ರಾಜ್ಯದಲ್ಲಿ ಹಂದಿಜ್ವರ ತಾಂಡವ! ಲಕ್ಷಣಗಳೇನು..? ಚಿಕಿತ್ಸೆ ಏನು..?
ಎಚ್1ಎನ್1 ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ಸ್ವತಃ ಆರೋಗ್ಯ ಇಲಾಖೆಯೇ ಆತಂಕ ವ್ಯಕ್ತಪಡಿಸಿದೆ. ಜನವರಿಯಿಂದ ಈವರೆಗೂ ಒಟ್ಟು 242 ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು : ಹಂದಿಜ್ವರ ಎಂದೇ ಕರೆಸಿಕೊಳ್ಳುವ ಮಹಾಮಾರಿ ಎಚ್1ಎನ್1 ಸೋಂಕು ರಾಜ್ಯದಲ್ಲಿ ವ್ಯಾಪಕವಾಗಿ ಹರಡಲು ಆರಂಭಿಸಿದ್ದು, ಸೆಪ್ಟೆಂಬರ್ ತಿಂಗಳಲ್ಲೊಂದೇ ರಾಜ್ಯಾದ್ಯಂತ 204 ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ, ಬೀದರ್‌ನ ಭಾಲ್ಕಿ ತಾಲೂಕಿನಲ್ಲಿ ಇಬ್ಬರು ವ್ಯಕ್ತಿಗಳು ಶಂಕಿತ ಎಚ್1ಎನ್1 ಕಾಯಿಲೆಯಿಂದ ಮೃತಪಟ್ಟಬಗ್ಗೆ ವರದಿಯಾಗಿದ್ದು, ಆತಂಕ ಮತ್ತಷ್ಟುತೀವ್ರಗೊಂಡಿದೆ.
ಎಚ್1ಎನ್1 ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ಸ್ವತಃ ಆರೋಗ್ಯ ಇಲಾಖೆಯೇ ಆತಂಕ ವ್ಯಕ್ತಪಡಿಸಿದೆ. ಜನವರಿಯಿಂದ ಈವರೆಗೂ ಒಟ್ಟು 242 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಸೆಪ್ಟೆಂಬರ್ 1ರಿಂದ 21ರವರೆಗೆ 21 ದಿನದಲ್ಲಿ 102 ಎಚ್1ಎನ್1 ಪ್ರಕರಣಗಳು ದೃಢಪಟ್ಟಿದ್ದವು. ಬಳಿಕ ಒಂಬತ್ತು ದಿನಗಳಲ್ಲೇ 102 ಪ್ರಕರಣಗಳು ಖಚಿತಪಟ್ಟಿವೆ. ಹೀಗಾಗಿ ಎಚ್1ಎನ್1 ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಾಜ್ಯದಲ್ಲಿ ದಿನೇದಿನೇ ಎಚ್1ಎನ್1 ಸೋಂಕು ಉಲ್ಬಣಿಸುತ್ತಿದ್ದು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಜಂಟಿ ಆಯುಕ್ತ ಡಾ.ಸಜ್ಜನ್ ಶೆಟ್ಟಿಹೇಳಿದ್ದಾರೆ.
ಇಬ್ಬರು ಶಂಕಿತ ರೋಗಿಗಳ ಸಾವು:
ಬೀದರ್‌ನ ಭಾಲ್ಕಿ ತಾಲೂಕಿನ ಹಲ್ಸಿತೂಗಾಂವ್ ಗ್ರಾಮದಲ್ಲಿ ಸಕ್ಕುಬಾಯಿ ಶಿವಾಜಿ ಪಾಟೀಲ್ ಎಂಬ ಮಹಿಳೆ ಅ.1ರಂದು ಶಂಕಿತ ಎಚ್1ಎನ್1ಗೆ ಬಲಿಯಾಗಿದ್ದರು. ಇದೀಗ ಭಾಲ್ಕಿ ತಾಲೂಕಿನ ಪಾಂಡ್ರಿ ಗ್ರಾಮದ ಸತೀಶ ಹರಿರಾಮ ಮುರ್ಮೇ (40) ಎಂಬ ವ್ಯಕ್ತಿಯೂ ಎಚ್1ಎನ್1 ಲಕ್ಷಣಗಳಿಂದಲೇ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಈ ಬಗ್ಗೆ ಸ್ಥಳೀಯ ವೈದ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಮೃತರ ಮಾದರಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಉಲ್ಬಣಗಳೊಂಡ ಸೋಂಕು:
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ದೃಢಪಟ್ಟಿರುವ 204 ಪ್ರಕರಣಗಳ ಪೈಕಿ ಪೈಕಿ ಅತಿ ಹೆಚ್ಚು ಪ್ರಕರಣಗಳು ಅರ್ಥಾತ್ 61 ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿವೆ. ಉದ್ಯಾನ ನಗರಿಯಲ್ಲಿ ತೀವ್ರ ಸ್ವರೂಪದಲ್ಲಿ ಎಚ್1ಎನ್1 ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಎರಡನೇ ಬಾರಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ಆತಂಕ ಮೂಡಿಸಿದ್ದು, ವಿಶೇಷ ಎಚ್ಚರವಹಿಸುವಂತೆ ಸೂಚಿಸಲಾಗಿದೆ.
