ಒಂದೂವರೆ ಶತಮಾನದ ನಂತರವೂ ಅಪ್ರಸ್ತುತ ಆಗದ ಚಿಂತಕ
ಗಾಂಧೀಜಿ ದೇಶದ ಎಲ್ಲಾ ಸಿದ್ಧಾಂತಗಳಿಗೂ ಸಕಾರಾತ್ಮವಾಗಿ ಸ್ಪಂದಿಸಿದವರು. ಎಲ್ಲವನ್ನೂ ಧ್ಯಾನಿಸಿ ತಮ್ಮದನ್ನಾಗಿ ಮಾಡಿಕೊಂಡವರು. ಮನುಷ್ಯ ನಿರಾಕರಿಸಬಹುದಾದ ಯಾವ ಪಂಥವೂ ಇಲ್ಲ ಎಂದು ನಂಬಿದ್ದವರು.
ಭಾರತದ ವರ್ತಮಾನವನ್ನು ಬದಲಾಯಿಸಿದ ಇಬ್ಬರು ದ್ರಷ್ಟಾರರೆಂದರೆ ಗಾಂಧಿ ಮತ್ತು ಬುದ್ಧ. ಇಬ್ಬರೂ ಮನುಷ್ಯನ ಮೂಲಭೂತ ಸಂಕಟಗಳನ್ನು ನೀಗಲೆಂದು ಹೊರಟವರು. ಎಲ್ಲರೂ ತಮ್ಮ ತಮ್ಮಲ್ಲೇ ಕೇಳಿಕೊಳ್ಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಯತ್ನಿಸಿದವರು. ಅದೇ ಕಾರಣಕ್ಕೆ ದೇಶಕ್ಕೆ ದೇಶವಾಸಿಗಳಿಗೆ ತಾವು ಬದುಕಿ ಶತಮಾನಗಳು ಉರುಳಿದ ನಂತರವೂ ಸ್ಫೂರ್ತಿಯಾಗಿ ಭರವಸೆಯಾಗಿ ಉಳಿದವರು.
ಗಾಂಧೀಜಿ ದೇಶದ ಎಲ್ಲಾ ಸಿದ್ಧಾಂತಗಳಿಗೂ ಸಕಾರಾತ್ಮವಾಗಿ ಸ್ಪಂದಿಸಿದವರು. ಎಲ್ಲವನ್ನೂ ಧ್ಯಾನಿಸಿ ತಮ್ಮದನ್ನಾಗಿ ಮಾಡಿಕೊಂಡವರು. ಮನುಷ್ಯ ನಿರಾಕರಿಸಬಹುದಾದ ಯಾವ ಪಂಥವೂ ಇಲ್ಲ ಎಂದು ನಂಬಿದ್ದವರು. ನಾನು ಸನಾತನಿ ಎಂದು ಗಾಂಧಿ ಮುಕ್ತವಾಗಿ ಸ್ಪಷ್ಟವಾಗಿ ಹೇಳಿಕೊಳ್ಳಬಲ್ಲವರಾಗಿದ್ದರು. ಅವರ ಮಟ್ಟಿಗೆ ಆ ಪದಕ್ಕೆ ಬೇರೆಯೇ ಅರ್ಥವಿಸ್ತಾರ ಇತ್ತು. ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧಿ ಹಿಂಸೆಯ ವಿರೋಧಿಯಾಗಿದ್ದವರು ಅನ್ನುವವರಿಗೆ ಗಾಂಧೀಜಿ ಯಾವುದು ಹಿಂಸೆಯಲ್ಲ ಎಂದೂ ಹೇಳಬಲ್ಲವರಾಗಿದ್ದರು. ಪಡೆಯುವುದಕ್ಕೆ ಅಹಿಂಸೆಯೇ ಹೊರತು ತಡೆಯುವುದಕ್ಕೆ ಅಲ್ಲ ಎಂದು ಅವರು ಹೇಳಿದ್ದರು.
ನಮ್ಮ ದೇಶಕ್ಕೆ ಬೇಕಾದ ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಅದರ ಸ್ವೀಕಾರಾರ್ಹ ಸ್ಥಿತಿಯಲ್ಲಿ ಗ್ರಹಿಸಿದವರು ಗಾಂಧಿ. ಅಂಬೇಡ್ಕರರು ಗ್ರಾಮಸಂಸ್ಕೃತಿಯ ದೋಷಗಳನ್ನು ಹೇಳುತ್ತಿದ್ದಾಗ ಗಾಂಧೀಜಿ ನನ್ನ ಗ್ರಹಿಕೆಯ ಗ್ರಾಮ ಅದಲ್ಲವೇ ಅಲ್ಲ, ನಾನು ಹೇಳುತ್ತಿರುವ ಗ್ರಾಮ ಹೊಸ ರೀತಿಯದ್ದು ಅಂತ ಮತ್ತೆ ಮತ್ತೆ ಹೇಳುತ್ತಿದ್ದರು. ರೈತನಾಗಲೀ, ಕೃಷಿ ಕಾರ್ಮಿಕನಾಗಲೀ ಅತ್ಯಂತ ಘನತೆಯಿಂದ ಬಾಳಬಲ್ಲ, ಹುಸಿಯಾದ ಸಮಾನತೆ ಇಲ್ಲದ ಗ್ರಾಮವೊಂದನ್ನು ರೂಪಿಸುವ ಅದಮ್ಯ ಕನಸು ಅವರಲ್ಲಿತ್ತು.
