Asianet Suvarna News Asianet Suvarna News

ಸಂಪಾದಕೀಯ : ಗಾಂಧಿ ತತ್ವಗಳ ಪಾಲನೆಯಲ್ಲೇ 150ನೇ ವರ್ಷಾಚರಣೆ ಯಶಸ್ಸು

ಗಾಂಧೀಜಿಯವರ ಪ್ರಮುಖ ತತ್ವಗಳೆಂದರೆ ಅಹಿಂಸೆ, ಸತ್ಯ, ಸ್ವಾವಲಂಬನೆ, ಸರಳ ಬದುಕು ಮತ್ತು ಧಾರ್ಮಿಕ ಸಾಮರಸ್ಯ. ಇವುಗಳನ್ನು ಅಳವಡಿಸಿಕೊಳ್ಳುವುದರಲ್ಲೇ 150ನೇ ವರ್ಷಾಚರಣೆಯ ಆಶಯ ಅಡಗಿದೆ.

India MK Gandhi 150 Yrs Gandhi Jayanti Kannada Prabha Editorial
Author
Bengaluru, First Published Oct 2, 2018, 10:35 AM IST

ಗಾಂಧೀಜಿ ಮೃತಪಟ್ಟು 70 ವರ್ಷಗಳಾಗಿವೆ. ಅವರ ತತ್ವ ಹಾಗೂ ಆದರ್ಶಗಳು ಈಗ ಎಷ್ಟು ಪ್ರಸ್ತುತ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತಿರುತ್ತದೆ. ಅವು ಭಾಷಣಕ್ಕಷ್ಟೇ ಸೀಮಿತವಲ್ಲ. ನಿಜಕ್ಕೂ ಗಾಂಧೀಜಿ ಅವರ ತತ್ವಗಳು ಸಾರ್ವಕಾಲಿಕ ಪ್ರಸ್ತುತತೆ ಹೊಂದಿವೆ. ಅವು ಎಲ್ಲ ಕಾಲಕ್ಕೂ ಸಲ್ಲುವ ತತ್ವಗಳು. ಅವುಗಳಿಂದಾಗಿಯೇ ಗಾಂಧೀಜಿ ಮಹಾತ್ಮರಾದರು. ಆ ತತ್ವಗಳನ್ನು ಬದುಕಿನಲ್ಲೂ, ಸರ್ಕಾರಗಳಲ್ಲೂ ಅಳವಡಿಸಿಕೊಳ್ಳುವುದರಲ್ಲೇ ಗಾಂಧೀಜಿಯವರ 150ನೇ ಜನ್ಮ ವರ್ಷೋತ್ಸವ ಆಚರಣೆಯ ಆಶಯ ಅಡಗಿದೆ. ಗಾಂಧೀಜಿಯವರ ಪ್ರಮುಖ ತತ್ವಗಳೆಂದರೆ ಅಹಿಂಸೆ, ಸತ್ಯ, ಸ್ವಾವಲಂಬನೆ, ಸರಳ ಬದುಕು ಮತ್ತು ಧಾರ್ಮಿಕ ಸಾಮರಸ್ಯ.

ಜಗತ್ತೇ ಇಂದು ಅಹಿಂಸೆಯ ಜಪ ಮಾಡುತ್ತಿದೆ. ಇದನ್ನೊಂದು ಆಂದೋಲನದಂತೆ ಜನಪ್ರಿಯವಾಗಿಸಿದ್ದವರು ಗಾಂಧೀಜಿ. ಸ್ವಾತಂತ್ರ್ಯ ಹೋರಾಟ ಸಂಪೂರ್ಣ ಅಹಿಂಸಾತ್ಮಕವಾಗಿರಬೇಕೆಂಬುದು ಅವರ ಹಟವಾಗಿತ್ತು. ಅದರಂತೆ ನಡೆದುಕೊಂಡ ಅವರು, ಜಗತ್ತಿಗೆ ಅಹಿಂಸೆಯನ್ನು ಪರಮ ಮಂತ್ರದಂತೆ ಬೋಧಿಸಿದರು. ಇಂದು ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜಿಕ ಹೀಗೆ ನಾನಾ ರೀತಿಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಿಂಸಾಚಾರಗಳು ಹೆಚ್ಚುತ್ತಿವೆ. ಹಣವನ್ನೇ ಎಲ್ಲದಕ್ಕೂ ಮಾನದಂಡವನ್ನಾಗಿ ಮಾಡಿ, ಶ್ರೀಮಂತರು ಮಾತ್ರ ಚೆನ್ನಾಗಿ ಬದುಕುವ ವಾತಾವರಣವನ್ನು ನಿರ್ಮಿಸಿರುವುದು ಆರ್ಥಿಕ ಹಿಂಸೆಯಲ್ಲವೇ? ತಾರತಮ್ಯ ಹಾಗೂ ಒತ್ತಡಯುಕ್ತ ಸಮಾಜವನ್ನು ನಿರ್ಮಿಸಿರುವುದು ಸಾಮಾಜಿಕ ಹಿಂಸೆ. ಒಬ್ಬರ ಸಾಂಸ್ಕೃತಿಕ ಹಾಗೂ ಧಾರ್ಮಿಕ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಿಂಸೆ. ಇವೆಲ್ಲವೂ ಇಂದು ಹೆಚ್ಚುತ್ತಲೇ ಸಾಗುತ್ತಿವೆ. ಇವುಗಳನ್ನು ತೊಡೆದುಹಾಕಿದರೆ ಮಾತ್ರ ಸುಂದರ ಸಮಾಜವನ್ನು ನಿರ್ಮಿಸಲು ಸಾಧ್ಯ.

