Asianet Suvarna News Asianet Suvarna News

ನಿಮ್ಮ ಮಕ್ಕಳು ಕನ್ನಡ ಮಾತಾಡ್ತಾರಾ?

ಪದಗಳಿಗೆ ಮಕ್ಕಳ ಜಗತ್ತಿನಲ್ಲಿ ಜೀವವಿದೆ! ಈ ವಿಶೇಷ ಸಂಬಂಧವೇ ಅವರನ್ನು ಲಾಲಿ ಹಾಡುಗಳಿಗೆ, ಪ್ರಾಣಿಗಳ ಕೂಗುಗಳಿಗೆ, ಮಕ್ಕಳ ಪದ್ಯಗಳಿಗೆ ಅವರನ್ನು ಸೆಳೆಯುವುದು. ಹೀಗೆ ಒಂದು ವರ್ಷದ ಒಳಗೆ ವಿವಿಧ ರೀತಿಯಲ್ಲಿ ಕೇಳದ ಭಾಷೆ ಮಕ್ಕಳ ಮಿಸುಳಿನಲ್ಲಿ ಕೆಲಕಾಲ ಅಡಗಿ ಕುಳಿತಿರುತ್ತದೆ.

International Mother Language Day 21 February
Author
Bengaluru, First Published Feb 17, 2019, 9:21 AM IST

ಡಾ. ಕೆ.ಎಸ್‌. ಪವಿತ್ರ

‘ಅಯ್ಯೋ! ನಮ್ಮ ಮಕ್ಕಳಿಗೆ ಇಂಗ್ಲೀಷ್‌ ಕಲಿಸೋದು ಹೇಗೆ? ಅಂತ ಇದ್ದಿದ್ರೆ ಈ ಲೇಖನ ಓದಿ ಮುಗಿಸಬಹುದಿತ್ತು. ಕನ್ನಡದಲ್ಲಿ ಮಾತಾಡೋದನ್ನು ಕಲಿಸೋದ್ರಲ್ಲಿ ಏನಿದೆ?’ ಅಂತ ಪುಟ ತಿರುಗಿಸಿ ಬಿಡಬೇಡಿ! ಮುಂದೆ ಓದ್ತಾ ಹೋದರೆ ಯಾವುದೇ ಭಾಷೆಯನ್ನು ಮಕ್ಕಳು ಕಲಿಯುವುದು ಹೇಗೆ, ‘ಸುಲಭವಾಗಿ’ ಕಲಿಸುವುದು ಹೇಗೆ ಎನ್ನುವುದನ್ನು ವೈಜ್ಞಾನಿಕವಾಗಿ ವಿವರಿಸುವ ಪ್ರಯತ್ನ ಇಲ್ಲಿದೆ. ನಮ್ಮ ಮಕ್ಕಳು ಕನ್ನಡವನ್ನು ಮಾತನಾಡಲು, ಓದಲು, ಬರೆಯಲು, ಕನ್ನಡದಲ್ಲಿ ‘ಯೋಚಿಸಲು’ ಹೇಗೆ ನಾವು ‘ಕಲಿಸದೆಯೂ’ ಕಲಿಯುತ್ತಾರೆ ಎಂಬುದನ್ನು ಗಮನಿಸಿ ನೋಡಿದರೆ ‘ಭಾಷೆ ಕಲಿಯುವ’ ಹಲವು ಸರಳ ಸೂತ್ರಗಳು ಅರ್ಥವಾಗಿಬಿಡುತ್ತವೆ.

