ನವದೆಹಲಿ[ಜೂ.10]: ಜಮ್ಮು ಕಾಶ್ಮೀರದ ಕತುವಾದಲ್ಲಿ ಬಂಜಾರಾ ಸಮುದಾಯದ 8 ವರ್ಷದ ಪುಟ್ಟ ಬಾಲಕಿಯ ಅತ್ಯಾಚಾಋ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ ಪಠಾಣ್ ಕೋಟ್ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ 7 ಆರೋಪಿಗಳಲ್ಲಿ 6 ಮಂದಿಯನ್ನು ದೋಷಿಗಳೆಂದು ಘೋಷಿಸಿದೆ. 

ದೇವಸ್ಥಾನದ ಅರ್ಚಕ ಝಾನ್ಸಿ ರಾಮ್, ಪೊಲೀಸ್ ಅಧಿಕಾರಿಗಳಾದ ದೀಪಕ್ ಕಜೂರಿಯಾ ಹಾಗೂ ಸುರೇಂದ್ರ ಕುಮಾರ್, ಹೆಡ್ ಕಾನ್ಸ್ಟೇಬಲ್ ತಿಲಕ್ ರಾಜ್, ಪ್ರವೇಶ್ ಕುಮಾರ್ ಹಾಗೂ ಆನಂದ್ ದತ್ತಾರನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿದ್ದೆ. ಮತ್ತೋರ್ವ ಆರೋಪಿ ವಿಶಾಲ್ ವಿರುದ್ಧ ಸಾಕಷ್ಟು ಸಾಕ್ಷಿಗಳಿಲ್ಲದ ಕಾರಣ ಖುಲಾಸೆಗೊಳಿಸಲಾಗಿದೆ. ಇಂದು ಸೋಮವಾರ ಸಂಜೆ 4 ಗಂಟೆಗೆ ನ್ಯಾಯಾಲಯವು ದೋಷಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು IPC ಸೆಕ್ಷನ್ 201ರ ಅಡಿಯಲ್ಲಿ[ಸಾಕ್ಷಿ ನಾಶ] ದೋಷಿ ಎಂದು ಘೋಷಿಸಿದೆ. ಇದರ ಅನ್ವಯ ಗರಿಷ್ಟ 3 ವರ್ಷಗಳ ಶಿಕ್ಷೆ ಸಿಗಬಹುದು. ಇನ್ನು ಪ್ರಕರಣದ ಪ್ರಮುಖ ಆರೋಪಿ ಝಾನ್ಸಿ ರಾಮ್ ವಿರುದ್ಧ IPC ಸೆಕ್ಷನ್ 302[ಹತ್ಯೆ], 376[ಅತ್ಯಾಚಾರ], 328[ಅಪರಾಧವೆಸಗುವ ಉದ್ದೆಶದಿಂದ ವಿಷವುಣಿಸುವುದು], 343[ಮೂರು ಅಥವಾ ಅದಕ್ಕೂ ಹೆಚ್ಚು ದಿನಗಳ ಕಾಲ ಬಂಧಿಸುವುದು]ರ ಅಡಿಯಲ್ಲಿ ಅಪರಾಧಿ ಎಂದು ಆದೇಶಿಸಿದೆ.