ಗಾಂಧಿವಾದವನ್ನು ಹುಡುಕುತ್ತಾ...
ಗಾಂಧಿ ಬರೆದದ್ದು, ಬದುಕಿದ್ದು-ಹಂಬಲಿಸಿದ್ದು, ಇಡಿಯಾಗಿ, ಸಮಗ್ರವಾಗಿ, ಧರ್ಮ,ಸಂಸ್ಕೃತಿ, ರಾಜಕೀಯ, ಆರ್ಥಿಕತೆ,ನೈತಿಕತೆ, ಆಸ್ಪಶ್ಯತೆ, ಸ್ತ್ರೀ ಸುಧಾರಣೆ, ಪಾನನಿರೋಧ, ಗ್ರಾಮಸ್ವರಾಜ್ಯ, ವಿಕೇಂದ್ರೀಕರಣ,ಸ್ವಾತಂತ್ರ್ಯದ ಪ್ರಶ್ನೆ- ಎಲ್ಲದಕ್ಕೂ ಏಕಕಾಲದಲ್ಲೇ ಸಮಾನವಾದ ತೀವ್ರತೆಯಿಂದ, ಪ್ರಾಮುಖ್ಯತೆಯಿಂದ ಸ್ಪಂದಿಸುತ್ತಿದ್ದರು. ನಮ್ಮಲ್ಲಿ ಬಹುಪಾಲು ಜನಕ್ಕೆ ಹೀಗೆ ಇಡಿಯಾಗಿ, ಸಮಗ್ರವಾಗಿ ಸ್ಪಂದಿಸಲು ಬರುವುದಿಲ್ಲ. ಬದುಕಿನ ಕೆಲವು ಆಯಾಮಗಳಿಗೆ ಮಾತ್ರ ಸ್ಪಂದಿಸುತ್ತೇವೆ. ಹಾಗೆಯೇ ಗಾಂಧಿ-ಆದಷ್ಟು ಎಲ್ಲ ಜನರನ್ನು, ಎಲ್ಲ ಹಿನ್ನೆಲೆಯವರನ್ನು, ಸ್ವಭಾವದವರನ್ನು ಒಳಗು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು.
- ಕೆ ಸತ್ಯನಾರಾಯಣ
ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ನಂತರ ಮತ್ತೆ ಮತ್ತೆ ವ್ಯಾಖ್ಯಾನಕ್ಕೂ ಅಪವ್ಯಾಖ್ಯಾನಕ್ಕೂ ಒಳಗಾಗುತ್ತಿರುವುದು ಗಾಂಧಿ ಎಂಬ ವ್ಯಕ್ತಿತ್ವ ಮತ್ತು ವಿದ್ಯಮಾನವೇ. ನಾನು ಹೇಳುತ್ತಿರುವುದು ಪಂಡಿತರ ನಡುವಿನ ವ್ಯಾಖ್ಯಾನವನ್ನು ಕುರಿತು ಮಾತ್ರವಲ್ಲ.
ನಮ್ಮಲ್ಲಿ ಪ್ರತಿಯೊಬ್ಬರಿಗೂ ಗಾಂಧಿ ಕುರಿತಂತೆ ಎಷ್ಟು ಸಲ ಅಭಿಪ್ರಾಯಗಳು ಬದಲಾಗಿಲ್ಲ? ಹಾಗೆಯೇ ನಾವು ಗಾಂಧಿಯನ್ನು ಇಷ್ಟಪಟ್ಟಾಗಲೂ ಇಡಿಯಾಗಿ ಇಷ್ಟಪಡಲು ಸಾಧ್ಯವಾಗುವುದಿಲ್ಲ- ಯಾಕೆ? ಯಂತ್ರ ನಾಗರೀಕತೆ, ಆಧುನಿಕತೆಯನ್ನು ಕುರಿತು ಗಾಂಧಿ ಎತ್ತಿದ ಪ್ರಶ್ನೆಗಳು ನಮಗೆ ಸರಿಯೆನಿಸಿದಾಗಲೂ ಅವರ ಧಾರ್ಮಿಕ ಪ್ರವೃತ್ತಿ, ಅಸ್ತಿತ್ವತೆಯ ಒಲವು ಜುಗುಪ್ಸೆ ಹುಟ್ಟಿಸುತ್ತದೆ. ಇನ್ನು ಕೆಲವರಿಗೆ ಗಾಂಧಿಯ ವಿಚಾರಗಳು ಮಾನಸಿಕವಾಗಿ ಒಪ್ಪಿಗೆಯಾದರೂ ಕಾರ್ಯ ಸಾಧ್ಯವಲ್ಲ ಎನಿಸುತ್ತದೆ.