ವೈಜ್ಞಾನಿಕವಾಗಿ ನೋಡಿದರೆ ಕಿವಿ ಮತ್ತು ಮಾತುಗಳ ಸಾಮರ್ಥ್ಯವಿರುವ ಯಾವುದೇ ಮಗು ತನ್ನ ಮಾತೃಭಾಷೆಯನ್ನು ಗ್ರಹಿಸುವುದರಲ್ಲಿ ಸೋಲುವುದಿಲ್ಲ! ಇದು ಎಷ್ಟುಸಹಜವಾಗಿ, ನಮಗೆ ಅರಿವಿಲ್ಲದಂತೆ ನಡೆಯುತ್ತದೆ ಎಂದರೆ ನಮಗೆ ‘ಮಾತು ಹುಟ್ಟಿನಿಂದಲೇ ಬರುವುದು’ ಎಂದು ಅನಿಸುವಷ್ಟು! ಆದರೆ ನಿಜವಾಗಿ ‘ಭಾಷೆ’ ‘ಮಾತು’ ನಾವು ಕಲಿಯುವಂಥದ್ದು, ಹುಟ್ಟಿನಿಂದ ಬರುವುದಲ್ಲ. ಒಂದರಿಂದ 3 ವರ್ಷ ವಯಸ್ಸಿನ ಮಧ್ಯದಲ್ಲಿ ಮಕ್ಕಳು ಮಾತಿನ ಮೈಲಿಗಲ್ಲು ದಾಟುತ್ತಾರೆ. ಬುದ್ಧಿಶಕ್ತಿಯ ಮಟ್ಟಏನೇ ಇರಲಿ, ಯಶಸ್ವಿಯಾಗಿಯೇ ಮಾತು ಕಲಿಯುತ್ತಾರೆ. ಉಗ್ಗು - ತೊದಲುವಿಕೆಯ ಸಮಸ್ಯೆಗಳು ಕೆಲವರಲ್ಲಿ ಕಂಡು ಬಂದರೂ, ಹೆಚ್ಚಿನ ಮಕ್ಕಳು ಆರಾಮವಾಗಿ ಮಾತು ಕಲಿತುಬಿಡುತ್ತಾರೆ.

ಮಗು ಭಾಷೆಯೊಂದನ್ನು ಕಲಿಯುವುದು ಹೇಗೆ? ನೀವು ಮಾತು ಕಲಿತದ್ದನ್ನು ನೆನಪಿಸಿಕೊಳ್ಳಿ. ‘ಹೇಗೆ ಕಲಿತೆವು?’ ಎಂಬ ಪ್ರಶ್ನೆಗೆ ಥಟ್ಟನೆ ಉತ್ತರ ಹೊಳೆಯುವುದಿಲ್ಲ. ಸ್ವಲ್ಪ ಯೋಚಿಸಿ ನೋಡಿದರೆ ಶಾಲೆಯಲ್ಲಿ ‘ಅ ಆ ಇ ಈ’ ಕಲಿತಿದ್ದರ ಬಗ್ಗೆ ಹೇಳುತ್ತೇವೆ. ಆದರೆ ನಿಜವಾಗಿ ನಾವು ಕಲಿತದ್ದು ಬೇರೆಯವರು ಆ ಭಾಷೆ ಮಾತನಾಡಿದ್ದನ್ನು ಕೇಳಿ, ಕೇಳಿ! ಮಕ್ಕಳಿಗೆ ಪದಗಳ ಅರ್ಥ ಗೊತ್ತಾಗುವ ಮುನ್ನವೇ ಅಕ್ಷರ ಕಲಿಯುವ ಮೊದಲೇ ಅದರ ಶಬ್ಧ ಅವರನ್ನು ಆಕರ್ಷಿಸುತ್ತದೆ. ಪದಗಳಿಗೆ ಮಕ್ಕಳ ಜಗತ್ತಿನಲ್ಲಿ ಜೀವವಿದೆ! ಈ ವಿಶೇಷ ಸಂಬಂಧವೇ ಅವರನ್ನು ಲಾಲಿ ಹಾಡುಗಳಿಗೆ, ಪ್ರಾಣಿಗಳ ಕೂಗುಗಳಿಗೆ, ಮಕ್ಕಳ ಪದ್ಯಗಳಿಗೆ ಅವರನ್ನು ಸೆಳೆಯುವುದು. ಹೀಗೆ ಒಂದು ವರ್ಷದ ಒಳಗೆ ವಿವಿಧ ರೀತಿಗಳಲ್ಲಿ ಕೇಳಿದ ಭಾಷೆ ಮಕ್ಕಳ ಮಿದುಳಿನಲ್ಲಿ ಕೆಲಕಾಲ ಅಡಗಿ ಕುಳಿತಿರುತ್ತದೆ. ನಿಧಾನವಾಗಿ ಒಂದು ವರ್ಷದ ಮಗು ಈ ಪರಿಚಿತ ಶಬ್ಧಗಳ ಗುಂಪನ್ನು ಗುರುತಿಸಲು ಆರಂಭಿಸುತ್ತದೆ. ವಯಸ್ಸು 3 ವರ್ಷವಾಗುವ ವೇಳೆಗೆ ಹೆಚ್ಚಿನ ಮಾತನ್ನು ಕಲಿತುಬಿಡುತ್ತದೆ. ಮಕ್ಕಳಿಗೆ ಭಾಷೆಯೆಲ್ಲವೂ ಅರ್ಥವಾಗುತ್ತಿದ್ದರೂ, ಕೆಲವೊಮ್ಮೆ ಹಿರಿಯರಿಗೆ ಗೊಂದಲ ತರುವ ವಿಷಯ ಅತಿಥಿಗಳ ಎದುರಿಗೆ, ಯಾವುದಾದರೂ ವಿಷಯಕ್ಕೆ ಮಗು ಅಳುವಾಗ, ಅಪ್ಪ-ಅಮ್ಮ ಒತ್ತಾಯಿಸಿದರೆ ‘ಅವರೇಕೆ ಸರಸರನೆ ಮಾತನಾಡುವುದಿಲ್ಲ?’ ಎಂಬುದು! ಆಗ ನಾವು ನೆನಪಿಸಿಕೊಳ್ಳಬೇಕಾದ್ದು ‘ಮಾತು’ ತನ್ನಿಂತಾನೇ ಬರುವಂಥದ್ದೇ ಹೊರತು, ಹೊರಗಿನ ಒತ್ತಡದಿಂದ ಅದು ಹೊರಬರಲು ಸಾಧ್ಯವಿಲ್ಲ! ಮಗು ಮಾತನಾಡಲು ಅದಕ್ಕೆ ಮನಸ್ಸಿರಬೇಕು, ಆಗ ಮಾತ್ರ ಹೇಳಲು ಸಾಧ್ಯ!

