Asianet Suvarna News Asianet Suvarna News

ಮೇಕೆದಾಟು ಡ್ಯಾಂ ನಿರ್ಮಾಣ : ಡಿಕೆಶಿ ಸ್ಥಳ ಪರಿಶೀಲನೆ

ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೇಕೆದಾಟುವಿನಲ್ಲಿ ಡ್ಯಾಂ ನಿರ್ಮಾಣ ಮಾಡಲಾಗುತ್ತಿದ್ದು, ಶುಕ್ರವಾರ ಸ್ಥಳಕ್ಕೆ ಸಚಿವ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

Karnataka Minister D K.Shivakumar visited To Mekedatu on Friday
Author
Bengaluru, First Published Dec 8, 2018, 8:32 AM IST

ಮೇಕೆದಾಟು (ಕನಕಪುರ) :  ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಯಿಂದ ರಾಜ್ಯ ಸರ್ಕಾರವು 440 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಮಾಡಲಿದೆ. ಜತೆಗೆ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಅನ್ವಯ ಕುಡಿಯುವ ನೀರಿನ ಬಳಕೆಗೂ ಯೋಜನೆ ಸಹಕಾರಿಯಾಗಲಿದೆ. ಆದರೆ, ಯೋಜನೆಯನ್ನು ಒಂದು ಎಕರೆಗೂ ಕೂಡ ನೀರಾವರಿಗೆ ಬಳಕೆ ಮಾಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ತಮಿಳುನಾಡು- ಕರ್ನಾಟಕ ರಾಜ್ಯಗಳ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿರುವ ಹಾಗೂ ರಾಜ್ಯದ ಪಾಲಿಗೆ ಸಾಕಷ್ಟುನಿರೀಕ್ಷೆ ಮೂಡಿಸಿರುವ ಮೇಕೆದಾಟು ಯೋಜನೆಯ ಸ್ಥಳಕ್ಕೆ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು.

ರಾಜ್ಯದ ಸರ್ಕಾರವು ಯೋಜನೆ ನಿರ್ಮಾಣ ಮಾಡುತ್ತಿರುವ ಪ್ರಮುಖ ಉದ್ದೇಶ ವಿದ್ಯುತ್‌ ಉತ್ಪಾದನೆ. ವಿದ್ಯುತ್‌ ಉತ್ಪಾದನೆ ಹಾಗೂ ಕುಡಿಯುವ ನೀರು ಪೂರೈಕೆ ಎರಡೂ ಕಾರಣಗಳನ್ನು ಯೋಜನೆಗೆ ನೀಡಲಾಗಿದ್ದರೂ, ಕುಡಿಯುವ ಉದ್ದೇಶಕ್ಕೆ ಈ ಯೋಜನೆಯ ಅಗತ್ಯವಿಲ್ಲ. ಕಾವೇರಿ ನ್ಯಾಯಾಧಿಕರಣವು ಕುಡಿಯುವ ಉದ್ದೇಶಕ್ಕೆ 18 ಟಿಎಂಸಿ ನೀರು ಹಂಚಿಕೆ ಮಾಡಿದೆ. ಇದರಲ್ಲಿ 4.5 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬೆಂಗಳೂರು ನಗರದ ಜನತೆಗೆ ಪೂರೈಸಬಹುದು. ಆದರೆ, ಈ ನೀರು ಪೂರೈಕೆ ಮಾಡಲು ಮೇಕೆದಾಟು ಯೋಜನೆಯೇ ಅಗತ್ಯವಿಲ್ಲ. ಬೇರೆ ಕಡೆಯಿಂದಲೂ ನೀರು ಪಂಪ್‌ ಮಾಡಿ ಪೂರೈಸಬಹುದು ಎಂದು ಹೇಳಿದರು.

