ಲಖನೌ[ಅ.20]: ಹಿಂದು ಸಮಾಜ ಪಕ್ಷದ ಮುಖಂಡ ಕಮಲೇಶ್‌ ತಿವಾರಿ ಹತ್ಯೆಗೆ ಸಂಬಂಧಿಸಿದಂತೆ ಗುಜರಾತ್‌ನ ಸೂರತ್‌ನಲ್ಲಿ ಮೂವರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಶಂಕಿತರು ಮೂಲಭೂತವಾದಿಗಳಾಗಿದ್ದರು ಮತ್ತು 2015ರಲ್ಲಿ ಪ್ರವಾದಿ ಮಹಮ್ಮದ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಕಮಲೇಶ್‌ ತಿವಾರಿಯನ್ನು ಗುರಿಯಾಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ಪೈಕಿ ಬಿಹಾರದ ಬಿಜ್ನೂರ್‌ ನಿವಾಸಿಗಳಾದ ಮೊಹಮ್ಮದ್‌ ಮುಫ್ತಿ, ನಯೀಮ್‌ ಕಾಜ್ಮಿ ಮತ್ತು ಇಮಾಮ್‌ ಮೌಲಾನಾ ಅನ್ವರುಲ್‌ ಹಕ್‌ 2016ರಲ್ಲಿ ತಿವಾರಿ ತಲೆಗೆ 1.6 ಕೋಟಿ ರು. ಘೋಷಿಸಿದ್ದರು. ಜೀವ ಬೆದರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ನೀಡುವಂತೆ ತಿವಾರಿ ಕುಟುಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಲ್ಲಿ ಕೇಳಿಕೊಂಡಿತ್ತು. ಆದರೆ, ಸರ್ಕಾರ ಸೂಕ್ತ ಭದ್ರತೆ ಒದಗಿಸಿರಲಿಲ್ಲ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಹಿಂದು ಮಹಾಸಭಾ ಮುಖಂಡನ ಹತ್ಯೆ: ಕೆಂಪು, ಕೇಸರಿ ಉಡುಪು ಧರಿಸಿದ್ದ ಹಂತಕರು

ಹಂತಕರ ಕೊಲೆಗೆ 1 ಕೋಟಿ ರು.ಘೋಷಣೆ;

ಇದೇ ವೇಳೆ ಕಮಲೇಶ್‌ ತಿವಾರಿ ಕೊಲೆ ಪ್ರಕರಣದಲ್ಲಿ ಹಂತರ ವಿರುದ್ಧ ನ್ಯಾಯ ಪಾಲನೆ ಆಗುವ ನಂಬಿಕೆ ಇಲ್ಲ. ಕೊಲೆ ಆರೋಪದಲ್ಲಿ ಬಂಧಿತರಾದ ಮೂವರ ಶಿರಚ್ಛೇದ ಮಾಡಿದರೆ 1 ಕೋಟಿ ರು. ನೀಡಲಾಗುವುದು ಎಂದು ಶಿವಸೇನೆ ಮುಖಂಡ ಅರುಣ್‌ ಪಾಠಕ್‌ ಘೋಷಿಸಿದ್ದಾರೆ.