ವೈಜ್ಞಾನಿಕ ಅಂಶಗಳಲ್ಲಿ ನಮ್ಮ ಗಮನ ಸೆಳೆಯುವ ಮತ್ತೊಂದು ಪ್ರಮುಖ ಅಂಶವೆಂದರೆ ಬಹು ಭಾಷೆಗಳ ಕಲಿಕೆಯ ಸಾಮರ್ಥ್ಯ 3 ರಿಂದ 4ರ ವಯಸ್ಸಿನ ಮಕ್ಕಳಿಗೆ ಬಲವಾಗಿರುವುದು. ಉದಾಹರಣೆಗೆ ಅಪ್ಪ-ಅಮ್ಮಂದಿರ ಬಳಿ ಇಂಗ್ಲೀಷ್‌, ಅಜ್ಜ-ಅಜ್ಜಿಯ ಬಳಿ ಕನ್ನಡ ಮನೆ ಸಹಾಯಕಿಯ ಬಳಿ ತಮಿಳು - ಹೀಗೆ ಬೇರೆಬೇರೆ ವ್ಯಕ್ತಿಗಳ ಬಳಿ ಬೇರೆ ಬೇರೆ ಭಾಷೆಗಳನ್ನು ಮಾತನಾಡುವ ಎಷ್ಟೋ ಮಕ್ಕಳನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಇಲ್ಲಿ ಬಹು ಭಾಷಾ ಕಲಿಕೆ ಸಾಧ್ಯವಾಗುವುದೆಲ್ಲವೂ ‘ಮಾತಿ’ನಿಂದ ಎಂಬುದನ್ನು ನಾವು ಗಮನಿಸಬೇಕು.

