ಹೊಸಪೇಟೆ :  ಶಾಸಕ ಆನಂದ್‌ ಸಿಂಗ್‌ ಮೇಲಿನ ಹಲ್ಲೆ ಆರೋಪದಲ್ಲಿ ಬಂಧನ ಭೀತಿಯಿಂದಾಗಿ ನಾಪತ್ತೆಯಾಗಿರುವ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಪರ ಕಾಂಗ್ರೆಸ್‌ನ ಅತೃಪ್ತ ಶಾಸಕ, ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಪರ ಬ್ಯಾಟ್‌ ಬೀಸಿದ್ದಾರೆ. ರೆಸಾರ್ಟ್‌ ಗಲಾಟೆ ಪ್ರಕರಣದಲ್ಲಿ ಗಣೇಶ್‌ರನ್ನು ಕಾಂಗ್ರೆಸ್‌ನ ಪ್ರಭಾವಿ ನಾಯಕರ ಕೈವಾಡದಿಂದ ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ಗಣೇಶ್‌ ಈ ಸಮ್ಮಿಶ್ರ ಸರ್ಕಾರದಲ್ಲೇ ಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಹೊಸಪೇಟೆಯ ಚಪ್ಪರದಳ್ಳಿಯಲ್ಲಿರುವ ಶಾಸಕ ಗಣೇಶ್‌ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ಗಣೇಶ್‌ ಪತ್ನಿ ಶ್ರೀದೇವಿ ಅವರೊಂದಿಗೆ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮೊದಲ ಬಾರಿಗೆ ಶಾಸಕರಾದವರು ಮಂತ್ರಿಯಾಗಬಾರದು ಎಂದು ಎಲ್ಲೂ ಹೇಳಿಲ್ಲ. ರಾಜ್ಯ ರಾಜಕಾರಣ ನಿಂತ ನೀರಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದ ಅವರು, ಗಣೇಶ್‌ ಇದೇ ಸರ್ಕಾರದಲ್ಲಿ ಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು. ಇದೇ ವೇಳೆ ತಮ್ಮ ಅಸಮಾಧಾನ ಇನ್ನೂ ತಿಳಿಯಾಗಿಲ್ಲ, ಆದ​ರೆ ಪಕ್ಷ ಬಿಡಲ್ಲ ಎಂದು ರಮೇಶ್‌ ಸ್ಪಷ್ಟಪಡಿಸಿದರು.

ಗಣೇಶ್‌ಗೆ ಅನ್ಯಾಯ:  ರೆಸಾರ್ಟ್‌ ಹಲ್ಲೆ ಪ್ರಕರಣದಲ್ಲಿ ಗಣೇಶ್‌ಗೆ ಅನ್ಯಾಯವಾಗಿದ್ದು, ಅವರನ್ನು ಬಲಿಪಶು ಮಾಡಲಾಗುತ್ತಿದೆ. ಶಾಸಕರ ನಡುವಿನ ಗಲಾಟೆಯ ಸತ್ಯ ಸಂಗತಿಯನ್ನು ಶಾಸಕ ಭೀಮಾನಾಯ್ಕ್ ಅವರೇ ಹೇಳಬೇಕು. ಗಲಾಟೆಯಲ್ಲಿ ಗಣೇಶ್‌ ಮೇಲೂ ಹಲ್ಲೆಯಾಗಿದೆ. ಗಣೇಶ್‌ಗೆ ಪೆಟ್ಟು ಬಿದ್ದಿರುವ ಬಗ್ಗೆ ಫೋನ್‌ ಮೂಲಕ ನನಗೆ ಹೇಳಿದ್ದಾರೆ. ಕೈ ಬಾವು ಬಂದಿದೆ. ಪ್ರಭಾವಿ ನಾಯಕರ ಕೈವಾಡದಿಂದ ಗಣೇಶರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ ಇತರರ ವಿರುದ್ಧ ಕಿಡಿಕಾರಿದರು.