ಇಷ್ಟು ಮಾತ್ರವಲ್ಲ. ಪರಸ್ಪರ ವಿರುದ್ಧ ಅಭಿಪ್ರಾಯವಿರುವವರಲ್ಲೂ ಗಾಂಧಿಯನ್ನು ಕುರಿತು ವಿರೋಧಿಸುವಾಗ ಮಾತ್ರ ಒಟ್ಟಾಗಿರುತ್ತಾರೆ. ದಲಿತರೂ, ಮುಸ್ಲಿಮರು, ಕಮ್ಯುನಿಷ್ಟರು, ಹಿಂದೂಗಳಲ್ಲಿ ಕೆಲವು ಜಾತಿ-ಜನಾಂಗಗಳು, ಬೇರೆ ಬೇರೆ ಕಾರಣಗಳಿಗಾಗಿ ಗಾಂಧಿಯನ್ನು ಒಪ್ಪದೆ ಇರುವವರಲ್ಲಿ ಮಾತ್ರ ಒಂದಾಗುತ್ತಾರೆ. ಹಾಗೆಯೇ ಈಚಿನ ದಿನಗಳಲ್ಲಿ ಗಾಂಧಿ ವಿಚಾರಗಳನ್ನು ಗೌರವಿಸಿ, ಪುನರ್ ಪರಿಶೀಲಿಸಬೇಕು ಎನ್ನುವ ದಲಿತ ಯುವಕರೂ ಇದ್ದಾರೆ. ಈವತ್ತಿನ ದಿನಗಳಲ್ಲಿ ಹಿಂದುತ್ವ ಮತ್ತು ವೇಗದ ಅಭಿವೃದ್ಧಿಯನ್ನು ಕುರಿತು ಮಾತನಾಡುವ ಭಾರತೀಯ ಜನತಾ ಪಕ್ಷವೇ ೧೯೮೦ರಲ್ಲಿ ಸ್ಥಾಪನೆಯಾದಾಗ ಗಾಂಧಿ ಪ್ರಣೀತ ಸಮಾಜವಾದವೇ ತನ್ನ ಗುರಿ ಎಂದು ಘೋಷಿಸಿಕೊಂಡಿತ್ತು. ತಮಾಷೆಯೆಂದರೆ ಗಾಂಧಿ ಬದುಕಿದ್ದಾಗಲೂ ಹೀಗೇ ಆಗಿತ್ತು. ಗಾಂಧಿ-ಉಗ್ರವಾದಿಗಳು, ಗಾಂಧಿ-ಸನಾತನಿಗಳು, ಗಾಂಧಿ-ಕಮ್ಯುನಿಷ್ಟರು, ಗಾಂಧಿಯ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಒಲವಿದ್ದ ಕಾಂಗ್ರೆಸ್ಸಿಗರು, ಕೇವಲ ರಾಜಕೀಯ ಚುನಾವಣಾ ಅಧಿಕಾರಗಳನ್ನು ಬಯಸುವ ಕಾಂಗ್ರೆಸ್ಸಿಗರು-ಹೀಗೆ ವಿರೋಧ -ಪ್ರತಿರೋಧ-ಹತ್ತು ಹಲವು ನೆಲೆಗಳಿಂದ. ಈಗ ಗಾಂಧಿ -150 ರ ಸಂದರ್ಭದಲ್ಲೂ ಇದೇ ರೀತಿಯ ವಾಗ್ವಾದ - ಗೊಂದಲಗಳು. ಈ ವಿದ್ಯಮಾನವನ್ನು, ವೈಚಿತ್ರ್ಯವನ್ನು ಕಾರಣ- ಪರಿಣಾಮಗಳ ಸಮೇತ ಪರಿಶೀಲಿಸುವುದೇ ಗಾಂಧಿಯನ್ನು ಪ್ರವೇಶಿಸುವ, ನಮ್ಮವನನ್ನಾಗಿ ಮಾಡಿಕೊಳ್ಳುವ ಸರಿಯಾದ, ಗೌರವಪೂರ್ಣವಾದ ಕ್ರಮವಿರಬಹುದು.
