ಬೆಂಗಳೂರು :  6 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣದ ಅಪರಾಧಿಗೆ ಬೆಂಗಳೂರಿನ 54ನೇ ಸೆಷನ್ಸ್‌ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶಿದೆ. 12 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದರೆ ಅಪರಾಧಿಗೆ ಗಲ್ಲು ವಿಧಿಸುವ ಸುಗ್ರೀವಾಜ್ಞೆ ಜಾರಿಗೆ ಬಂದ ಬಳಿಕವೇ ಈ ತೀರ್ಪು ಬಂದಿರುವುದು ವಿಶೇಷ.

ಆರೋಪಕ್ಕೆ ಸಂಬಂಧಿಸಿದಂತೆ ಅಪರಾಧಿಯ ವಿರುದ್ಧ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಗಣಿಸಿರುವ ನ್ಯಾಯಾಲಯದ ನ್ಯಾಯಾಧೀಶರಾದ ಲತಾಕುಮಾರಿ ಅವರು ಅಪರಾಧಿ ಅನಿಲ್‌ ಬಳಿಗಾರ್‌ ಎಂಬಾತನಿಗೆ ಗಲ್ಲು ಶಿಕ್ಷೆ ವಿಧಿಸಿ ಶನಿವಾರ ಆದೇಶಿಸಿದ್ದಾರೆ.

ಅತ್ಯಾಚಾರ ಸೇರಿದಂತೆ ಯಾವುದೇ ಪ್ರಕರಣದಲ್ಲಿ ಸೆಷನ್ಸ್‌ ನ್ಯಾಯಾಲಯ ವಿಧಿಸುವ ಗಲ್ಲು ಶಿಕ್ಷೆಯನ್ನು ಹೈಕೋರ್ಟ್‌ ದೃಢೀಕರಿಸಬೇಕು. ಹಾಗಾಗಿ ಈ ಆದೇಶವು ಹೈಕೋರ್ಟ್‌ ರವಾನೆಯಾಗಲಿದ್ದು, ಹೈಕೋರ್ಟ್‌ನ ನ್ಯಾಯಮೂರ್ತಿಗಳು ಘಟನೆ ಸಂಬಂಧ ಆರೋಪಗಳು ಹಾಗೂ ಸಾಕ್ಷಾಧಾರಗಳನ್ನು ಪರಿಶೀಲಿಸಿ ಶಿಕ್ಷೆಯನ್ನು ದೃಢೀಕರಿಸಲಿದ್ದಾರೆ.

ಅಪರಾಧಿ ಮಾಡಿದ್ದೇನು?:

2017 ಏಪ್ರಿಲ್‌ 19 ರಂದು ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ವೀರಭದ್ರ ನಗರದ ದಂಪತಿಯ ಆರು ವರ್ಷದ ಬಾಲಕಿ ನಾಪತ್ತೆಯಾಗಿದ್ದರು. ಅಂದು ಸಂಜೆ ಅಪರಾಧಿ ಅನಿಲ್‌ ಬಳಿಗಾರ್‌ ಮನೆ ಮುಂದೆ ಬಾಲಕಿ ಆಟವಾಡುತ್ತಿದ್ದನ್ನು ಸ್ಥಳೀಯರು ನೋಡಿದ್ದರು. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಬಳಿಕ ಬಳಿಕ ಅನಿಲ್‌ ನಾಪತ್ತೆಯಾಗಿದ್ದ. ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದ ಗಿರಿನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

ಪ್ರಕರಣ ಸಂಬಂಧ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಚಿನ್ನ ವೆಂಕಟರಮಣಪ್ಪ, ‘ಘಟನೆಗೂ ಮುನ್ನ ಆರೋಪಿ ಅನಿಲ್‌ ಬಳಿಗಾರ್‌ ಮನೆ ಮುಂದೆ ಮೃತ ಬಾಲಕಿ ಆಟವಾಡುತ್ತಿದ್ದನ್ನು ಸ್ಥಳೀಯರು ಗಮನಿಸಿದ್ದರು. ಘಟನೆ ಬಳಿಕ ಆರೋಪಿ ಊರಿಗೆ ಹೋಗುತ್ತಿರುವುದಾಗಿ ಹೇಳಿ ನಾಪತ್ತೆಯಾಗಿದ್ದ. ಅಲ್ಲದೆ, ತನ್ನ ಮೊಬೈಲ್‌ ಫೋನ್‌ನ್ನು ಸ್ವಿಚ್‌ಆಫ್‌ ಮಾಡಿಕೊಂಡು ತಲೆ ಮರೆಸಿಕೊಂಡಿದ್ದ’ ಎಂದು ವಾದ ಮಂಡಿಸಿದರು.

‘ಅನಿಲ್‌ ಬಳಿಗಾರ್‌ ಬಾಲಕಿಯನ್ನು ಮನೆಗೆ ಕರೆದುಕೊಂಡು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಅಲ್ಲದೆ, ತಾನು ವಾಸವಿದ್ದ ಮನೆಯ ಮಂಚದ ಕೆಳಗಿನ ಪೆಟ್ಟಿಗೆಯೊಂದರಲ್ಲಿ ಮೃತ ಬಾಲಕಿಯ ಶವವನ್ನಿಟ್ಟು ನಾಪತ್ತೆಯಾಗಿದ್ದ ಎಂಬ ಅಂಶಗಳು ಪೊಲೀಸ್‌ ತನಿಖೆಯಿಂದ ಸಾಬೀತಾಗಿದೆ’ ಎಂದು ವಾದ ಮಂಡಿಸಿದರು. ಜೊತೆಗೆ ಆರೋಪಿಯ ವಿರುದ್ಧ ಎಲ್ಲ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿದ್ದರು. ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ್ದ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ.