ಮಡಿಕೇರಿ :  ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ಮನೆ, ಆಸ್ತಿ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿರುವ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಚಾಲನೆ ನೀಡಿದರು. 

ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿ ಗುರುತಿಸಲಾಗಿರುವ ಸ್ಥಳದಲ್ಲಿ ಮನೆ ನಿರ್ಮಾಣಕ್ಕೆ ಶಂಶುಸ್ಥಾಪನೆ ನೆರವೇರಿಸಿದರು. ಪ್ರಕೃತಿ ವಿಕೋಪ ಸಂತ್ರಸ್ತರಿಗೆ ರಾಜೀವ್‌ ಗಾಂಧಿ ವಸತಿ ನಿಗಮದಿಂದ 2 ಬೆಡ್‌ರೂಂನ ಸುಮಾರು 840 ಮನೆಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ.

ನಂತರ ಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ​ಯಲ್ಲಿ .202.23 ಕೋಟಿ ಸಂಗ್ರಹವಾಗಿದ್ದು, ಇದನ್ನು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು. ಕೇಂದ್ರ ಸರ್ಕಾರದಿಂದ .540 ಕೋಟಿ ಪರಿಹಾರ ಬಂದಿದ್ದು, ಎನ್‌ಡಿಆರ್‌ಎಫ್‌ ನಿರ್ದೇಶನದಂತೆ ರಾಜ್ಯದ ಎಂಟು ಜಿಲ್ಲೆಗಳಿಗೆ ಬಳಸಲಾಗುವುದು ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಸರ್ಕಾರ ವೇಗವಾಗಿ ಸ್ಪಂದಿಸುವ ಕೆಲಸ ಮಾಡಿದೆ. ತಕ್ಷಣ .85 ಕೋಟಿ ಬಿಡುಗಡೆ ಮಾಡಿ, ತಾತ್ಕಾಲಿಕ ರಸ್ತೆ ಕಾಮಗಾರಿ ಮಾಡಿದೆ. ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಎನ್‌ಡಿಆರ್‌ಎಫ್‌ ಪರಿಹಾರ ಬದಿಗಿಟ್ಟು ತಕ್ಷಣ ಒಂದು ಲಕ್ಷ ರುಪಾಯಿ ಪರಿಹಾರ ನೀಡಿದ್ದೇವೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದ ಯು.ಟಿ.ಖಾದರ್‌, ಸಾ.ರಾ.ಮಹೇಶ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸರ್ಕಾರಿ ನೌಕರರಿಂದ .100 ಕೋಟಿ:

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಕೊಡಗು ಪ್ರಕೃತಿ ವಿಕೋಪ ಸಂತ್ರಸ್ತರ ನಿಧಿಗೆ .100 ಕೋಟಿ ನೆರವು ನೀಡಲಾಯಿತು. ಜಂಬೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸರ್ಕಾರಿ ನೌಕರರ ಸಂಘದ ಪ್ರಮುಖರು ಬೃಹತ್‌ ಮೊತ್ತದ ಚೆಕ್‌ ಅನ್ನು ವೇದಿಕೆಯಲ್ಲಿ ಹಸ್ತಾಂತರಿಸಿದರು.

ತಮ್ಮ ಭಾಷಣದ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತನಾಡಿ, ಸರ್ಕಾರಿ ನೌಕರರು ಚೆಕ್‌ನೊಂದಿಗೆ ಬೇಡಿಕೆಯ ಪತ್ರವನ್ನೂ ನೀಡಿದ್ದಾರೆ. ಆದ್ದರಿಂದ ಸರ್ಕಾರಿ ನೌಕರರ ಬೇಡಿಕೆಯನ್ನು ಗೌರವಿಸಲಾಗುವುದು. ತಮ್ಮ ನೆರವನ್ನು ಮನೆ ಕಟ್ಟಲು ಬಳಕೆ ಮಾಡಿ ಎಂಬ ಅಭಿಪ್ರಾಯ ವ್ಯಕ್ತಗೊಂಡಿದ್ದು, ಸರ್ಕಾರಿ ನೌಕರರ ಲೋಗೋ ಬಳಸುವ ಸಲಹೆ ನೀಡಿದ್ದಾರೆ. ಅದರಂತೆ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.