ಕನ್ನಡವಾಗಲಿ, ಇಂಗ್ಲೀಷ್‌ ಆಗಲಿ ಅಥವಾ ಮತ್ಯಾವುದೇ ಭಾಷೆಯಾಗಲಿ, ಅದನ್ನು ಮಾತನಾಡಲು ಕಲಿತು, ನಂತರ ಅದನ್ನು ಬರೆಯುವುದನ್ನು ಕಲಿಯವುದಕ್ಕೂ, ಒಂದು ‘ವಿಷಯ’ (Odರಿhಛಿಣ) ದ ರೀತಿಯಲ್ಲಿ ಅದನ್ನು ಓದಿ-ಬರೆದು ಕಲಿಯುವುದಕ್ಕೂ ದೊಡ್ಡ ಅಂತರವಿದೆ. ಇಲ್ಲಿ ‘ಮಾತಿ’ನ ಮುಖ್ಯ ಉದ್ದೇಶವಾದ ‘ಸಂವಹನ’ದ ಕೊರತೆ ಮಕ್ಕಳ ಆಸಕ್ತಿಯನ್ನು ಕೆಡಿಸಿಬಿಡುತ್ತದೆ. ‘ವಿಷಯ’ವಾಗಿ ಕಲಿತದ್ದು ಮೌಖಿಕ ಸಂವಹನ - ದಿನನಿತ್ಯದ ಆಡುಮಾತಿಗೆ ಉಪಯುಕ್ತವಾಗದಿದ್ದರೆ ಮಕ್ಕಳ ಮಿದುಳು-ಮನಸ್ಸು ಅದನ್ನು ‘ನಿರುಪಯುಕ್ತ’ ಎಂಬುದಾಗಿ ಗ್ರಹಿಸುತ್ತದೆ. ಒಟ್ಟಿಗೇ ಬರಹ ಮತ್ತು ಮಾತು ಎರಡನ್ನೂ ಕಲಿಸುವುದು ಭಾಷಾ ಗ್ರಹಿಕೆಯ ಸಹಜ ಪ್ರಕ್ರಿಯೆಗೆ ದೊಡ್ಡ ಅಡ್ಡಿ. ಬರೆಯುವಿಕೆ ಶಿಕ್ಷಕರಿಗೆ ಸಾಮೂಹಿಕವಾಗಿ ಕಲಿಸುವುದು ಸುಲಭ ಎನಿಸುತ್ತದೆ. ಹಿರಿಯರಿಗಾಗಲಿ, ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿಗಳಿಗಾಗಲಿ ಬರೆಯುವ ಭಾಷೆಯೇ ಸುಲಭ, ತಮಗೆ ಅದರ ಮೇಲೆ ಹಿಡಿತವಿದೆ ಎನಿಸಿಬಿಡುತ್ತದೆ! ಮಾತನಾಡಿದರೆ ಬೇರೆಯವರು ತಪ್ಪು ಕಂಡುಹಿಡಿದು, ನಗುವ, ಮುಜುಗರಕ್ಕೆ ಒಳಗಾಗುವ ಸಂಕೋಚ ಅವರನ್ನು ಕಾಡುತ್ತದೆ. ಹಾಗಾಗಿ ಅವರು ‘ಭಾಷೆ’ಯನ್ನು ಮಾತನಾಡುವ ಬದಲು ‘ಬರೆಯು’ವುದಕ್ಕೆ ಸೀಮಿತವಾಗಿಸುತ್ತಾರೆ. ‘ಕೇಳಿ ಕಲಿಯಬೇಕಾದ ಭಾಷೆ - ಮಾತುಗಳು ಕೇಳುವುದರಿಂದ ‘ನೋಡಿ’ ಕಲಿಯಬೇಕಾದ ‘ಅಕ್ಷರ’ಗಳ ಗುಂಪಾಗಿ ಬಿಡುತ್ತವೆ. ‘ಕಣ್ಣಿನ ಮೂಲಕ ಭಾಷೆ ವೈಜ್ಞಾನಿಕವಾಗಿ ಬಹು ದುರ್ಬಲವಾದ ಭಾಷಾ ಪ್ರಕ್ರಿಯೆ.

ಹಾಗಿದ್ದರೆ ಈ ವೈಜ್ಞಾನಿಕ ಅಂಶಗಳನ್ನು ನಾವು ಪ್ರಾಯೋಗಿಕವಾಗಿ ಹೇಗೆ ಶಿಕ್ಷಣದಲ್ಲಿ ಬಳಸಬಹುದು ಎಂಬುದನ್ನು ನೋಡೋಣ.

