ಭೋಪಾಲ್‌: ಮಧ್ಯಪ್ರದೇಶದ ಮುಖ್ಯಮಂತ್ರಿ ಆಯ್ಕೆ ಹೊಣೆಯನ್ನು ಕಾಂಗ್ರೆಸ್‌ನ ನೂತನ ಶಾಸಕರು ಪಕ್ಷಾಧ್ಯಕ್ಷ ರಾಹುಲ್‌ ಗಾಂಧಿ ಅವರ ವಿವೇಚನೆಗೆ ಬಿಟ್ಟುಕೊಟ್ಟಿದ್ದಾರೆ. ಗುರುವಾರ ಅಂತಿಮ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಬುಧವಾರ ಸಿಎಂ ಆಯ್ಕೆಗೆ ಸಂಬಂಧಿಸಿದಂತೆ ಇಡೀ ದಿನ ಸರಣಿ ಸಭೆಗಳು ನಡೆದವು. ಒಂದು ಹಂತದಲ್ಲಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ಅವರ ಹೆಸರನ್ನು ಇನ್ನೊಬ್ಬ ಸಿಎಂ ಆಕಾಂಕ್ಷಿ ಜ್ಯೋತಿರಾದಿತ್ಯ ಸಿಂಧ್ಯ ಅವರು ಅನುಮೋದಿಸಿದ್ದಾರೆ ಎಂಬ ವರದಿಗಳೂ ಟೀವಿಗಳಲ್ಲಿ ಪ್ರಸಾರವಾದವು. 

ಆದರೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವೀಕ್ಷಕಿ ಶೋಭಾ ಓಝಾ, ‘ಶಾಸಕರು ಸಿಎಂ ಆಯ್ಕೆಯ ಹೊಣೆಯನ್ನು ರಾಹುಲ್‌ ಗಾಂಧಿ ಅವರಿಗೆ ವಹಿಸಿದ್ದಾರೆ’ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ಅಂತ್ಯ ಹಾಡಿದರು.

ಮೂಲಗಳ ಪ್ರಕಾರ ಸಿಎಂ ಹುದ್ದೆ ರೇಸ್‌ನಲ್ಲಿ ಕಮಲ್‌ ಮುಂದಿದ್ದಾರೆ. ಆದರೆ, ‘ಹುದ್ದೆ ದೊರೆತರೆ ಸ್ವೀಕರಿಸುವೆ’ ಎನ್ನುವ ಮೂಲಕ ಜ್ಯೋತಿರಾದಿತ್ಯ ತಮ್ಮ ಮಹದಾಸೆ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 114 ಸ್ಥಾನಗಳನ್ನು ಪಡೆದುಕೊಂಡಿದ್ದು, 2 ಕ್ಷೇತ್ರಗಳಲ್ಲಿ ಗೆಲುವು ಪಡೆದ ಬಿಎಸ್ ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ.