ನವದೆಹಲಿ[ಜೂ.10]: ಕತುವಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ ಪಠಾಣ್ ಕೋಟ್ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಒಟ್ಟು 7 ಮಂದಿ ಆರೋಪಿಗಳಲ್ಲಿ ದೇವಸ್ಥಾನದ ಅರ್ಚಕ ಸೇರಿದಂತೆ 6 ಮಂದಿಯನ್ನು ದೋಷಿಗಳೆಂದು ಘೋಷಿಸಿದ್ದ ನ್ಯಾಯಾಲಯ ಇದೀಗ ಶಿಕ್ಷೆ ಪ್ರಮಾಣವನ್ನೂ ಪ್ರಕಟಿಸಿದೆ.

ದೇವಸ್ಥಾನದ ಅರ್ಚಕ ಹಾಗೂ ಪ್ರಕರಣದ ಪ್ರಮುಖ ಆರೋಪಿ ಝಾನ್ಸಿ ರಾಮ್,  ಪ್ರವೇಶ್ ಕುಮಾರ್ ಹಾಗೂ ಆನಂದ್ ದತ್ತಾಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪೊಲೀಸ್ ಅಧಿಕಾರಿಗಳಾದ ದೀಪಕ್ ಕಜೂರಿಯಾ ಹಾಗೂ ಸುರೇಂದ್ರ ಕುಮಾರ್, ಹೆಡ್ ಕಾನ್ಸ್ಟೇಬಲ್ ತಿಲಕ್ ರಾಜ್ ಗೆ ತಲಾ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇನ್ನು ಪ್ರಕರಣದ ಮತ್ತೊಬ್ಬ ಆರೋಪಿ ವಿಶಾಲ್ ವಿರುದ್ಧ ಸಾಕಷ್ಟು ಸಾಕ್ಷಿಗಳಿಲ್ಲದ ಕಾರಣ ಖುಲಾಸೆಗೊಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು IPC ಸೆಕ್ಷನ್ 201ರ ಅಡಿಯಲ್ಲಿ[ಸಾಕ್ಷಿ ನಾಶ] ದೋಷಿ ಎಂದು ಘೋಷಿಸಿದೆ. ಇದರ ಅನ್ವಯ ಗರಿಷ್ಟ 3 ವರ್ಷಗಳ ಶಿಕ್ಷೆ ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಆದರೀಗ ನ್ಯಾಯಾಲಯ 5 ವರ್ಷ ಶಿಕ್ಷೆ ವಿಧಿಸಿದೆ.

ಇನ್ನು ಪ್ರಕರಣದ ಪ್ರಮುಖ ಆರೋಪಿ ಝಾನ್ಸಿ ರಾಮ್ ವಿರುದ್ಧ IPC ಸೆಕ್ಷನ್ 302[ಹತ್ಯೆ], 376[ಅತ್ಯಾಚಾರ], 328[ಅಪರಾಧವೆಸಗುವ ಉದ್ದೇಶದಿಂದ ವಿಷವುಣಿಸುವುದು], 343[ಮೂರು ಅಥವಾ ಅದಕ್ಕೂ ಹೆಚ್ಚು ದಿನಗಳ ಕಾಲ ಬಂಧಿಸುವುದು]ರ ಅಡಿಯಲ್ಲಿ ಅಪರಾಧಿ ಎಂದು ಆದೇಶಿಸಿತ್ತು.