ಬೆಂಗಳೂರು[ಜೂ.06]: ಜೀವನದಲ್ಲಿ ಜಿಗುಪ್ಸೆಗೊಂಡು ಖಾಸಗಿ ಸುದ್ದಿವಾಹಿನಿ ವರದಿಗಾರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೇವಸಂದ್ರದ ಗೀತಾ ಕ್ಲಿನಿಕ್‌ ರಸ್ತೆಯಲ್ಲಿ ಬುಧವಾರ ನಡೆದಿದೆ.

ದೇವಸಂದ್ರದ ನಿವಾಸಿ ನಯಾಜ್‌ ಖಾನ್‌ (40) ಮೃತರು. ಮನೆಯ ತಮ್ಮ ಕೊಠಡಿಯಲ್ಲಿ ನಸುಕಿನ 3ರ ಸುಮಾರಿಗೆ ನಯಾಜ್‌ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ 7ಕ್ಕೆ ಕೊಠಡಿಗೆ ಕುಟುಂಬ ಸದಸ್ಯರು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ನಯಾಜ್‌ ಅವರು, ತಮ್ಮ ಪತ್ನಿ ಮತ್ತು ನಾಲ್ವರು ಮಕ್ಕಳ ಜತೆ ದೇವಸಂದ್ರದಲ್ಲಿ ನೆಲೆಸಿದ್ದರು. ಪ್ರಜಾ ಸುದ್ದಿವಾಹಿನಿಯ ಕೆ.ಆರ್‌.ಪುರ ಭಾಗದ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ಅವರು, ಇತ್ತೀಚೆಗೆ ವೈಯಕ್ತಿಕ ಕಾರಣಗಳಿಗೆ ತೀವ್ರ ನೊಂದಿದ್ದರು. ಅನಾರೋಗ್ಯಕ್ಕೀಡಾಗಿದ್ದ ಮಗನ ವಿಚಾರವಾಗಿ ನಯಾಜ್‌ ಖಿನ್ನತೆಗೊಳಗಾಗಿದ್ದರು. ಇದೇ ಯಾತನೆಯಲ್ಲೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತರ ಪತ್ನಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.