ಗಾಂಧಿಯನ್ನು ಹುಡುಕಿಕೊಂಡು ಹೋಗಲಾಗುವುದಿಲ್ಲ. ಪುಸ್ತಕಗಳ, ಅಧ್ಯಯನಗಳ ಮೂಲಕ ಪಡೆಯುವುದಕ್ಕಾಗುವುದಿಲ್ಲ. ನಮ್ಮ ಹುಡುಕಾಟ ಪಕ್ವವಾಗಿದ್ದಾಗ, ಒಳಹಸಿವು ತೀವ್ರವಾಗಿದ್ದಾಗ, ಆಧ್ಯಾತ್ಮಿಕ ಶೋಧನೆ ಪ್ರಾಮಾಣಿಕವಾಗಿದ್ದಾಗ, ಗಾಂಧಿಯೇ ಸಹಜವಾಗಿ ನಮ್ಮನ್ನು ಹುಡುಕಿಕೊಂಡು ಬಂದು, ನಮ್ಮನ್ನು ಶೋಧಿಸಿ, ನಮ್ಮನ್ನೇ ನಮಗೆ ತೆರೆಯುತ್ತಾರೆ ಎಂಬ ಒಂದು ಮಾತಿದೆ. ಈ ಮಾತನ್ನು ಸರಿಯಾಗಿ ಗ್ರಹಿಸಿದಾಗಲೇ ಗಾಂಧಿಯ ಬಗ್ಗೆ ನಮ್ಮೊಳಗೇ ಬದಲಾಗುವ ಅಭಿಪ್ರಾಯ, ಇರುವ ವಿರೋಧಾಭಾಸ, ಒಂದಲ್ಲ ಒಂದು ನೆಲೆಯಿಂದ ಸಾರ್ವಜನಿಕವಾಗಿ ಸದಾ ಮೂಡುವ ವಿರೋಧ-ಪ್ರತಿರೋಧ -ಇವೆಲ್ಲ ಸರಿಯಾಗಿ ಅರ್ಥವಾಗುತ್ತದೆ.
ಗಾಂಧಿ ಬರೆದದ್ದು, ಬದುಕಿದ್ದು-ಹಂಬಲಿಸಿದ್ದು ಇಡಿಯಾಗಿ, ಸಮಗ್ರವಾಗಿ, ಧರ್ಮ, ಸಂಸ್ಕೃತಿ, ರಾಜಕೀಯ, ಆರ್ಥಿಕತೆ, ನೈತಿಕತೆ, ಆಸ್ಪಶ್ಯತೆ, ಸ್ತ್ರೀ ಸುಧಾರಣೆ, ಪಾನನಿರೋಧ, ಗ್ರಾಮಸ್ವರಾಜ್ಯ, ವಿಕೇಂದ್ರಿಕರಣ, ಸ್ವಾತಂತ್ರ್ಯದ ಪ್ರಶ್ನೆ- ಎಲ್ಲದಕ್ಕೂ ಏಕಕಾಲದಲ್ಲೇ ಸಮಾನವಾದ ತೀವ್ರತೆಯಿಂದ, ಪ್ರಾಮುಖ್ಯತೆಯಿಂದ ಸ್ಪಂದಿಸುತ್ತಿದ್ದರು. ನಮ್ಮಲ್ಲಿ ಬಹುಪಾಲು ಜನಕ್ಕೆ ಹೀಗೆ ಇಡಿಯಾಗಿ, ಸಮಗ್ರವಾಗಿ ಸ್ಪಂದಿಸಲು ಬರುವುದಿಲ್ಲ. ಬದುಕಿನ ಕೆಲವು ಆಯಾಮಗಳಿಗೆ ಮಾತ್ರ ಸ್ಪಂದಿಸುತ್ತೇವೆ. ಹಾಗೆಯೇ ಗಾಂಧಿ-ಆದಷ್ಟು ಎಲ್ಲ ಜನರನ್ನು, ಎಲ್ಲ ಹಿನ್ನೆಲೆಯವರನ್ನು, ಸ್ವಭಾವದವರನ್ನು ಒಳಗು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಮನುಷ್ಯ ಸ್ವಭಾವದಲ್ಲೇ-ಕೆಲವರನ್ನು ಹೊರಗಿಟ್ಟು-ಪ್ರತ್ಯೇಕಿಸಿ ಕಾಣುವ ಪ್ರವೃತ್ತಿಯಿದೆ. ಹಾಗಾಗಿ ಪ್ರಾರಂಭದಿಂದಲೇ ಗಾಂಧಿ ನಮ್ಮ ಕೈಗೆ ಪ್ರಾಥಮಿಕ ನೆಲೆಗಳಲ್ಲಿ ಸಿಗುವುದೇ ಕಷ್ಟ.
