ಬೆಂಗಳೂರು :  ಪತ್ನಿ ನಾಗರತ್ನಾ ದೂರಿನ ಹಿನ್ನೆಲೆಯಲ್ಲಿ ನಟ ‘ದುನಿಯಾ’ ವಿಜಯ್‌ ಅವರಿಗೆ ರಾಜ್ಯ ಮಹಿಳಾ ಆಯೋಗ ನೋಟಿಸ್‌ ಜಾರಿ ಮಾಡಿದೆ.

ನಾಗರತ್ನ ಅವರು ಕಳೆದ ವಾರ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರನ್ನು ಭೇಟಿ ಮಾಡಿ, ನನ್ನ ಪತಿ ವಿಜಯ್‌ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ನಾನು ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. 

ಕುಟುಂಬ ನಿರ್ವಹಣೆಗೆ ವಿಜಯ್‌ರಿಂದ ದೊರೆಯುತ್ತಿದ್ದ ಹಣವೂ ಈಗ ಸಿಗುತ್ತಿಲ್ಲ. ನಾವು ಸದ್ಯ ವಾಸಿಸುತ್ತಿರುವ ಮನೆಯನ್ನು ನನ್ನ ಗಮನಕ್ಕೆ ತಾರದೇ ಮಾರಾಟ ಮಾಡಲಾಗಿದೆ. ಹಾಗಾಗಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದರು ಎನ್ನಲಾಗಿದೆ.

ನಾಗರತ್ನ ಅವರ ಮನವಿಯಂತೆ ಮಹಿಳಾ ಆಯೋಗವು ವಿಜಯ್‌ಗೆ ನೋಟಿಸ್‌ ನೀಡಿದೆ. ನೋಟಿಸ್‌ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್‌, ಸದ್ಯದಲ್ಲೇ ಮಹಿಳಾ ಆಯೋಗಕ್ಕೆ ಭೇಟಿ ನೀಡಿ ಉತ್ತರಿಸುತ್ತೇನೆ. ಯಾರಿಗೂ ಅನ್ಯಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.