ಸತ್ಯಕ್ಕೆ ಸಾವಿಲ್ಲ. ಗಾಂಧೀಜಿ ತಾನು ಹೇಳುತ್ತಿರುವ ಸತ್ಯವೆಂಬ ಸಿದ್ಧಾಂತ ತನ್ನದೇನೂ ಅಲ್ಲ, ಇದು ಬೆಟ್ಟದಷ್ಟುಹಳೆಯದು ಎಂದು ಹೇಳಿದ್ದರು. ಸತ್ಯವೆಂಬುದು ಸಾರ್ವಕಾಲಿಕ ಮೌಲ್ಯ. ಆದರೆ, ಇಂದು ಸಮಾಜದ ನಾನಾ ರಂಗಗಳನ್ನು ಸುಳ್ಳು ಆಳುತ್ತಿದೆ. ರಾಜಕೀಯದಲ್ಲಿ ಸುಳ್ಳು ತುಂಬಿದೆ. ವ್ಯಾಪಾರದಲ್ಲಿ ಸುಳ್ಳು ತುಂಬಿದೆ. ಜನಸಾಮಾನ್ಯರ ಬದುಕಿನಲ್ಲೂ ಕಪಟಗಳು ತುಂಬಿವೆ. ಸತ್ಯದ ಬದುಕು ಕಷ್ಟ, ಸುಳ್ಳಿನ ಬದುಕು ಸುಲಭ ಎಂದು ಜನರು ಕಂಡುಕೊಳ್ಳುತ್ತಿದ್ದಾರೆ. ಇದರಿಂದ ಬೇರೆಯವರಿಗಾಗುವ ನಷ್ಟವನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಸತ್ಯದ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಿದೆ.

ಜನರಿಗೆ ಸ್ವಾವಲಂಬನೆಯನ್ನು ಕಲಿಸುವುದಕ್ಕೆಂದೇ ಗಾಂಧೀಜಿ ಚರಕದಿಂದ ನೂಲು ತೆಗೆಯುತ್ತಿದ್ದರು. ನಮ್ಮ ಕಾಲ ಮೇಲೆ ನಾವು ನಿಂತುಕೊಳ್ಳಬೇಕು ಎಂದು ಸದಾ ಹೇಳುತ್ತಿದ್ದರು. ಪ್ರತಿಯೊಬ್ಬ ವ್ಯಕ್ತಿ ಖಾಸಗಿಯಾಗಿ ಸ್ವಾವಲಂಬಿಯಾದರೆ ಅವರು ಬದುಕುವ ಸಮಾಜ ಕೂಡ ಸ್ವಾವಲಂಬಿಯಾಗುತ್ತದೆ. ಸ್ವಾವಲಂಬಿ ಕುಟುಂಬ, ಸ್ವಾವಲಂಬಿ ಊರು, ಸ್ವಾವಲಂಬಿ ಸಮಾಜ, ಸ್ವಾವಲಂಬಿ ರಾಜ್ಯ, ಸ್ವಾವಲಂಬಿ ದೇಶ... ಇವೆಲ್ಲ ಎಷ್ಟುಮುಖ್ಯ ಎಂಬುದು ಉದಾರೀಕರಣದ ಈ ಕಾಲದಲ್ಲಿ ಜನರಿಗೆ ಚೆನ್ನಾಗಿ ಅರ್ಥವಾಗಿದೆ. ಹೀಗಾಗಿ ಗಾಂಧೀಜಿಯವರ ಸ್ವಾವಲಂಬನೆಯ ಮಂತ್ರವನ್ನು ಎಲ್ಲರೂ ಪಠಿಸಲೇಬೇಕಿದೆ.

