದರಿಂದ ಇದೆಲ್ಲಾ ಸಾಧ್ಯವಾಗಿರಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.