ಬಂಡವಾಳಶಾಹಿ ಈ ದೇಶದ ಶತ್ರು ಎಂದು ಎಲ್ಲರೂ ಮಾತಾಡುತ್ತಿದ್ದರೆ, ಗಾಂಧೀಜಿ ಅದರಲ್ಲೂ ಸಕಾರಾತ್ಮಕವಾದದ್ದನ್ನು ಹುಡುಕುತ್ತಿದ್ದರು. ಹೇಗೆ ಬಂಡವಾಳ ಶಾಹಿಯ ಮೂಲಕ ಸಮಾಜವಾದದ ಆಶಯಗಳನ್ನು ಜಾರಿಗೆ ತರಬಹುದು ಅನ್ನುವ ಬಗ್ಗೆ ಗಾಂಧೀಜಿ ಯೋಚಿಸಿದ್ದರು. ಅವರು ಹಣದ ವಿರೋಧಿಯಾಗಿರಲಿಲ್ಲ. ಅಕ್ರಮ ಸಂಪತ್ತು ಮತ್ತು ಅದರ ಅನಗತ್ಯ ಸಂಗ್ರಹಣೆಯನ್ನು ಖಂಡಿಸುತ್ತಿದ್ದರು.
ಕೇಡು ಯಾವುದು ಎಂಬುದು ಗಾಂಧೀಜಿಯವರಿಗೆ ಚೆನ್ನಾಗಿ ಗೊತ್ತಿತ್ತು. ದೇಶದ ಕೇಡನ್ನು ಕೂಡ ಅವರು ಗ್ರಹಿಸಬಲ್ಲವರಾಗಿದ್ದರು. ಅದೇ ಕಾರಣಕ್ಕೆ ಗಾಂಧೀಜಿ ಪ್ರತಿಪಾದಿಸಿದ್ದು ಸತ್ಯ ಅಸ್ತೇಯ ಅಹಿಂಸೆ ಅಸಂಗ್ರಹ ಅಪರಿಗ್ರಹ ಹೀಗೆ ಸಪ್ತಸೂತ್ರಗಳನ್ನು ಗ್ರಹಿಸಿ, ಅಳವಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ನಾವೀಗ ಬಳಸುವ ಅಭಿವೃದ್ಧಿ ಎಂಬ ಪದವನ್ನು ಗಾಂಧೀಜಿ ಇಷ್ಟಪಡುತ್ತಿರಲಿಲ್ಲ. ಅವರು ಅದಕ್ಕೆ ಪರ್ಯಾಯವಾಗಿ ಅಭ್ಯುದಯ ಎಂಬ ಪದವನ್ನು ಬಳಸುತ್ತಿದ್ದರು. ಅಭ್ಯುದಯ ಎಂಬ ಪದದಲ್ಲಿ ಕರುಣೆ, ಅನುಕಂಪ ಮತ್ತು ಪೂರ್ತಿಯಾಗಿ ಹಿಂದಿನದನ್ನು ಕಳೆದುಕೊಳ್ಳದ ಪರಂಪರಾ ಪ್ರಜ್ಞೆ ಇದೆ ಎನ್ನುತ್ತಿದ್ದರು.
