ಬೆಂಗಳೂರು[ಅ. 10]  ವಿಧಾನಸೌಧದ ಕಾರ್ಯಕಲಾಪ ವರದಿಗೆ ಮಾಧ್ಯಮಗಳಿಗೆ ಹೇರಿರುವ ನಿರ್ಬಂಧ ವಿರೋಧಿಸಿ ಪತ್ರಕರ್ತರು ಶುಕ್ರವಾರ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ. ಬೆಂಗಳೂರಿನ  ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹಿಂಪಡೆಯಬೇಕು ಎಂದು ಒತ್ತಾಯ ಮಾಡಲಿದ್ದಾರೆ. 

ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಬೆಳಗ್ಗೆ 9 ಗಂಟೆಗೆ ಪತ್ರಕರ್ತರು ಸಮಾವೇಶಗೊಳ್ಳಿದ್ದಾರೆ. ಟಿವಿ ಮತ್ತು ಮುದ್ರಣ ಮಾಧ್ಯಮದ ಸಂಪಾದಕರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್ ಕ್ಲಬ್ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಕಲಾಪಕ್ಕೆ ಕ್ಯಾಮರಾ, ಮೊಬೈಲ್ ಒಯ್ಯಂಗಿಲ್ಲ..ಮಾಧ್ಯಮಗಳು ಮಾತೇ ಎತ್ತಂಗಿಲ್ಲ!

ಪತ್ರಕರ್ತರಾದ ಆನಂದ್ ಪಿ.ಬೈದನಮನೆ, ಎಚ್‌.ವಿ.ಕಿರಣ್, ಸದಾಶಿವ ಶೆಣೈ ಸೇರಿದಂತೆ ಎಲ್ಲ ಖಾಸಗಿ ಟಿವಿ ಮತ್ತು ಮುದ್ರಣ ಮಾಧ್ಯಮದ ಪ್ರತಿನಿಧಿಗಳು ಆದೇಶ ಹಿಂಪಡೆಯಲು ಒತ್ತಾಯಿಸಲಿದ್ದಾರೆ.

ವಿಧಾನಸಭಾ ಕಲಾಪವನ್ನು ಚಿತ್ರೀಕರಿಸುವ ಸಂಬಂಧ ಖಾಸಗಿ ಮಾಧ್ಯಮಗಳಿಗೆ ರಾಜ್ಯ ಸರ್ಕಾರ ಭಾಗಶಃ ನಿರ್ಬಂಧ ಹಾಕಿದೆ.  ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆದೇಶದನ್ವಯ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು ದೂರದರ್ಶನ ನೀಡುವ ವಿಡಿಯೋಗಳನ್ನು ಖಾಸಗಿ ಟಿವಿ ಮಾಧ್ಯಮಗಳು ಪಡೆದುಕೊಳ್ಳಬೇಕು. ವಾರ್ತಾ ಇಲಾಖೆ ನೀಡುವ ಪೋಟೋಗಳನ್ನು  ಮುದ್ರಣ ಮಾಧ್ಯಮದವರು ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿತ್ತು. ಜತೆಗೆ ವರದಿಗಾರರು ವಿಧಾನಸೌಧಕ್ಕೆ ಮೊಬೈಲ್,ಲ್ಯಾಪ್  ಟಾಪ್ ತರುವಂತೆಯೂ ಇಲ್ಲ ಎಂದು ಹೇಳಲಾಗಿತ್ತು.