ಕನ್ನಡವಾಗಲಿ, ಇಂಗ್ಲೀಷ್‌ ಆಗಲಿ ಇಂದು ಸ್ವಚ್ಛವಾಗಿ, ಸುಂದರವಾಗಿ ಮಾತನಾಡಬಲ್ಲ ಮಕ್ಕಳು ಕಡಿಮೆಯಾಗುತ್ತಿದ್ದಾರೆ. ಅದಕ್ಕೆ ಪ್ರಮುಖ ಕಾರಣ ನಾವು ಹಿರಿಯರು, ನಾವು ‘ಮಾತು’ ಕಲಿತ ಬಗೆಯನ್ನು ಮರೆತು, ಭಾಷೆ ಕಲಿಯುವ ಪ್ರಕ್ರಿಯೆಯ ವೈಜ್ಞಾನಿಕತೆಯನ್ನು ಗಮನಿಸದೆ ಮಕ್ಕಳಿಗೆ ‘ಮುಂದೆ ಬೇಕು, ಮುಂದೆ ಬೇಕು’ ಎಂದು ಇಂಗ್ಲೀಷ್‌ನಲ್ಲಿ ಇತರ ವಿಷಯಗಳನ್ನು ತುರುಕುತ್ತಿರುವುದು! ಸರಿಯಾಗಿ ನೋಡಿದರೆ ನಮಗೆ ಮಕ್ಕಳು ‘ಇಂಗ್ಲೀಷ್‌’ ಕಲಿಯುವುದಕ್ಕಿಂತ ಹೆಚ್ಚು ಮುಖ್ಯ ಇಂಗ್ಲೀಷ್‌ನಲ್ಲಿ ಇತರ ವಿಷಯಗಳನ್ನು ಓದಿ ಹೆಚ್ಚು ಅಂಕಗಳಿಸುವುದು! ಆದರೆ ಸಮಸ್ಯೆ ಏನೆಂದರೆ ಇಂಗ್ಲಿಷನ್ನೇ ಆಗಲಿ, ಕನ್ನಡವನ್ನೇ ಆಗಲಿ ಆ ಭಾಷೆಯ ಒಟ್ಟು ಅರ್ಥವನ್ನು, ಪೂರ್ಣವಾಗಿ ಗ್ರಹಿಸದೆ, ಸಂವಹಿಸದೆ, ಆ ಭಾಷೆ ನಮಗೆ ನಿರುಪಯುಕ್ತವಾಗುವುದು ಅಂದರೆ ಪರೀಕ್ಷೆಯಲ್ಲೇನೋ ಹೇಗೋ ಅಂಕಗಳನ್ನು ಗಳಿಸಿದರೂ, ಮುಂದೆ ತನಗೆ ಗೊತ್ತಿರುವ ಯಾವುದೇ ವಿಷಯವನ್ನು ಸರಿಯಾಗಿ ಹೇಳಲು, ಇನ್ನೊಬ್ಬರಿಗೆ ತಿಳಿಸಲು ಸಾಮರ್ಥ್ಯವಿರದಿರುವುದು. ಇದರ ಪರಿಣಾಮ ಇಂದು ಮಕ್ಕಳು ಹೆಸರಿಗೆ ‘ಇಂಗ್ಲೀಷ್‌’ ಮೀಡಿಯಂ. ಅವರಿಗೆ ಕನ್ನಡವೂ-ಇಂಗ್ಲೀಷೂ ಯಾವುದೂ ಸರಿಯಾಗಿ ಬರುವುದಿಲ್ಲ. ‘ಕನ್ನಡ ಕಷ್ಟ- ಇಂಗ್ಲೀಷ್‌ ಈಸಿ’ ಎಂದು ತೊಳಲಾಡುವ ಮಕ್ಕಳೂ, ಅಪ್ಪ-ಅಮ್ಮಂದಿರೂ ಅರ್ಥ ಮಾಡಿಕೊಳ್ಳಬೇಕಾದ್ದು ‘ಬರಹ’ದ ಮೇಲೆ ಭಾಷೆ ಅವಲಂಬಿಸಿರುವುದಿಲ್ಲ. ಅಂಕಗಳು ಇಂದಿನ ಶಿಕ್ಷಣ ಕ್ರಮದಲ್ಲಿ ಬರಹವನ್ನು ಅವಲಂಬಿಸಿವೆ ಅಷ್ಟೇ. ಅದರ ಉಪಯುಕ್ತತೆ ನಿಜವಾಗಿ ಮಾತನಾಡುವುದರಲ್ಲಿ.

