ಎನ್‌. ಲಕ್ಷ್ಮಣ್‌

ಬೆಂಗಳೂರು [ಅ.16]:  ‘ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ’ (ಜೆಎಂಬಿ) ಸಂಘಟನೆಯ ಭಯೋತ್ಪಾದಕರು ಭಾರತದಲ್ಲಿ ಭಯೋತ್ಪಾದನೆ ಕೃತ್ಯ ಎಸಗಲು ಪ್ರತ್ಯೇಕವಾಗಿ ‘ಜಮಾತ್‌ ಉಲ್‌ ಮುಜಾಹಿದೀನ್‌ ಭಾರತ’ (ಜೆಎಂಐ) ಎಂಬ ಹೆಸರಿನಲ್ಲಿ ಸಂಘಟನೆ ಕಟ್ಟಲು ನಿರ್ಧರಿಸಿದ್ದರು ಎಂಬ ಆಘಾತಕಾರಿ ವಿಷಯ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ತನಿಖೆ ವೇಳೆ ಬಯಲಾಗಿದೆ.

ಬಾಂಗ್ಲಾದೇಶ ಮೂಲದ ಸಂಘಟನೆಯಾದ ಜೆಎಂಬಿ 1998ರಲ್ಲಿ ಸ್ಥಾಪನೆಯಾಗಿದ್ದು, ನಂತರ ದಿನಗಳಲ್ಲಿ ಸಂಘಟನೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ತನ್ನ ಭಯೋತ್ಪಾದನಾ ಚಟುವಟಿಕೆ ಆರಂಭಿಸುವ ಮೂಲಕ ಭಾರತಕ್ಕೆ ವಿಸ್ತರಿಸಿತ್ತು. ಇದೀಗ ಜೆಎಂಬಿ ಕಬಂಧಬಾಹು ಕರ್ನಾಟಕ, ಕೇರಳ, ಮಹಾರಾಷ್ಟ್ರ, ಜಾರ್ಖಂಡ್‌ ರಾಜ್ಯಗಳಲ್ಲಿ ಚಾಚಿದೆ.

ಬಂಧಿತ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ನಜೀರ್‌ ಶೇಖ್‌ ಅಲಿಯಾಸ್‌ ಪಟ್ಲಾ ಅನಾಸ್‌, ರಾಮನಗರದಲ್ಲಿ ಸೆರೆಸಿಕ್ಕ ಬಾಂಗ್ಲಾದ ಜಹೀದುಲ್ಲಾ ಇಸ್ಲಾಂ ಅಲಿಯಾಸ್‌ ಕೌಸರ್‌ ಹಾಗೂ ಅಸ್ಸಾಂನ ಆರೀಫ್‌ ಹುಸೇನ್‌ ಸಂಘಟನೆಯ ಪ್ರಮುಖರಾಗಿದ್ದು, ಈ ಶಂಕಿತರ ತೀವ್ರ ವಿಚಾರಣೆ ವೇಳೆ ಭಾರತದಲ್ಲಿ ಪ್ರತ್ಯೇಕ ಭಯೋತ್ಪಾದಕ ಸಂಘಟನೆ ಕಟ್ಟಬೇಕೆಂಬ ಅಂಶ ಬೆಳಕಿಗೆ ಬಂದಿದೆ ಎಂದು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಜೆಎಂಬಿ ಜೊತೆಗೇ ಭಿನ್ನಾಭಿಪ್ರಾಯ:

ಭಾರತದಲ್ಲಿರುವ ಜೆಎಂಬಿ ಸಂಘಟನೆಯ ಶಂಕಿತ ಭಯೋತ್ಪಾಕರು 2017ರಲ್ಲಿ ಭಾರತದಲ್ಲಿಯೇ ‘ಜಮಾತ್‌ ಉಲ್‌ ಮುಜಾಹಿದೀನ್‌ ಭಾರತ’ (ಜೆಎಂಐ) ಎಂಬ ಹೆಸರಿನ ಸಂಘಟನೆ ಕಟ್ಟಲು ತೀರ್ಮಾನಿಸಿದ್ದರು. ಈ ವಿಚಾರಕ್ಕೆ ಬಾಂಗ್ಲಾದೇಶದಲ್ಲಿರುವ ಜೆಎಂಬಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಈ ಭಿನ್ನಾಭಿಪ್ರಾಯದ ಬಳಿಕ ಬಾಂಗ್ಲಾದೇಶದಿಂದ ಭಾರತದಲ್ಲಿನ ಜೆಎಂಬಿ ಶಂಕಿತರಿಗೆ ಪೂರೈಕೆಯಾಗುತ್ತಿದ್ದ ಲಕ್ಷಗಟ್ಟಲೇ ಹಣ 2017ರ ಡಿಸೆಂಬರ್‌ನಲ್ಲಿ ಸ್ಥಗಿತಗೊಳ್ಳುತ್ತದೆ. ಜೆಎಂಬಿಯಲ್ಲಿ ಆಂತರಿಕ ಜಗಳ ಆರಂಭವಾದ ಬಳಿಕ ದೇಶದಲ್ಲಿಯೇ ಇದ್ದ ಶಂಕಿತರು ನಮ್ಮ ‘ಧ್ಯೇಯ’ ಬಿಡಬಾರದು ಎಂಬ ಕಾರಣಕ್ಕೆ ಹೇಗಾದರೂ ಹಣ ಹೊಂದಿಸಬೇಕೆಂದು ಡಕಾಯತಿ ಕೃತ್ಯಕ್ಕೆ ಇಳಿದಿದ್ದರು. ಅದರಂತೆ ಬೆಂಗಳೂರು ಹೊರವಲಯದ ಅತ್ತಿಬೆಲೆಯ ಎರಡು ಕಡೆ, ಕೆ.ಆರ್‌.ಪುರ ಹಾಗೂ ಕೊತ್ತನೂರಿನ ಒಂದು ಕಡೆ ಡಕಾಯತಿ ಮಾಡಿದ್ದರು. ಡಕಾಯತಿ ಹಣದಲ್ಲಿ ಶಂಕಿತರು ಎಂಟು ತಿಂಗಳು ನಿರ್ವಹಣೆ ಮಾಡಿದ್ದರು. ಇದಾದ ಬಳಿಕ 2017ರಲ್ಲಿ ರಾಮನಗರದಲ್ಲಿ ಕೌಸರ್‌ ಬಂಧನವಾದ ಬಳಿಕ ರಾಜ್ಯದ 22 ಕಡೆ ಮನೆ ಮಾಡಿದ್ದ ಶಂಕಿತರು ತಮ್ಮ ಕಾರ್ಯ ಸ್ಥಗಿತಗೊಳಿಸಿ ತಲೆಮರೆಸಿಕೊಳ್ಳುವ ಮೂಲಕ ಜೆಎಂಐ ಕಟ್ಟಬೇಕೆಂಬ ಕಾರ್ಯ ಸ್ಥಗಿತಗೊಂಡಿತ್ತು ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದರು.

