ರೋಗಿ ನೋಡಲು ಬರುವವರು 1 ಬಾಟಲ್ ನೀರು ತನ್ನಿ!

ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನೀರಿಗಾಗಿ ಹಾಹಾಕಾರ! ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನೀರಿಗೆ ತೀವ್ರ ಕೊರತೆ | ಹೆರಿಗೆ, ಸಿಜೇರಿಯನ್‌ ವಿಭಾಗ ಬಂದ್‌ ಮಾಡುವ ಅನಿವಾರ್ಯತೆ |  ಪ್ರತಿದಿನ ಆಸ್ಪತ್ರೆಗೆ ಅಗತ್ಯವಿರುವ ನೀರು 3 ಲಕ್ಷ ಲೀಟರ್‌, ಸದ್ಯಕ್ಕೆ ಪೂರೈಕೆ ಆಗುತ್ತಿರುವುದು ಕೇವಲ 50 ಸಾವಿರ ಲೀಟರ್‌

Kalburgi Hospital facing water problem due to drought

ಕಲಬುರಗಿ (ಮೇ. 21):  ‘ನಮ್ಮನ್ನು ಕಾಣಲು, ಮಾತನಾಡಿಸಲು ಬರೋದಾದ್ರೆ, ಜೊತೆಗೊಂದೆರಡು ಬಾಟಲ್‌ ನೀರು ಹಿಡ್ಕೊಂಡು ಬರ್ರಿ’

- ಇದು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಒಳರೋಗಿಗಳು, ಅವರ ಸಹಾಯಕರು ತಮ್ಮನ್ನು ಭೇಟಿ ಮಾಡಲು ಬರುತ್ತಿರುವ ಬಂಧುಮಿತ್ರರಿಗೆ ಮಾಡುತ್ತಿರುವ ಮನವಿ. ಆಸ್ಪತ್ರೆಯಲ್ಲಿದ್ದವರನ್ನು ಕಂಡು ಮಾತನಾಡಿಸಲು ಹೋಗುವಾಗ ಹಣ್ಣು, ಹಾಲು, ಎಳೆನೀರು ಒಯ್ಯುವುದು ವಾಡಿಕೆ, ಆದರಿಲ್ಲಿ ಇವೆಲ್ಲ ಬೇಡ. ಅದೇನಿದ್ದರೂ ಬಾಟಲ್‌ ನೀರಿನೊಂದಿಗೆ ಬನ್ನಿ ಎಂಬ ರೋಗಿ, ಸಹಾಯಕರ ಆರ್ತನಾದ ಜಿಲ್ಲಾಸ್ಪತ್ರೆ ನೀರಿನ ಬವಣೆಗೆ ಕನ್ನಡಿ ಹಿಡಿದಿದೆ. ಪರಿಸ್ಥಿತಿ ಹೇಗಿದೆಯೆಯೆಂದರೆ ನೀರಿನ ಕೊರತೆಯಿಂದ ಹೆರಿಗೆಗೂ ಸಮಸ್ಯೆಯಾಗಿದ್ದು ಹೆರಿಗೆ ವಿಭಾಗ ಮುಚ್ಚಬೇಕಾದ ಅನಿವಾರ್ಯತೆ ಎದುರಾಗಿದೆ.

ಹೈ-ಕ ಭಾಗದಲ್ಲೇ ಬಹುದೊಡ್ಡ ಆಸ್ಪತ್ರೆ ಇದು. 500 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಗೆ ನಿತ್ಯ 300ರಿಂದ 400 ರಷ್ಟುಜನ ಹೊರರೋಗಿಗಳಾಗಿ ಬಂದು ಹೋದರೆ, 100ರಿಂದ 200 ರಷ್ಟುಜನ ಒಳರೋಗಿಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಸೇರಿಕೊಳ್ಳುತ್ತಾರೆ.

ಅದರಲ್ಲೂ ಇಲ್ಲಿರುವ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗವಂತೂ ಹೆರಿಗೆ, ಸಿಜೇರಿಯನ್‌ ಹೆರಿಗೆಗಳಿಗೆ ಹೆಸರುವಾಸಿ, ನಿತ್ಯ ಸರಾಸರಿ 50ರಿಂದ 60 ರಷ್ಟುಹೆರಿಗಳು ಇಲ್ಲಿ ನಡೆಯುತ್ತವೆ. ಈ ವಿಭಾಗಕ್ಕೆ ಹೆಚ್ಚಿನ ನೀರು ಬೇಕು. ನೀರಿನ ಬರ ಹೆರಿಗೆ ಕೆಲಸಕ್ಕೂ ಅಡ್ಡಿಯಾಗುತ್ತಿದೆ.

ಪರಿಸ್ಥಿತಿ ಹೀಗೇ ಮುಂದುವರಿದರೆ ಹೆರಿಗೆ, ಸಿಜೇರಿಯನ್‌ ಹೆರಿಗೆ ಎರಡನ್ನು ನಿಲ್ಲಿಸುವ ಪರಿಸ್ಥಿತಿ ತಲೆದೋರಿದರೂ ಅಚ್ಚರಿ ಪಡಬೇಕಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಡಯಾಲಿಸಿಸ್‌ ಯೂನಿಟ್‌, ಕ್ಯಾಜುವಲ್ಟಿ, ಮೂಳೆ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ.

