ಹಾಸನ[ಅ.10]: ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಬಳಿಕ, ಸಿಎಂ ಯಡಿಯೂರಪ್ಪ ನಾನು ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದರು. ಆದರೆ, ಅವರು ಮಾಡುತ್ತಿರೋದೆಲ್ಲ ದ್ವೇಷದ ರಾಜಕಾರಣ ಎನ್ನೋದಕ್ಕೆ ಹಲವು ನಿದರ್ಶನ ಇದೆ ಎಂದು ಸಿಎಂ ವಿರುದ್ಧ ಮಾಜಿ ಸಚಿವ ಎಚ್‌.ಡಿ.ರೇವಣ್ಣ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಕಾವೇರಿಕೊಳ್ಳದ ಏಳು ಸಾವಿರ ಕೋಟಿ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ. ಮೈಸೂರು, ಮಂಡ್ಯ, ಮಡಿಕೇರಿಯ ಸೇರಿದಂತೆ ಈ ಕಾಮಗಾರಿಗಳು ನಡೆಯಬೇಕಿತ್ತು. ಜೆಡಿಎಸ್‌ ಕಾಂಗ್ರೆಸ್‌ ಪ್ರಾಬಲ್ಯ ಇರುವ ಕ್ಷೇತ್ರದ ಕಾಮಗಾರಿಗಳಿಗೆ ತಡೆ ಕೊಟ್ಟಿದ್ದಾರೆ ಎಂದ ಅವರು, ಇವರಿಗೆ ವಿಧಾನಸಭೆ ಎದುರಿಸುವ ಶಕ್ತಿಯೇ ಇಲ್ಲ ಎಂದು ಕಿಡಿಕಾದರು.

ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ಹಾಗೆ ಇದೆ. ಸುಮ್ನೆ ಕೇಂದ್ರ ಸರ್ಕಾರದ ಮೇಲೆ ಹೇಳಿಕೊಂಡು ಕಾಲ ಹರಣ ಮಾಡುತ್ತಿದ್ದಾರೆ ರಾಜಕೀಯ ದ್ವೇಷ ಬಿಟ್ಟು ಕೆಲಸ ಮಾಡಲಿ, ಇವರೆಲ್ಲ ಕರ್ನಾಟಕದ ಜನತೆ ಅಲ್ವಾ...?, ಈ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ ಎಂದರು.

ರಫೇಲ್‌ಗೆ ಶಸ್ತ್ರಪೂಜೆ: ಖರ್ಗೆ- ಅಮಿತ್ ಶಾ ಜಟಾಪಟಿ!

ಕೇವಲ ಮೂರು ದಿನದ ಅಧಿವೇಶನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ಈ ರಾಜ್ಯ ಯಾವ ರೀತಿ ಹೋಗುತ್ತೋ ಗೊತ್ತಿಲ್ಲ, ವಿರೋಧ ಪಕ್ಷವನ್ನು ದಮನ ಮಾಡುತ್ತೀನಿ ಎಂದುಕೊಂಡಿದ್ದರೆ ಅದು ಅವರ ಕನಸಾಗಲಿದೆ. ಇದಕ್ಕೆ ಅವರು ಒಂದಲ್ಲ ಒಂದು ದಿನ ಶಿಕ್ಷೆ ಅನುಭವಿಸುವ ಕಾಲ ಬರುತ್ತೆ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಯಾವುದೇ ಮುಖ್ಯಮಂತ್ರಿ ಈ ರೀತಿ ಕಾಮಗಾರಿ ನಿಲ್ಲಿಸಿರಲಿಲ್ಲ, ಈ ರೀತಿ ಮಾಡಿದ ಏಕೈಕ ಸಿಎಂ ಯಡಿಯೂರಪ್ಪ ಆಗಿದ್ದಾರೆ ಎಂದ ಅವರು, ಅಧಿವೇಶನಕ್ಕೆ ಮಾಧ್ಯಮಗಳಿಗೆ ತಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧಿವೇಶನಕ್ಕೆ ಮಾಧ್ಯಮ ಬಿಡೋಕೆ ಯಾಕೆ ಹೆದರಬೇಕು, ರಾಜ್ಯ ಸರ್ಕಾರದ ನಡೆ ಬಗ್ಗೆ ರೇವಣ್ಣ ಆಕ್ಷೇಪಿಸಿದರು.

ಇದಕ್ಕೆಲ್ಲಾ ಅವರು ಕೆಲವೇ ದಿನದಲ್ಲಿ ಅನುಭವಿಸುವ ಕಾಲ ಬರುತ್ತೆ, ಯಡಿಯೂರಪ್ಪ ಇಷ್ಟೆಲ್ಲಾ ಮಾಡುತ್ತಿದ್ದಾರಲ್ಲಾ ಅವರೇನು ಈರುಳ್ಳಿ ಬೆಳೆದಿದ್ದರಾ ಎಂದರು.

ನಾವು ಎಷ್ಟುಕಬ್ಬು, ಆಲೂಗಡ್ಡೆ ಬೆಳೆಯುತ್ತಿದ್ದೊ ಅವರಿಗೇನು ಗೊತ್ತು ಎಂದು ಪ್ರಶ್ನಿಸಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದ ಶೋಭಾ ಕರಂದ್ಲಾಜೆಗೆ ರೇವಣ್ಣ ತಿರುಗೇಟು ನೀಡಿದರು.

ಅವರಿಗೆಲ್ಲ ನಾನು ಪ್ರತಿಕ್ರಿಯೆ ನೀಡೊಕೆ ಹೋದ್ರೆ ನಾನು ಪೊಳ್ಳೆದ್ದು ಹೋಗ್ತೀನಿ, ರಾಜ್ಯ ಸರ್ಕಾರದ ನಡೆ ಬಗ್ಗೆ ಅಧಿವೇಶನದಲ್ಲಿ ಮಾತನಾಡುವ ಜೊತೆಗೆ ಹೋರಾಟ ಮಾಡ್ತೀವಿ, ಅಗತ್ಯಬಿದ್ದರೆ ವಿಧಾನಸಭೆಯಲ್ಲೇ ಮಲಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಭಾರತದ ಎರಡು ದಶಕಗಳ ಕನಸು ನನಸು: ವಾಯುಸೇನೆಗೆ ನೂರಾನೆ ಬಲ!

ನಿಂಬೆಹಣ್ಣು ಇಟ್ಟು ಪೂಜೆ:

ನನಗೆ ನಿಂಬೆಹಣ್ಣು ಎಂದು ಗೇಲಿ ಮಾಡುವ ಬಿಜೆಪಿಯ ಮುಖಂಡರು ನಿಂಬೆಹಣ್ಣು ಬಗ್ಗೆ ಈಗ ಹೇಳಬೇಕು, ಫ್ರಾನ್ಸ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ರಫೇಲ್‌ಗೆ ನಿಂಬೆಹಣ್ಣು ಇಟ್ಟು ಪೂಜೆ ಮಾಡಿದ್ದಾರೆ ಎಂದು ಟೀಕಿಸಿದರು.

ಮರು ಚುನಾವಣೆಯ ಕೆ.ಆರ್‌.ಪೇಟೆ ಸೇರಿದಂತೆ ಎಲ್ಲ ಕಡೆ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯನ್ನು ರಾಜ್ಯದಿಂದ ತೆಗೆಯುವ ಗುರಿಯೇ ನಮ್ಮ ಕೆಲಸವಾಗಿದೆ ಎಂದರು.