ಜೆಮ್‌ಶೆಡ್‌ಪುರ[ಜೂ.24]: ದ್ವಿಚಕ್ರ ವಾಹನ ಕಳ್ಳ ಎಂಬ ಆರೋಪ ಗುರಿಯಾಗಿ ದುಷ್ಕರ್ಮಿಗಳಿಂದ ಭಾರೀ ಪೆಟ್ಟು ತಿಂದು ತೀವ್ರವಾಗಿ ಜರ್ಜರಿತಗೊಂಡಿದ್ದ ವ್ಯಕ್ತಿಯೋರ್ವ ಭಾನುವಾರ ಸಾವನ್ನಪ್ಪಿದ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಸಾವಿಗೀಡಾದ ಯುವಕನನ್ನು ಶಾಮ್ಸ್‌ ತಬ್ರೆಜ್‌(24) ಎಂದು ಗುರುತಿಸಲಾಗಿದೆ. ಕಳೆದ ಮಂಗಳವಾರ ಸಂಜೆ ಸೆರೈಕೆಲಾ ಖಾರಸ್ವಾನ್‌ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಶಾಮ್ಸ್‌ನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ 7 ಗಂಟೆಗೂ ಹೆಚ್ಚು ಕಾಲ ಭೀಕರವಾಗಿ ಹಲ್ಲೆ ನಡೆಸಿದ್ದರು. ಬಳಿಕ ಬುಧವಾರ ಬೆಳಗ್ಗೆ ಮತ್ತೆ ಹಲ್ಲೆ ನಡೆಸಿದ್ದ ಉದ್ರಿಕ್ತರ ಗುಂಪು, ಜೈ ಶ್ರೀರಾಮ್‌ ಹಾಗೂ ಜೈ ಹನುಮಾನ್‌ ಘೋಷಣೆ ಕೂಗುವಂತೆ ಬಲವಂತಪಡಿಸಿತ್ತು.

ಆದರೆ, ಈ ವೇಳೆ ಪ್ರಜ್ಞೆ ಕಳೆದುಕೊಂಡ ಶಾಮ್ಸ್‌ನನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು ಎಂದು ಯುವಕನ ಕುಟುಂಬಸ್ಥರು ದೂರಿದ್ದಾರೆ. ಅಲ್ಲದೆ, ಮಗನಿಗೆ ಪೊಲೀಸರು ಸಹ ಸೂಕ್ತ ಚಿಕಿತ್ಸೆ ಕೊಡಿಸಲಿಲ್ಲ. ಇದರಿಂದಾಗಿ ತಬ್ರೆಜ್‌ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.