ಬುದ್ಧನ ನಂತರ ಜಗತ್ತನ್ನು ಪ್ರಭಾವಿಸಿದ ಮಹಾನ್ ಚೇತನಗಳಲ್ಲಿ ಗಾಂಧಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಆಸೆಯ ದುಃಖಕ್ಕೆ ಮೂಲ ಎಂದು ಹೇಳಿದ ಬುದ್ಧ, ಆಸೆಯನ್ನು ನೀಗಿಕೊಳ್ಳುವುದು ಹೇಗೆ ಎಂದು ಕಲಿಸಿದ ಗಾಂಧಿ ಇಬ್ಬರೂ ಇವತ್ತು ನಮ್ಮನ್ನು ಕಾಡುತ್ತಿರುವ ಗೊಂದಲಕ್ಕೆ ಉತ್ತರಗಳೆಂದು ಸಮಾಜಶಾಸ್ತ್ರಜ್ಞರು ಹೇಳುತ್ತಾರೆ. ರಾಜ್ಯಶಾಸ್ತ್ರದಲ್ಲಿ ಅಧ್ಯಯನ ನಡೆಸುವವರಿಗೆ ಗಾಂಧಿ ಅಚ್ಚರಿಯ ಮಾದರಿಯಾಗಿ ಕಂಡಿದ್ದಾರೆ. ಇಂಥ ಒಬ್ಬ ಮನುಷ್ಯ ಈ ಭೂಮಿಯ ಮೇಲೆ ನಡೆದಾಡುತ್ತಿದ್ದ ಎಂದು ಹೇಳಿದರೆ ಮುಂದಿನ ದಿನಗಳಲ್ಲಿ ಯಾರೂ ನಂಬಲಾರರು ಎಂದು ಗಾಂಧೀಜಿಯ ಬಗ್ಗೆ ಬೆರಗಿನಿಂದ ಮಾತಾಡಿದವರಿಂದ ಹಿಡಿದು, ಗಾಂಧೀಜಿಯ ಗ್ರಹಿಕೆಗಳನ್ನು ಅಧ್ಯಯನ ನಡೆಸುವ ಮೂಲಕ ಅವರಿಗೆ ಆ ಸಮನ್ವಯ ಹೇಗೆ ಸಾಧ್ಯವಾಯಿತು ಎಂದು ಅರ್ಥಮಾಡಿಕೊಳ್ಳಲು ಯತ್ನಿಸಿದವರ ತನಕ ಅಸಂಖ್ಯಾತರು ಗಾಂಧೀಜಿಯ ಹಿಂದೆ ಬಿದ್ದಿದ್ದಾರೆ. ನನ್ನ ಜೀವನವೇ ನನ್ನ ಸಂದೇಶ ಎಂಬ ಹೇಳಿಕೆ ನೀಡುವುದು ಬಹುಶಃ ಗಾಂಧಿಗೆ ಮಾತ್ರ ಸಾಧ್ಯವಿತ್ತು.
ಅವರು ತಮ್ಮ ಆತ್ಮಚರಿತ್ರೆಯನ್ನು ಸತ್ಯದೊಂದಿಗೆ ನಡೆಸಿದ ಪ್ರಯೋಗ ಎಂದು ಕರೆದರು. ಗಾಂಧೀಜಿಗೆ ಸಂಗೀತ ಸಾಹಿತ್ಯ ಕಲೆ ಮತ್ತು ಧರ್ಮ ಜನಜೀವನದಲ್ಲಿ ಎಷ್ಟರ ಮಟ್ಟಿಗೆ ಬೆರೆತಿರಬೇಕು ಅನ್ನುವುದು ಕೂಡ ಗೊತ್ತಿತ್ತು. ಹೀಗಾಗಿ ಅವರು ಈ ಕಾಲದ ಎಲ್ಲ ಗೊಂದಲಗಳಿಗೆ ಉತ್ತರ ಕೂಡ. ಮೋಹನದಾಸ ಕರಮಚಂದ ಗಾಂಧಿ ಹುಟ್ಟಿ 149 ವರ್ಷಗಳು ತುಂಬಿ, 150ನೇ ವರ್ಷಾಚರಣೆಗೆ ಕಾಲಿಡುವ ಹೊತ್ತಲ್ಲಿ ಕನ್ನಡಪ್ರಭ ವಿಶೇಷ ಪುರವಣಿಯೊಂದನ್ನು ನಿಮ್ಮ ಮುಂದಿಡಲು ಹರ್ಷಿಸುತ್ತದೆ. ಗಾಂಧೀಜಿಯ ಕುರಿತು ಅವರು ತಮ್ಮ ಮೇಲೆ ಮಾಡಿರುವ ಪರಿಣಾಮಗಳ ಕುರಿತು ಕನ್ನಡದ ಚಿಂತಕರು ತಮ್ಮ ಅಭಿಪ್ರಾಯಗಳನ್ನು ಬರಹಗಳ ಮೂಲಕ ಇಲ್ಲಿ ಹಂಚಿಕೊಂಡಿದ್ದಾರೆ.
ಗಾಂಧೀಜಿಯನ್ನು ಮತ್ತೆ ನೆನಪಿಸಿಕೊಳ್ಳುವ, ಅವರ ಸಮಕಾಲೀನ ಪ್ರಸ್ತುತತೆಯನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಯತ್ನ.
- ರವಿ ಹೆಗಡೆ, ಪ್ರಧಾನ ಸಂಪಾದಕ