ಕೋಲ್ಕತ್ತಾ(ಜ.19): ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಇಂದು ಪ್ರಧಾನಿ ನರೇಂದ್ರ ಮೋದಿ ವಿರೋಧಿ ಬಣ ರಾಜಕೀಯ ನಾಯಕರಿಂದ ತುಂಬಿ ಹೋಗಿತ್ತು. ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ತಮಿಳುನಾಡಿನ ಎಲ್ಲಾ ಪ್ರಮುಖ ಪ್ರಾದೇಶಿಕ ರಾಜಕೀಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಅದರಂತೆ ವಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಕರ್ನಾಟಕದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಭಾಗವಹಿಸಿದ್ದರು. ಈ ವೇಳೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬೆಂಗಾಳಿ ಭಾಷೆಯಲ್ಲಿ ಭಾಷಣ ಆರಂಭಿಸಿದ್ದು ಗಮನ ಸೆಳೆಯಿತು.

"

ಶುಭೋ ಅಪರಾಹ್ನವೋ..ಎಂದು ಬೆಂಗಾಳಿಯಲ್ಲಿ ಭಾಷಣ ಆರಂಭಿಸಿದ ಕುಮಾರಸ್ವಾಮಿ, ಕೆಲ ಕ್ಷಣಗಳವರೆಗೆ ಬೆಂಗಾಳಿಯಲ್ಲಿ ಮಾತನಾಡಿ ನೆರೆದ ಜನರಿಂದ ಚಪ್ಪಾಳೆ ಗಿಟ್ಟಿಸಿದರು. ತದನಂತರ ಇಂಗ್ಲಿಷ್‌ನಲ್ಲಿ ಭಾಷಣ ಮುಂದುವರೆಸಿದ ಸಿಎಂ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಇದಕ್ಕೂ ಮೊದಲು ಸಿಎಂ ಕುಮಾರಸ್ವಾಮಿ ಅವರನ್ನು ಜನತೆಗೆ ಪರಿಚಯಿಸಿದ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕರ್ನಾಟಕದಲ್ಲಿ ಬಿಜೆಪಿ ಕುಮಾರಸ್ವಾಮಿ ಸರ್ಕಾರವನ್ನು ಉರುಳಿಸಲು ಪ್ರಯತ್ನ ನಡೆಸಿ ವಿಫಲವಾಗಿದೆ ಎಂದು ಹೇಳಿದರು.