ನ್ಯೂಯಾರ್ಕ್   (ಸೆ.26)  ನಾನು 16 ವರ್ಷದವಳಾಗಿದ್ದಾಗಲೆ ನನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂದು ಭಾರತೀಯ ಮೂಲದ ಅಮೆರಿಕ ರೂಪದರ್ಶಿ, ಲೇಖಕಿ ಹಾಗೂ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಮಾಜಿ ಪತ್ನಿ ಪದ್ಮಾ ಲಕ್ಷ್ಮಿ ಹೇಳಿದ್ದಾರೆ. ಈ ಮೂಲಕ ಬರೋಬ್ಬರಿ 32 ವರ್ಷಗಳ ಬಾಂಬ್ ಸಿಡಿಸಿದ್ದಾರೆ.

ಅಮೆರಿಕದ ಜನಪ್ರಿಯ ಟಿವಿ ನಿರೂಪಕಿಯಾಗಿರುವ ಪದ್ಮಾ ಆಗ ನಡೆದ ಘಟನೆ ಹಾಗೂ ಇಷ್ಟು ವರ್ಷಗಳ ಕಾಲ ಮೌನವಾಗಿದ್ದ ಕಾರಣವನ್ನು ಹೇಳಿದ್ದಾರೆ.  ಅಮೆರಿಕದ ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಸುಂದರಿ ಈ ವಿಚಾರ ಬಹಿರಂಗ ಮಾಡಿದ್ದಾರೆ.

ನಾನು ಲಾಸ್ ಏಂಜೆಲ್ಸ್‍ನಲ್ಲಿದ್ದೆ. ನನಗೆ 23 ವರ್ಷದ ಸುಂದರ ತರುಣನೊಬ್ಬ ಪರಿಚಿತನಾದ. ಆತನೊಂದಿಗೆ ಸುತ್ತಾಟ ನಡೆದಿತ್ತು. ಕೆಲವು ತಿಂಗಳ ನಂತರ ಹೊಸ ವರ್ಷಾಚರಣೆ ವೇಳೆ ಆತ ನನ್ನನ್ನು ಬಲತ್ಕಾರವಾಗಿ ಅನುಭವಿಸಿದ.  ಎಷ್ಟೆ ತಡೆದರೂ ಅತ್ಯಾಚಾರದಿಂದ ಬಚಾವಾಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಅಮೆರಿಕದ ಸುಪ್ರೀಂಕೋರ್ಟ್‍ಗೆ ನಾಮನಿರ್ದೇಶನಗೊಂಡಿರುವ ಬ್ರೆಟ್ ಕವನೌಟ್ ವಿರುದ್ಧ ಲೈಂಗಿಕ ಆರೋಪಗಳು ಕೇಳಿ ಬಂದ ನಂತರ ನಾನು ಮೌನವಾಗಿರುವುದು ತರವಲ್ಲ ಎಂದು ಅನಿಸಿತು. ನನ್ನ ಹಾಗೆ ಈ ರೀತಿ ದೌರ್ಜನ್ಯಕ್ಕೆ ಗುರಿಯಾದವರು ಸಮಾಜದ ಮುನ್ನಲೆಗೆ ಬಂದು ಸತ್ಯ ಹೇಳಬೇಕು.

ನನ್ನ ತಾಯಿ ಚಿಕ್ಕವಳಿದ್ದಾಗ ಆಕೆಯ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು. ಆಕೆಯ ಮಲ ತಂದೆಯ ಸಂಬಂಧಿಕನೊಬ್ಬ ಅನಾವಶ್ಯಕವಾಗಿ ನನ್ನ ತಾಯಿಯ ಅಂಗಾಂಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡುತ್ತಿದ್ದ. ಆದರೆ ಸಮಾಜದ ಕಟ್ಟು ಪಾಡಿಗೆ ಬದ್ಧರಾಗಿ ನನ್ನ ತಾಯಿಗೂ ಎಂದಿಗೂ ಕರಾಳ ಸತ್ಯ ಹೇಳಲೇ ಇಲ್ಲ ಎಂದು ಬರೆದುಕೊಂಡಿದ್ದಾರೆ.