ಎಲ್ಲಾ ಐಷಾರಾಮಗಳನ್ನೂ ತೊರೆದು ಪ್ರತಿಯೊಬ್ಬರೂ ಸರಳವಾಗಿ, ಅತ್ಯಂತ ಕನಿಷ್ಠ ಅಗತ್ಯಗಳೊಂದಿಗೆ ಮಾತ್ರ ಜೀವಿಸಬೇಕು ಎಂದು ಗಾಂಧೀಜಿ ಹೇಳುತ್ತಿದ್ದರು. ಅದರಂತೆ ಅವರು ಒಂದು ತುಂಡು ಪಂಚೆಯನ್ನು ಮಾತ್ರ ಧರಿಸುತ್ತಿದ್ದರು. ಇದರ ಮಹತ್ವವೇನು ಎಂಬುದು ಇಂದು ಜನರಿಗೆ ಅರಿವಾಗಿದೆ. ಎಲ್ಲರೂ ಈಗ ಸರಳ ಬದುಕಿನ ಬಗ್ಗೆ ಮಾತನಾಡುತ್ತಿದ್ದಾರೆ. ಸರಳ ಬದುಕು ಅಂದರೆ ಆಡಂಬರವಿಲ್ಲದ ಬದುಕಷ್ಟೇ ಅಲ್ಲ, ನಮ್ಮ ಬದುಕಿನ ಅಗತ್ಯಗಳನ್ನು ಅತ್ಯಂತ ಕಡಿಮೆ ಮಾಡಿಕೊಳ್ಳುವುದು ಕೂಡ. ಹೀಗೆ ಬದುಕುವುದರಿಂದ ಪರಿಸರವನ್ನು ರಕ್ಷಿಸಬಹುದು, ದುಡಿಮೆಯ ಒತ್ತಡವನ್ನು ನಿವಾರಿಸಿಕೊಳ್ಳಬಹುದು, ಭವಿಷ್ಯದ ಕುರಿತ ಆತಂಕವನ್ನು ದೂರ ಮಾಡಿಕೊಳ್ಳಬಹುದು. ಗ್ಯಾಜೆಟ್‌ ಯುಗದಲ್ಲಿ ಸರಳತೆಯ ಅಗತ್ಯ ಎಲ್ಲರಿಗೂ ಅನಿವಾರ್ಯವಾಗಿ ಅರಿವಿಗೆ ಬರುತ್ತಿದೆ.

ಧಾರ್ಮಿಕ ಸಾಮರಸ್ಯದ ಬಗ್ಗೆ ಗಾಂಧೀಜಿ ಸದಾ ಮಾತನಾಡುತ್ತಿದ್ದರು. ಧರ್ಮ ಧರ್ಮಗಳ ನಡುವೆ ಸಾಮರಸ್ಯವಿದ್ದರೆ ಮಾತ್ರ ಸಮಾಜ ದೇಶ ಸಮೃದ್ಧವಾಗಿರುತ್ತದೆ ಮತ್ತು ಜನರು ನೆಮ್ಮದಿಯಿಂದ ಇರುತ್ತಾರೆ ಎಂದು ಹೇಳುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬ್ರಿಟಿಷರು ಭಾರತದಲ್ಲಿ ಹಿಂದು-ಮುಸ್ಲಿಮರನ್ನು ಪರಸ್ಪರ ಎತ್ತಿ ಕಟ್ಟಿಬೇಳೆ ಬೇಯಿಸಿಕೊಳ್ಳಲು ನೋಡಿದ್ದರು. ಇಂದು ಕೂಡ ದೇಶದ ರಾಜಕಾರಣಿಗಳು ಅದನ್ನೇ ಮಾಡುತ್ತಿದ್ದಾರೆ. ಚುನಾವಣೆ ಬಂತೆಂದರೆ ಕೋಮು ಗಲಭೆಗಳು ಹೆಚ್ಚುತ್ತವೆ. ಇವುಗಳಿಂದ ಅಂತಿಮವಾಗಿ ಹಾನಿಯಾಗುವುದು ಜನಸಾಮಾನ್ಯರಿಗೆ. ಧರ್ಮಗಳ ನಡುವಿನ ವಿಶ್ವಾಸದ ಕೊರತೆಯಿಂದ ಏನೇನು ಸಮಸ್ಯೆಗಳಾಗಬಹುದು ಎಂಬುದನ್ನು ಪ್ರತಿದಿನ ನೋಡುತ್ತಿದ್ದೇವೆ. ಹೀಗಾಗಿ ಗಾಂಧೀಜಿಯವರ ಧಾರ್ಮಿಕ ಸಾಮರಸ್ಯದ ಪಾಠವನ್ನು ಮತ್ತೊಮ್ಮೆ ಎಲ್ಲರೂ ಕೇಳಿಸಿಕೊಳ್ಳುವ ತುರ್ತು ಸನ್ನಿವೇಶವಿದೆ.

Follow Us:
Download App:
  • android
  • ios