4 ವರ್ಷ ಇಲ್ಲೇ ನೆಲೆಸಿದ್ದ ಉಗ್ರರು:

ಕರ್ನಾಟಕದ ಅದರಲ್ಲಿಯೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ 2014ರಿಂದ 2018ರ ಮಧ್ಯೆ ಶಂಕಿತರು 22 ಮನೆ ಮಾಡಿದ್ದರು. ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಶಿಕಾರಿಪಾಳ್ಯದಲ್ಲಿ ಎರಡು ಮನೆ, ಅತ್ತಿಬೆಲೆಯಲ್ಲಿ ಮೂರು ಮನೆ, ಹೊಸೂರಲ್ಲಿ ಎರಡು, ಕೆ.ಆರ್‌.ಪುರದಲ್ಲಿ ನಾಲ್ಕು, ಸೋಲದೇವನಹಳ್ಳಿ, ಮಾಲೂರು, ಹೂಡಿ ಹಾಗೂ ವೈಟ್‌ಫೀಲ್ಡ್‌ನಲ್ಲಿ ತಲಾ ಒಂದು ಬಾಡಿಗೆ ಮನೆ ಮಾಡಿದ್ದರು. ಕೊನೆಯದಾಗಿ ರಾಮನಗರದ ಒಂದೇ ಜಿಲ್ಲೆಯಲ್ಲಿ ನಾಲ್ಕು ಮನೆ ಮಾಡಿದ್ದರು. ಕೊಲ್ಕತ್ತದಲ್ಲಿನ ನಕಲಿ ದಾಖಲೆಗಳನ್ನು ನೀಡಿ ಮನೆ ಮಾಡಿಕೊಂಡಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ಕರ್ನಾಟಕ ಉಗ್ರರ ಸಂಶೋಧನಾ ಕೇಂದ್ರ!

ಭಾರತದಲ್ಲಿ ಜೆಎಂಬಿ ಉಗ್ರರು ತಮ್ಮ ದಾಳಿ ನಡೆಸಲು ಕರ್ನಾಟಕವನ್ನು ಸ್ಲೀಪರ್‌ ಸೆಲ್‌ ಮಾಡಿಕೊಳ್ಳುವ ಜತೆಗೆ ಭಯೋತ್ಪಾದನಾ ಚಟುವಟಿಕೆಗಳಿಗೆ ‘ಸಂಶೋಧನಾ ಕೇಂದ್ರ’ವನ್ನಾಗಿ (ರೀಸಚ್‌ರ್‍ ಸೆಂಟರ್‌) ಮಾಡಿಕೊಂಡಿದ್ದಾಗಿ ಶಂಕಿತರು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳದ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇಶದ ಯಾವುದೇ ಮೂಲೆಯಲ್ಲೂ ಜೆಎಂಬಿಯಿಂದ ಸ್ಫೋಟ ಸಂಭವಿಸಿದರೂ ಅದಕ್ಕೆ ಬೇಕಾದ ಸ್ಫೋಟಕಗಳನ್ನು ಕರ್ನಾಟಕದಲ್ಲಿಯೇ ಸಿದ್ಧಪಡಿಸಿ ಪೂರೈಸಲಾಗುತ್ತಿತ್ತು. ಹೀಗಾಗಿ ಕರ್ನಾಟಕವನ್ನು ಸ್ಲೀಪರ್‌ ಸೆಲ್‌ ಜತೆಗೆ ರೀಸಚ್‌ರ್‍ ಸೆಂಟರ್‌ ಆಗಿ ಮಾಡಿಕೊಂಡಿದ್ದಾಗಿ ಶಂಕಿತರು ವಿಚಾರಣೆ ಹೇಳಿಕೆ ನೀಡಿದ್ದಾರೆ. ಉಗ್ರರು ತಮ್ಮ ಸ್ಲೀಪರ್‌ ಸೆಲ್‌ನಲ್ಲಿ ಸುರಕ್ಷಿತವಾಗಿರಲು ಯಾವುದೇ ಸ್ಫೋಟಕ ಕೃತ್ಯಕ್ಕೆ ಕೈಹಾಕುವುದಿಲ್ಲ. ದೇವರ ದಯೆಯಿಂದ ಕರ್ನಾಟಕದಲ್ಲಿ ಜೆಎಂಬಿ ಉಗ್ರರಿಂದ ಯಾವುದೇ ಸ್ಫೋಟಕ ಕೃತ್ಯ ಸಂಭವಿಸಿಲ್ಲ ಎಂದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.