ಉಳಿದಂತೆ ಮೇಕೆದಾಟು ಯೋಜನೆಯಿಂದ ಒಂದು ಎಕರೆ ನೀರಾವರಿ ಮಾಡಲೂ ಸಹ ಸಾಧ್ಯವಿಲ್ಲ. ಜಲಾಶಯದ ಕೆಳ ಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ ಕೃಷಿ ನೀರಾವರಿ ಜಮೀನು ಲಭ್ಯವಿಲ್ಲ. ಹೀಗಾಗಿ ನೀರಾವರಿಗೆ ಈ ನೀರು ಬಳಕೆ ಮಾಡಿಕೊಳ್ಳುವುದಿಲ್ಲ. ಇದನ್ನು ತಮಿಳುನಾಡು ಸರ್ಕಾರಕ್ಕೆ ತಿಳಿಸಿದರೂ ಅವರು ಉದ್ದೇಶಪೂರ್ವಕವಾಗಿ ಯೋಜನೆ ವಿರೋಧಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

5,912 ಕೋಟಿ ರು. ವೆಚ್ಚ:

ಯೋಜನೆಗೆ 5912 ಕೋಟಿ ರುಪಾಯಿ ಖರ್ಚು ಅಂದಾಜು ಮಾಡಲಾಗಿದೆ. ಇಂಧನ ಇಲಾಖೆ 2000 ಕೋಟಿ ರು. ಹಾಗೂ ಉಳಿದ ಮೊತ್ತ​ವನ್ನು ನೀರಾವರಿ ಇಲಾಖೆ ಭರಿಸಲಿದೆ. ಕೇಂದ್ರ ಸರ್ಕಾರ, ಪರಿಸರ ಮತ್ತು ಅರಣ್ಯ ಇಲಾಖೆ ಎಷ್ಟುಬೇಗ ಅನುಮತಿ ನೀಡುತ್ತವೆಯೋ ಅಷ್ಟುಬೇಗ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದರು.

ಕಾವೇರಿ ನದಿ ಪ್ರಾಧಿಕಾರ ಕರ್ನಾಟಕವು ತಮಿಳುನಾಡಿಗೆ ಬಿಡುಗಡೆ ಮಾಡಲು ನಿಗದಿ ಮಾಡಿರುವ ನೀರಿನ ಪ್ರಮಾಣ ವಾರ್ಷಿಕ 177.25 ಟಿಎಂಸಿ. ಆ ನೀರು ಬಿಡುಗಡೆಗೆ ಈ ಯೋಜನೆಯಿಂದ ಯಾವುದೇ ಅಡ್ಡಿ ಇಲ್ಲ. ಇನ್ನು ನಾವೇ ಕೈಯಿಂದ ಹಣ ಹಾಕಿ ತಮಿಳುನಾಡಿಗಾಗಿ 67 ಟಿಎಂಸಿ ನೀರು ಸಂಗ್ರಹ ಮಾಡಿಕೊಡುತ್ತಿದ್ದೇವೆ ಎಂದು ಹೇಳಿದರು.

ಈ ವೇಳೆ ಶಾಸಕರಾದ ಮಂಜು, ಡಾ.ರಂಗನಾಥ್‌, ವಿಧಾನಪರಿಷತ್‌ ಸದಸ್ಯ ಎಸ್‌.ರವಿ, ಹಿರಿಯ ಐಎಎಸ್‌ ಅಧಿಕಾರಿಗಳಾದ ರಾಕೇಶ್‌ ಸಿಂಗ್‌, ಸಂದೀಪ್‌ ಧವೆ, ಪೊನ್ನುರಾಜ್‌, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಕುಮಾರ್‌ ಹಾಜರಿದ್ದರು.

ತಮಿಳ್ನಾಡಿನ ಕಾರು ಬಂದಿದ್ದೇಕೆ?