2.5 ಲಕ್ಷ ಲೀ. ಕೊರತೆ:

ಈ ಆಸ್ಪತ್ರೆಗೆ ನಿತ್ಯ 3 ಲಕ್ಷ ಲೀಟರ್‌ ನೀರು ಬೇಕು, ಸದ್ಯಕ್ಕೆ ಆಸ್ಪತ್ರೆಗೆ ಪೂರೈಕೆಯಾಗುತ್ತಿರೋದು 50 ಸಾವಿರ ಲೀಟರ್‌ ಮಾತ್ರ. ಏಕಾಏಕಿ ನೀರಿನ ಪೂರೈಕೆಯಲ್ಲಿ 2. 50 ಲಕ್ಷ ಲೀಟರ್‌ ಕೊರತೆ ಉಂಟಾಗಿದ್ದರಿಂದ ಆಸ್ಪತ್ರೆ ಅನೇಕ ವಿಭಾಗಗಳಲ್ಲಿ ತೊಂದರೆಗಲು ಕಾಡುತ್ತಿವೆ.

ಸ್ವಚ್ಛತೆ ಇಲ್ಲ, ಗಬ್ಬು ವಾಸನೆ:

ನೀರಿನ ಕೊರತೆ ಆಸ್ಪತ್ರೆಯಲ್ಲಿ ಗಬ್ಬು ವಾಸನೆ ತಲೆದೋರುವಂತೆ ಮಾಡಿದೆ. ಇಲ್ಲಿನ ಮೊಗಸಾಲೆ, ಅಲ್ಲಿನ ಫೆä್ಲೕರಿಂಗ್‌ಗಳಲ್ಲೆಲ್ಲಾ ನಿತ್ಯದ ನಿರ್ವಹಣೆಗೂ ನೀರಿಲ್ಲದಂತಾಗಿದೆ, ನೆಲಹಾಸು ಒರೆಸಲಿಕ್ಕೂ ನೀರಿನ ತತ್ವಾರ, ಇನ್ನು ಶೌಚಾಲಗಳಲ್ಲಂತೂ ನೀರ ಇಲ್ಲ. ಆಸ್ಪತ್ರೆ ಒಳರೋಗಿಗಲು ಶೌಚ ಮಾಡಿಬಂದರೂ ಅಲ್ಲಿ ಬಳಸಲು ನೀರಿಲ್ಲ. ಜೊತೆಗಿನ ಬಾಟಲ್‌ ನೀರನ್ನೇ ಕುಡಿಲಿಕ್ಕೂ, ಶೌಚಕ್ಕೂ ಎರಡಕ್ಕೂ ಬಳಸುವ ದುರವಸ್ಥೆ ಎದುರಾಗಿದೆ.

ಖರೀದಿಸಿದ ಬಾಟಲ್‌ ನೀರೇ ಗತಿ:

ಆಸ್ಪತ್ರೆಯ ಒಳ ರೋಗಿಗಳು, ಹೊರ ರೋಗಿಗಳಿಬ್ಬರೂ ಹೊರಗಿನಿಂದ ಬಾಟಲ್‌ ನೀರನ್ನು ಖರೀದಿಸಿಯೇ ತರಬೇಕು. ಹೀಗಾಗಿ ರೋಗಿಯ ಸಹಾಯಕರು ದಿನವೀಡಿ ಆಸ್ಪತ್ರೆಯಲ್ಲಿದ್ದುಕೊಂಡು ಬಾಟಲ್‌ ನೀರನ್ನು ತರುವ ಕೆಲಸವನ್ನೇ ಮಾಡುವಂತಾಗಿದೆ. ಓರ್ವ ಒಳರೋಗಿ, ಆತನಿಬ್ಬರು ಸಹಾಯಕರಿದ್ದರೆ ಅವರು ನಿತ್ಯ 200 ರು. ನಷ್ಟುನೀರು ಖರೀದಿಗೆ ವೆಚ್ಚ ಮಾಡುವಂತಾಗಿದೆ.

ಜಿಲ್ಲಾಸ್ಪತ್ರೆಗೆ ನಿತ್ಯ 3 ಲಕ್ಷ ಲೀಟರ್‌ ನೀರು ಬೇಕು, ಈಗ ಕೇವಲ 50 ರಿಂದ 60 ಸಾವಿರ ಲೀಟರ್‌ ನೀರು ಪೂರೈಕೆಯಾಗುತ್ತಿದೆ. ಇದರಿಂದ ಆಸ್ಪತ್ರೆ ಸ್ವಚ್ಛತೆ ಕಾಪಾಡೋದು, ಹೆರಿಗೆ, ಸಿಜೇರಿಯನ್‌ ನಡೆಸೋದು ಕಷ್ಟವಾಗುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ಇದೇ ಪರಿಸ್ಥಿತಿ ಇಲ್ಲಿದೆ. ಮಹಾನಗರ ಪಾಲಿಕೆ, ಜಲ ಮಂಡಳಿಗೆ ವಿಷಯ ತಿಳಿಸಲಾಗಿದೆ, ಆದರೂ ಇಂದಿಗೂ ಅಗತ್ಯ ಪ್ರಮಾಣದಲ್ಲಿ ನೀರು ಆಸ್ಪತ್ರೆಗೆ ದೊರಕುತ್ತಿಲ್ಲ. 

- ಶೇಷಮೂರ್ತಿ ಅವಧಾನಿ 

Latest Videos
Follow Us:
Download App:
  • android
  • ios