ಹಾಗಾಗಿ ನಿಮ್ಮ ಮಕ್ಕಳು ‘ಇಂಗ್ಲೀಷ್‌ ಮೀಡಿಯಂ’ಗೇ ಹೋಗುತ್ತಿದ್ದರೂ ಪರವಾಗಿಲ್ಲ, ‘ಕನ್ನಡ’ವನ್ನು ಮಾತನಾಡುವುದನ್ನು ಪ್ರೋತ್ಸಾಹಿಸಿ. ಇಂಗ್ಲಿಷನ್ನು ಮಾತನಾಡಲು ನೀವೂ ಕಲಿಯಿರಿ. ಮನೆಯಲ್ಲಿ ಇಂಗ್ಲೀಷ್‌-ಕನ್ನಡಗಳನ್ನು ಬೆರೆಸದೆ, ನಿರ್ದಿಷ್ಟಅವಧಿಗಳಲ್ಲಿ ಕನ್ನಡ/ಇಂಗ್ಲೀಷ್‌ ಮಾತನಾಡುವ ಪರಿಪಾಠ ಬೆಳೆಸಿ. ಕನ್ನಡದಲ್ಲಿ ಮಾತನಾಡುವುದರ ಬಗೆಗೆ ಕೀಳರಿಮೆ ಬೆಳೆಸಬೇಡಿ, ಹಾಗೆಯೇ ಇಂಗ್ಲೀಷ್‌ ಮಾತನಾಡುವುದರ ಬಗೆಗೆ ‘ತಪ್ಪು ತಪ್ಪಾಗಿ’ ಮಾತನಾಡಿಯೂ ಒಣಜಂಭ ಬೆಳೆಸಬೇಡಿ. ‘ಸೆಡ್ಡು - ಬಟ್ಟು - ಇಟ್ಟು’ (saಜಿd ​ ಚ್ಠಿಠಿ ​ ಜಿಠಿ)ಗಳಿಂದ ಇಂಗ್ಲೀಷ್‌ ಭಾಷೆಯನ್ನು ನೋಯಿಸುವ ಬದಲು, ಹೇಗಾದರೂ ಇಂಗ್ಲೀಷ್‌ನಲ್ಲಿಯೇ ನಿಮ್ಮ ಅಭಿಪ್ರಾಯ ತಿಳಿಸುವ ಬದಲು ಕನ್ನಡದಲ್ಲಿ ಸ್ವಚ್ಛವಾಗಿ ಮಾತನಾಡಿ. ನೀವು ಯಾವ ವಯಸ್ಸಿನವರೇ ಇರಬಹುದು, ಏನೂ ವಿದ್ಯಾಭ್ಯಾಸ ಸಾಧ್ಯವಾಗದಿರಬಹುದು, ಆದರೂ ಈಗಲೂ ‘ಸ್ವಚ್ಛ ಇಂಗ್ಲೀಷ್‌’ - ಸ್ವಚ್ಛ ಕನ್ನಡ ಕಲಿಯಲು, ಮಾತನಾಡಲು ಸಾಧ್ಯವಿದೆ! ವೃತ್ತಪತ್ರಿಕೆಗಳನ್ನು ಓದುವುದು, ಆಯಾ ಭಾಷೆಯ ಹಾಡು ಕಲಿಯುವುದು, ಸಿನೆಮಾ ನೋಡುವುದು ಭಾಷೆಯನ್ನು ಸುಲಭವಾಗಿ ಕಲಿಯುವ ತಂತ್ರಗಳು. ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಭಾಷೆಯನ್ನು ಹೆಚ್ಚು ಪ್ರಬುದ್ಧವಾಗಿಸುವ ಉತ್ತಮ ತಂತ್ರ ಆ ಭಾಷೆಯ ಕಥೆ ಪುಸ್ತಕಗಳನ್ನು ಓದುವಂತೆ ಪ್ರೋತ್ಸಾಹ ನೀಡುವುದು. ಅಪ್ಪ-ಅಮ್ಮ ಇಂಥ ಪ್ರಯತ್ನಗಳನ್ನು ಮಾಡದೆ, ಶಾಲೆಗಳಲ್ಲಿ ನಡೆಯುವ ವಿವಿಧ ಭಾಷಾ ಸ್ಪರ್ಧೆಗಳಲ್ಲಿ (ಪ್ರಬಂಧ, ಭಾಷಣ, ಚರ್ಚಾ ಸ್ಪರ್ಧೆ, ಸ್ಪೆಲ್ಲಿಂಗ್‌ ಬೀ, ಉಕ್ತಲೇಖನ) ಮಕ್ಕಳನ್ನು ಭಾಗವಹಿಸುವಂತೆ ಮಾಡದೆ ಮಕ್ಕಳು ಯಾವುದೇ ಭಾಷೆಯನ್ನು ಸರಿಯಾಗಿ ಕಲಿಯಲು ಸಾಧ್ಯವಿಲ್ಲ.