ಸಚಿವರ ಪರಿಶೀಲನೆ ವೇಳೆ 2-3 ತಮಿಳುನಾಡು ನೋಂದಣಿಯ ಕಾರುಗಳು ಮೇಕೆದಾಟು ಯೋಜನಾ ಸ್ಥಳಕ್ಕೆ ಭೇಟಿ ನೀಡಿದ್ದವು. ತಮಿಳುನಾಡು ಸರ್ಕಾರದ ಪರವಾಗಿ ಯೋಜನೆಯ ಮಾಹಿತಿ ಸಂಗ್ರಹಿಸಲು ಇದರಲ್ಲಿ ಜನರು ಬಂದಿದ್ದರೇ ಅಥವಾ ಅವು ಪ್ರವಾಸಿಗರ ವಾಹನಗಳೇ ಎಂಬ ಕುತೂಹಲ ಮೂಡಿತ್ತು.

ಹೀಗಿರಲಿದೆ ಡ್ಯಾಂ

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂಗಮದಿಂದ ಎರಡೂವರೆ ಕಿಲೋಮೀಟರ್‌ ಅಂತರದಲ್ಲಿ ಎರಡು ಬೆಟ್ಟಗಳ ನಡುವೆ 100 ಮೀ. ಎತ್ತರ ಹಾಗೂ 660 ಮೀ ಅಗಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಲು ಸರ್ಕಾರ ಮುಂದಾಗಿದೆ.

ಐತಿಹಾಸಿಕ ಪ್ರಸಿದ್ಧ ಸ್ಥಳ

ರಾಜ್ಯದ ಪ್ರಮುಖ ಪ್ರವಾಸಿ ತಾಣದಲ್ಲಿ ಮೇಕೆದಾಟು ಕೂಡ ಒಂದು. ನದಿ ಪಕ್ಕದಲ್ಲಿಯೇ ಇರುವ ಮಡಿವಾಳೇಶ್ವರ ದೇಗುಲ ಪ್ರವಾಸಿಗರ ಮತ್ತೊಂದು ಆಕರ್ಷಣೆ. ಇಲ್ಲಿ ಮೇಕೆಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾಟುತ್ತಿದ್ದುದರಿಂದ ಮೇಕೆದಾಟು ಎಂಬ ಹೆಸರು ಬಂದಿದೆ ಹಾಗೂ ಮಡಿವಾಳೇಶ್ವರ ದೇವಾಲಯದ ತೇರು ಹಾಗೂ ಚಿನ್ನದ ಕಲಶ ತೇಲಿಕೊಂಡು ಬಂದು ಈ ಸ್ಥಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂಬ ಪ್ರತೀತಿ ಇದೆ.

ಮುತ್ತತ್ತಿ ಯುವಕರ ಆತಂಕ

ಮೇಕೆದಾಟು ಅಣೆಕಟ್ಟು ನಿರ್ಮಾಣಗೊಂಡರೆ ಪ್ರಸಿದ್ಧ ಮುತ್ತತ್ತಿ ಆಂಜನೇಯ ದೇವಸ್ಥಾನ ಸುತ್ತಮುತ್ತಲಿನ ವಾಸಸ್ಥಳಗಳು ಮುಳುಗಡೆಯಾಗಲಿವೆ ಎಂದು ಮುತ್ತತ್ತಿ ಯುವಕರು ಜಲಸಂಪನ್ಮೂಲ ಸಚಿವರ ಬಳಿ ಆತಂಕ ತೋಡಿಕೊಂಡರು. ಜಲಾಶಯ ನಿರ್ಮಾಣಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ 300ಕ್ಕೂ ಹೆಚ್ಚು ಕುಟುಂಬಗಳಿಗೆ ಇದರಿಂದ ತೊಂದರೆಯಾಗಲಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುವ ದೇವಸ್ಥಾನದ ಪರಿಸರ ಹಾಗೂ ಆರ್ಥಿಕ ಚಟುವಟಿಕೆಗಳನ್ನೇ ನೆಚ್ಚಿಕೊಂಡು ಜೀವನ ಮಾಡುತ್ತಿದ್ದೇವೆ. ಇದೀಗ ಯೋಜನೆ ಅನುಷ್ಠಾನಗೊಂಡರೆ ನಮ್ಮ ಬದುಕು ಕೂಡ ಮುಳುಗಡೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಿಂಷಾ ಜಲವಿದ್ಯುತ್‌ ಘಟಕ ಮುಳುಗಡೆ

