ತಿರುವನಂತಪುರಂ[ಮೇ.08]: ಪರೀಕ್ಷೆ ಬರೆಯುವ ಮಕ್ಕಳ ಮೇಲೆ ಅತಿ ಹೆಚ್ಚು ಹಾಗೂ ಉತ್ತಮ ಅಂಕ ಗಳಿಸುವ ಒತ್ತಡವಿರುತ್ತದೆ. ಹೀಗಿರುವಾಗ ಮಕ್ಕಳ ಮೇಲಿನ ಒತ್ತಡ ಕಡಿಮೆ ಮಾಡುವುದು ಪ್ರತಿಯೊಬ್ಬ ತಂದೆ ತಾಯಿಯ ಕರ್ತವ್ಯ. ಆದರೆ ಕೇರಳದಲ್ಲೊಬ್ಬ ತಂದೆ ಕಡಿಮೆ ಅಂಕ ಪಡೆದ ಮಗನಿಗೆ ಮನ ಬಂದಂತೆ ಥಳಿಸಿದ್ದಾರೆ. ಸದ್ಯ ಈ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕೇರಳದ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದೆ. ತಂದೆ ತನ್ನ ಮಗ SSLC ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲೂ A+ ಗ್ರೇಡ್ ಪಡೆಯಬೇಕೆಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ದುರಾದೃಷ್ಟವಶಾತ್ ಮಗ ತಂದೆಯ ನಿರೀಕ್ಷೆಯನ್ನು ಈಡೇರಿಸಲು ವಿಫಲನಾಗಿದ್ದಾನೆ. ಇದರಿಂದ ಕೋಪಗೊಂಡ ತಂದೆ ದೊಣ್ಣೆಯಿಂದ ಮಗನನ್ನು ಮನ ಬಂದಂತೆ ಥಳಿಸಿದ್ದಾರೆ. ಈ ಘಟನೆ ಕೇರಳದ SSLC ಫಲಿತಾಂಶ ಪ್ರಕಟವಾದ ಕೆಲವೇ ಗಂಟೆಗಳ ಬಳಿಕ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಗನನ್ನು ಥಳಿಸುತ್ತಿದ್ದ ಗಂಡನ ಮೇಲೆ ಸಿಟ್ಟಾದ ತಾಯಿ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿರುವ 43 ವರ್ಷದ ಸಾಬೂ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. ಇನ್ನು ಬಾಲಕ ಒಟ್ಟು 10 ವಿಷಯಗಳ ಪೈಕಿ 6ರಲ್ಲಿ A+ ಗ್ರೇಡ್ ಪಡೆದಿದ್ದ.