ಆಯಾ ವಾತಾವರಣದ ಪ್ರಭಾವದಿಂದ ಸುಲಭವಾಗಿ ಯಾವುದೇ ಭಾಷೆಯನ್ನು ಯಾವುದೇ ವಯಸ್ಸಿನಲ್ಲಿ ಗ್ರಹಿಸಲು ಸಾಧ್ಯ. ಎಷ್ಟೋ ಜನ ಇಂಗ್ಲೀಷ್‌ನ ಗಂಧಗಾಳಿ ಇಲ್ಲದವರು, ವಿದೇಶಗಳಲ್ಲಿ ಇಂದು ನೆಲೆಸಿ ಆರಾಮವಾಗಿ, ಇಂಗ್ಲೀಷ್‌ ಪರಿಣತರಂತೆ, ಅಲ್ಲೇ ಹುಟ್ಟಿಬೆಳೆದಿರುವವರಂತೆ ಇಂಗ್ಲೀಷ್‌ನಲ್ಲಿ ಸರಾಗವಾಗಿ ಮಾತನಾಡುವುದೇ ಇದಕ್ಕೊಂದು ನಿದರ್ಶನ. ಕನ್ನಡವನ್ನು (ಅಥವಾ ಯಾವುದೇ ಒಂದು ಭಾಷೆಯನ್ನು) ಸರಿಯಾಗಿ ಕಲಿತರೆ, ಯಾವುದೇ ಮತ್ತೊಂದು ಭಾಷೆಯನ್ನು ಕಲಿಯುವುದು ಸುಲಭವಾಗುತ್ತದೆ ಎಂಬುದು ಇದರಿಂದ ಸುಸ್ಪಷ್ಟ. ಹಾಗಾಗಿ ನಿಮ್ಮ ಮಕ್ಕಳಿಗೆ ‘ಮುಂದೆ ಕಲಿಯಲು ಕಷ್ಟ’ ಎಂದು ಇಂಗ್ಲೀಷನ್ನು ಒತ್ತಾಯದಿಂದ, ‘ವಿಷಯ’ವಾಗಿ ತುರುಕಬೇಡಿ. ಬದಲು ಮಾತನಾಡಲು ಪ್ರೋತ್ಸಾಹಿಸಿ, ನೀವೂ ಮಾತನಾಡಿ ಆದರೆ ‘ಕಡ್ಡಾಯ’ವಾಗಿ ಕನ್ನಡವನ್ನು ಮಾತನಾಡಿ, ಮಕ್ಕಳಿಗೆ ಕನ್ನಡವನ್ನು ಕಲಿಸಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಚಾರವಿಲ್ಲದೆ ನಡೆಸುತ್ತಿರುವ ಪರೀಕ್ಷೆಗಳನ್ನು ಕಟ್ಟಿಸಿ, ನೀವೂ ಕಟ್ಟಿ! ಕನ್ನಡವನ್ನು ಬೆಳೆಸಿ, ಆಗ ನಿಮ್ಮ ಮಕ್ಕಳ ಇಂಗ್ಲೀಷೂ ಉಳಿಯುತ್ತದೆ!

Follow Us:
Download App:
  • android
  • ios