ಅಣೆಕಟ್ಟು ನಿರ್ಮಾಣದಿಂದ ಸಂಗಮ, ಮುತ್ತತ್ತಿ ಪ್ರದೇಶಕ್ಕೆ ಆಪತ್ತು ಎದುರಾಗಲಿದೆ. ನೂರು ಮೀಟರ್‌ ಎತ್ತರದ ಡ್ಯಾಮ್‌ನಲ್ಲಿ ನೀರು ಭರ್ತಿಯಾದರೆ ಶಿಂಷಾ ಜಲವಿದ್ಯುತ್‌ ಯೋಜನೆ ಘಟಕದ ಕೆಲವು ಪ್ರದೇಶ ಮುಳುಗಡೆಯಾಗಲಿದೆ. ಮುಳುಗಡೆಯಾಗುವ ಘಟಕವನ್ನು ನವೀಕರಿಸಿ ಮೇಲ್ಮಟ್ಟದಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ. ಅಲ್ಲಿನ ಜಲ ವಿದ್ಯುದಾಗಾರವನ್ನು ನಾನು ವೀಕ್ಷಿಸಿದ್ದು, ಜಲಾಶಯ ನಿರ್ಮಾಣವಾದರೆ ಯೋಜನೆ ವ್ಯಾಪ್ತಿಯ ಒಂದೂವರೆ ಎಕರೆ ಪ್ರದೇಶದಲ್ಲಿ ನೀರು ನಿಲ್ಲಬಹುದು. ಇದರಿಂದ ಮುಳುಗಡೆಯಾಗುವ ಘಟಕವನ್ನು ನವೀಕರಣಗೊಳಿಸಿ ಎತ್ತರಿಸಲು ಅವಕಾಶವಿದೆ. ಇಡೀ ಯೋಜನೆ ಅಬಾಧಿತ ಎಂದರು.

ಯೋಜನೆ ಅಂದಾಜು ವೆಚ್ಚ- 5912 ಕೋಟಿ ರು.

ವಿದ್ಯುತ್‌ ಉತ್ಪಾದನೆ- 440 ಮೆಗಾ ವ್ಯಾಟ್‌

ನೀರು ಸಂಗ್ರಹ- 67 ಟಿಎಂಸಿ

ಜಲಾಶಯದ ಉದ್ದೇಶ- ಕುಡಿಯುವ ನೀರು, ವಿದ್ಯುತ್‌ ಉತ್ಪಾದನೆ

ಮುಳುಗಡೆಯಾಗುವ ಪ್ರದೇಶ - 4900 ಎಕರೆ

ಯೋಜನೆಯಿಂದ ಸಮಸ್ಯೆ ಇಲ್ಲ:

ಯೋಜನೆಯಿಂದ ತಮಿಳುನಾಡು ರಾಜ್ಯದ ಜನತೆಗೆ ಅಥವಾ ಮೇಕೆದಾಟು ಸುತ್ತಮುತ್ತಲಿನ ನಮ್ಮ ರಾಜ್ಯದ ಜನತೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ರಾಜ್ಯದ ಜನತೆಗೆ ಸೇರಿದ ಆಸ್ತಿಗಳು ಮುಳುಗಡೆಯಾದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಹೀಗಾಗಿ ಎರಡೂ ರಾಜ್ಯದ ಜನರು ಹೆದರುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ವರದಿ :  ಶಿವ​ಮಾದು ಎನ್‌.​ಎಲ್‌

Follow Us:
Download App:
  • android
  • ios