ಶಿವಮೊಗ್ಗ :  ವಿಧಾನ ಮಂಡಲದ ಅಧಿವೇಶನಕ್ಕೆ ಕಡಿಮೆ ಸಮಯ ಮೀಸಲಿಟ್ಟಿರುವುದು ಅನ್ಯಾಯ ಎಂದು ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ಹೊರಹಾಕಿದ್ದಾರೆ.   11 ದಿನದಲ್ಲಿ ಯಾವುದೆ ವಿಷಯದ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಭಾನುವಾರ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಜ್ವಲಂತ ಸಮಸ್ಯೆಗಳು ಇದ್ದು ಸರ್ಕಾರದ ಮಂತ್ರಿಗಳು ಯಾವುದೇ ಹಳ್ಳಿಗಳಿಗೂ ಭೇಟಿ ನೀಡಿ ಸಮಸ್ಯೆ ತಿಳಿಯುವ ಪ್ರಯತ್ನ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 

ಸಾಲ ಮನ್ನಾ : ಇನ್ನು ರಾಜ್ಯ ಸರ್ಕಾರ ಮಾಡಿರುವ ರೈತರ ಸಾಲಮನ್ನಾ ಒಂದೆರಡು ಕಡೆ ಕೊಟ್ಟು  ಆಯಾ ಸಂದರ್ಭದಲ್ಲಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರ. ಯಾವ ಸಮಸ್ಯೆಗಳನ್ನೂ ಕೂಡ ಸರ್ಕಾರ  ಗಮನಿಸುತ್ತಿಲ್ಲ.  ಒಂದು ರೀತಿಯಲ್ಲಿ ಲೂಟಿ ಹೊಡೆಯಲು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಇನ್ನು ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಅಧಿವೇಶನಕ್ಕೆ ಗೈರು ಹಾಜರಾಗುತ್ತಾರೆಂದರೆ ಅದರ ಗಂಭೀರತೆ ಅವರಿಲ್ಲ. ಇದನ್ನೇ ಉಳಿದವರು ಅನುಸರಿಸುತ್ತಾರೆ. ವಿದೇಶಿ ಪ್ರವಾಸದ ಬಗ್ಗೆ ಕೇಳಿದರೆ ನನ್ನ ಸ್ವಂತಕ್ಕೆ ಹೋಗುತ್ತೇನೆ ಯಾವನಿಗೆ ಕೇಳ ಬೇಕು ಎಂದು ಭಂಡತನದ ಉತ್ತರ ಕೊಡುತ್ತಾರೆ. ಸರ್ಕಾರದ ನೇತೃತ್ವ ವಹಿಸಿದ ವ್ಯಕ್ತಿಗಳ ಬಾಯಲ್ಲಿ ಇಂತಹ ಉತ್ತರ ಬರುತ್ತಿರುವುದು ನಮ್ಮ ದುರಾದೃಷ್ಟ ಎಂದು ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. 

ಪಂಚರಾಜ್ಯ ಫಲಿತಾಂಶ : ಇನ್ನು ಪಂಚರಾಜ್ಯ ಚುನಾವಣೆ ಫಲಿತಾಂಶ ಬಗ್ಗೆಯೂ ಕೂಡ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಬಿಜೆಪಿ ಹೆಚ್ಚು ರಾಜ್ಯದಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ನಾಲ್ಕು ರಾಜ್ಯಗಳಾದ ಮಧ್ಯ ಪ್ರದೇಶ, ತೆಲಂಗಾಣ, ರಾಜಸ್ಥಾನ, ಮಿಜೋರಾಂ ನಲ್ಲಿ ಚುನಾವಣೆ ಮುಕ್ತಾಯವಾಗಿದ್ದು ಇದೇ ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟವಾಗುತ್ತಿದೆ.