ಜತೆಗೆ ಎಚ್1ಎನ್1 ಹರಡುವುದನ್ನು ತಡೆಗಟ್ಟುವ ಸಲುವಾಗಿ ಎಚ್1ಎನ್1 ಪ್ರಕರಣಗಳು ವರದಿಯಾದ ಮನೆ ಮತ್ತು ಸುತ್ತಮುತ್ತಲಿನ ಸಾರ್ವಜನಿಕರಲ್ಲಿ ರೋಗ ಲಕ್ಷಣಗಳ ಪತ್ತೆಗಾಗಿ ಆರೋಗ್ಯ ಕಾರ್ಯಕರ್ತರುಗಳಿಂದ ಸಕ್ರಿಯ ಸಮೀಕ್ಷೆ ನಡೆಸಬೇಕು. ಸಂಶಯಾಸ್ಪದ ‘ಸಿ’ ವರ್ಗದ ಪ್ರಕರಣಗಳಲ್ಲಿ ಗಂಟಲಿನ ದ್ರವ (ಸ್ವಾಬ್) ಮಾದರಿಯನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಬೇಕು. ಕ್ಷಿಪ್ರ ಕಾರ್ಯಾಚರಣೆ ತಂಡದ ಸದಸ್ಯರುಗಳ ವಿವರ ಹಾಗೂ ಕಾರ್ಯಾಚರಣೆ ನಡೆಸಿದ ಮಾಹಿತಿ ಬಗ್ಗೆ ನಿರಂತರವಾಗಿ ವರದಿ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರೋಗ-ಲಕ್ಷಣಗಳು ಪತ್ತೆಯಾದ ವ್ಯಕ್ತಿಯ ನಿಕಟವರ್ತಿಗಳು ಹಾಗೂ ಕಾಯಿಲೆ ಇರುವವರಿಗೆ ಮಾರ್ಗಸೂಚಿಯಂತೆ ಬಿ ಮತ್ತು ಸಿ ವರ್ಗದ ರೋಗಿಗಳಿಗೆ ಒಂದು ಗಂಟೆ ಒಳಗಾಗಿ ಟಾಮಿಫ್ಲೋ ಮಾತ್ರೆ ಸೇರಿದಂತೆ ಸೂಕ್ತ ಚಿಕಿತ್ಸೆ ನೀಡುವುದು. ಹಾಗೂ ‘ಎ’ (ಖಚಿತಪಟ್ಟಿರುವ) ವರ್ಗೀಕರಣದಲ್ಲಿರುವ ರೋಗಿಗಳ ಬಗ್ಗೆ ತೀವ್ರ ಎಚ್ಚರ ವಹಿಸಬೇಕು ಎಂದು ಸೂಚಿಸಲಾಗಿದೆ.
ರೋಗ ಲಕ್ಷಣವೇನು? ಮುಂಜಾಗ್ರತೆ ಹೇಗೆ?
1. ಶ್ವಾಸಕೋಶದ ಸೋಂಕು ಕಾಣಿಸಿಕೊಂಡು ನೆಗಡಿ, ಕೆಮ್ಮು, ಜ್ವರದ ಜೊತೆಗೆ ಉಸಿರಾಟದ ತೊಂದರೆ, ತೀವ್ರವಾದ ಮೈ-ಕೈ ನೋವು ಕಾಣಿಸಿಕೊಳ್ಳುತ್ತದೆ
2. ಇಂತಹ ಲಕ್ಷಣ ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಮುಂಜಾಗ್ರತೆಯಾಗಿ ಸೋಂಕುಪೀಡಿತರಿಂದ ದೂರವಿರಿ
3. ಶಂಕಿತ ರೋಗಿಯನ್ನು ಪ್ರತ್ಯೇಕವಾಗಿ ಆರೈಕೆ ಮಾಡಿ. ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ. ಕೆಮ್ಮುವಾಗ, ಸೀನುವಾಗ ಕರವಸ್ತ್ರಗಳನ್ನು ಬಳಸಿ
4. ಪೌಷ್ಟಿಕ ಹಾಗೂ ಶುಚಿಯಾದ ತಾಜಾ ಆಹಾರ ಸೇವಿಸಿ. ಚೆನ್ನಾಗಿ ನಿದ್ರಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಸೀನುವುದು ಮಾಡಬೇಡಿ
5. ಮನೆ ಹಾಗೂ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ. ಜನಸಂದಣಿ ಇರುವ ಕಡೆ ಮಾಸ್ಕ್ ಧರಿಸುವುದು ಸೂಕ್ತ: ಆರೋಗ್ಯ ಇಲಾಖೆ ಅಧಿಕಾರಿಗಳು