ಗಲಾಟೆ ವೇಳೆ ಗಣೇಶರ ಜಾತಿ ನಿಂದನೆ ಮಾಡಲಾಗಿದೆ. ಗಣೇಶ್‌ ಅವರು ಶಾಸಕ ಆನಂದ್‌ ಸಿಂಗ್‌ ವಿರುದ್ಧ ದೂರು ನೀಡಲು ಮುಂದಾದಾಗ ಕಾಂಗ್ರೆಸ್‌ನ ಕೆಲ ಪ್ರಭಾವಿ ಮುಖಂಡರು ಅದನ್ನು ತಡೆದಿದ್ದಾರೆ. ನಾನೂ ಜಾತಿ ನಿಂದನೆ ದೂರು ಕೊಡುವುದು ಬೇಡ ಎಂದು ಗಣೇಶ್‌ಗೆ ದೂರವಾಣಿಯಲ್ಲಿ ಹೇಳಿದ್ದೆ ಎಂದು ರಮೇಶ್‌ ತಿಳಿಸಿದರು.

ಆನಂದ್‌ ಸಿಂಗ್‌ ಸಹ ಗಣೇಶ್‌ ಮೇಲೆ ಕೇಸು ಹಾಕಬೇಕೆಂದು ಅಂದುಕೊಂಡಿರಲಿಲ್ಲ. ಪ್ರಭಾವಿ ನಾಯಕರ ಒತ್ತಡಕ್ಕೆ ಮಣಿದು ಗಣೇಶ್‌ ವಿರುದ್ಧ ದೂರು ಕೊಟ್ಟಿದ್ದಾರೆ. ಗಣೇಶ್‌ ಮೇಲಿನ ಕೇಸ್‌ ವಾಪಸ್‌ ತೆಗೆದುಕೊಳ್ಳಬೇಕು. ನ್ಯಾಯಸಮ್ಮತ ತನಿಖೆಯಾಗಬೇಕು.

- ರಮೇಶ್‌ ಜಾರಕಿಹೊಳಿ, ಮಾಜಿ ಸಚಿವ

ಗಣೇಶ್‌ ಯಾಕೆ ಶರಣಾಗತರಾಗಬೇಕು? ಅಲ್ಲಿ (​ರೆ​ಸಾ​ರ್ಟ್‌​) ನಡೆದಿರುವ ನಿಜವಾದ ಘಟನೆ ಯಾರಿಗೂ ಗೊತ್ತಿಲ್ಲ. ಗಣೇಶ್‌ ಮತ್ತು ಭೀಮಾನಾಯ್ಕ್, ಆನಂದ್‌ ಸಿಂಗ್‌ ಮೂವರೇ ಘಟನೆ ವೇಳೆ ಇದ್ದರು. ಹೀಗಾಗಿ ಸತ್ಯ ಸಂಗತಿಯನ್ನು ಭೀಮಾನಾಯ್ಕ್ ಅವರೇ ಬ​ಹಿರಂಗಪಡಿಸಬೇಕು. ಭೀಮಾನಾಯ್ಕ್ ಮತ್ತು ಗಣೇಶ್‌ ಒಳ್ಳೆಯ ಮಿತ್ರರು. ಭೀಮಾನಾಯ್ಕ್ ಅವರು ಗಣೇಶ್‌ ಪರ ನಿಲ್ಲಬೇಕಾಗಿತ್ತು. ಆದರೆ ಯಾಕೆ ಹಿಂದೆ ಸರಿದಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಗಣೇಶ್‌ಗೆ ಅನ್ಯಾಯವಾಗುತ್ತಿರುವುದನ್ನು ಇಡೀ ರಾಜ್ಯದ ಜನ ನೋಡುತ್ತಿದ್ದಾರೆ ಎಂದರು.

ರೆಸಾರ್ಟ್‌ ಹಲ್ಲೆ ಪ್ರಕರಣದಲ್ಲಿ ಗಣೇಶ್‌ ವಿರುದ್ಧದ ಕೊಲೆ ಯತ್ನ ಪ್ರಕರಣ ವಾಪಸು ಪಡೆಯಬೇಕು ಎಂದು ಸಿಎಲ್‌ಪಿ ಸಭೆಯಲ್ಲಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ, ಗೃಹ ಸಚಿವರ ಮೇಲೂ ಒತ್ತಡ ಹಾಕಿದ್ದೇನೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕು. ಘಟನೆಯಲ್ಲಿ ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಗಣೇಶ್‌ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆ ಆಗಲಿ. ಸುಮ್ಮನೆ ಬಲಿಪಶು ಆಗಬಾರದು ಎಂದರು.