ಬೆಂಗಳೂರು :  ಬಹು ದಿನಗಳ ಬಳಿಕ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಉಭಯ ನಾಯಕರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ಭೇಟಿ ಕುತೂಹಲ ಮೂಡಿಸಿದೆ.

ಆದರೆ, ತಮ್ಮ ಭೇಟಿ ವೈಯಕ್ತಿಕವೇ ಹೊರತು ಬೇರೆ ಕಾರಣವಿಲ್ಲ. ನಾನು ಅವರನ್ನು ಕಾಂಗ್ರೆಸ್‌ಗೆ ಆಹ್ವಾನಿಸುವಷ್ಟುದೊಡ್ಡವನಲ್ಲ ಎಂದು ಸಚಿವ ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಬೆಂಗಳೂರಿನ ಸದಾಶಿವನಗರದ ಕೃಷ್ಣ ಅವರ ನಿವಾಸಕ್ಕೆ ಹೂಗುಚ್ಛದೊಂದಿಗೆ ಆಗಮಿಸಿದ ಶಿವಕುಮಾರ್‌ ಅವರು ಕೃಷ್ಣ ಅವರ ಕಾಲಿಗೆ ಎರಗಿ ನಮಸ್ಕರಿಸಿದರು. ಇದೇ ವೇಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಕೃಷ್ಣ ಅವರ ಜತೆ ಚರ್ಚೆ ನಡೆಸಿದರು.

ಸದಾಶಿವನಗರದಲ್ಲಿಯೇ ಬಹಳ ವರ್ಷಗಳಿಂದ ಇಬ್ಬರೂ ನಾಯಕರು ತಂಗಿದ್ದಾರೆ. ಕೃಷ್ಣ ಅವರು ಕಾಂಗ್ರೆಸ್‌ನಲ್ಲಿ ಇದ್ದ ಸಂದರ್ಭ ಆಗಾಗ ಭೇಟಿಕೊಟ್ಟು ಸಲಹೆ, ಸೂಚನೆ ಪಡೆಯುತ್ತಿದ್ದ ಶಿವಕುಮಾರ್‌, ಕೃಷ್ಣ ಅವರು ಬಿಜೆಪಿ ಸೇರಿದ ಮೇಲೆ ಕೆಲ ಸಮಯದಿಂದ ಭೇಟಿ ಮಾಡಿರಲಿಲ್ಲ. ಇದೀಗ ಅವರು ಭೇಟಿಮಾಡಿ ಆಶೀರ್ವಾದ ಪಡೆದಿರುವುದು ಕುತೂಹಲ ಮೂಡಿಸಿದೆ.

‘ಆಶೀರ್ವಾದ ಪಡೆಯುವುದು ಕರ್ತವ್ಯ’:  ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವಕುಮಾರ್‌, ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಭ್ಯ ಸಮಾಜದಲ್ಲಿ ನನಗೆ ರಾಜಕೀಯವಾಗಿ ಬೇಕಾದಷ್ಟುಮಾರ್ಗದರ್ಶನ ನೀಡಿ ಬೆಳೆಸಿರುವ ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದು ನನ್ನ ಕರ್ತವ್ಯ. ಹೀಗಾಗಿ ಭೇಟಿ ಮಾಡಿದ್ದೇನೆ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೃಷ್ಣ ಅವರನ್ನು ಕಾಂಗ್ರೆಸ್‌ಗೆ ಆಹ್ವಾನಿಸುವಷ್ಟುದೊಡ್ಡವನು ನಾನಲ್ಲ. ಮೇಕೆದಾಟು ಯೋಜನೆ ವಿಚಾರದಲ್ಲಿ ಹಲವು ಸಲಹೆಗಳನ್ನು ನೀಡಿದ್ದಾರೆ. ಯೋಜನೆ ಬಗ್ಗೆ ಸಲಹೆ ಪಡೆಯಲು ಮಾಜಿ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಸಭೆಯನ್ನು ಕರೆಯಲಾಗಿತ್ತು. ವೈಯಕ್ತಿಕ ಕಾರಣಗಳಿಗೆ ಕೃಷ್ಣ ಅವರು ಸಭೆಗೆ ಆಗಮಿಸಿರಲಿಲ್ಲ. ಅವರು ಕಾವೇರಿ ವಿಚಾರದಲ್ಲಿ ಸಾಕಷ್ಟುಸಂಕಟ ಅನುಭವಿಸಿದ್ದಾರೆ. ಕಾವೇರಿ ನದಿಗಾಗಿ ದುಡಿದಿದ್ದಾರೆ, ಕೋರ್ಟ್‌ನಲ್ಲಿ ಹೋರಾಟ ಮಾಡಿದ್ದಾರೆ. ಜತೆಗೆ ಅವರು ಹಾಗೂ ನನ್ನ ರಾಜಕೀಯ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಕೆಲವು ಸಲಹೆಗಳನ್ನು ಪಡೆದಿದ್ದೇನೆ ಎಂದರು.