ಇನ್ನು ಧರ್ಮ-ಸಂಸ್ಕೃತಿಯನ್ನು ಕುರಿತು ಅವರು ಪರಿಭಾವಿಸುತ್ತಿದ್ದ ರೀತಿಗೂ, ನಮ್ಮ ರೀತಿಗೂ ಕೂಡ ಮೂಲಭೂತವಾದ ವ್ಯತ್ಯಾಸವಿದೆ. ಈ ತುಗಳನ್ನು ಸಾವಧಾನವಾಗಿ ಗಮನಿಸಿ. ‘ಸತ್ಯ, ಅಹಿಂಸೆ, ಬ್ರಹ್ಮಚರ್ಯ- ಹಿಂದೂ ಧರ್ಮದ ಮೂಲಭೂತ ಸಿದ್ಧಾಂತಗಳು. ಇದಕ್ಕೆ ವಿರೋಧವಾದ ಅಭಿಪ್ರಾಯಗಳನ್ನು ಯಾರು ಹೇಳಿದರೂ, ಎಲ್ಲಿಂದ ಬಂದರೂ ಹಿಂದುವೆನ್ನುವವನು ಅಪ್ರಾಮಾಣಿಕ ಎಂದು ತಿಳಿಯಬೇಕು. ಸರ್ವ ಜೀವಜಾತಿ ಒಂದೇ ಆಗಿದೆ, ಪವಿತ್ರವಾಗಿದೆ. ಆದುದರಿಂದ ಅಹಿಂಸೆಯ ಜಾಗೃತ ಲಕ್ಷಣ ಪ್ರೇಮ ಅಥವಾ ನಿವೈರ‌್ಯಕ್ಕೆ. ಹಿಂದೂಧರ್ಮಕ್ಕೆ ಒಂದು ವಿಶಿಷ್ಟ ಮತ ಎಂಬುದಿಲ್ಲ. ಇದು ಸುದೈವವೆನ್ನಿ, ದುರ್ದೈವವೆನ್ನಿ. ಹಿಂದು ಎಂಬ ಮತವೇ ಇದ್ದರೆ ಅದನ್ನು ನಾನು ಹೀಗೆ ವಿವರಿಸುತ್ತೇನೆ.
‘ಅಹಿಂಸಾ ಸಾಧನೆಯ ಮೂಲಕ ಸತ್ಯವನ್ನು ಶೋಧಿಸುವುದು. ದೇವರಲ್ಲಿ ನಂಬಿಕೆಯಿಲ್ಲದವನು ಕೂಡ ಹಿಂದೂ ಎಂದು ಹೇಳಿಕೊಳ್ಳಬಹುದು. ಈ ಕಾರಣಕ್ಕಾಗಿಯೇ ಹಿಂದೂ ಧರ್ಮವು ಉಳಿದ ಧರ್ಮಗಳಂತಲ್ಲದೆ ಸಹಿಷ್ಣುತೆಯ ಪರಾಕಾಷ್ಠೆಯನ್ನು ಹೊಂದಿದೆ. ಅದು ಎಲ್ಲ ಮತಗಳನ್ನು ಒಳಗೊಳ್ಳುತ್ತದೆ. (25.4.1924ರ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಬರೆದದ್ದು). ಒಂದೇ ಪಟ್ಟಿನಲ್ಲಿ ಧಾರ್ಮಿಕವಾಗಿಯೂ, ಆಧುನಿಕವಾಗಿಯೂ, ವಿಶಾಲವಾಗಿಯೂ, ಸೂಕ್ಷ್ಮವಾಗಿ ಯೂ, ಧರ್ಮ ಮತ್ತು ಸಂಸ್ಕೃತಿಯನ್ನು ಕುರಿತು, ಹೀಗೆ ಯೋಚಿಸುವುದು ಕಷ್ಟ. ಇದು ಸಾಧ್ಯವಾಗುವ ತನಕ ಬದುಕನ್ನೂ ಕುರಿತು ಇಡಿಯಾಗಿ ಸಮಗ್ರವಾಗಿ ಸ್ಪಂದಿಸುವುದು ಕೂಡ ಕಷ್ಟವೇ. ಈ ವಿಫಲತೆಯಿಂದಾಗಿಯೇ ನಮ್ಮಲ್ಲಿ ಹಲವು ಗೊಂದಲಗಳು, ವಿರೋಧಾಭಾಸಗಳು ಮೂಡುತ್ತವೆ. ಅದನ್ನೆಲ್ಲ ಗಾಂಧಿಯ ಬದುಕಿಗೂ-ಚಿಂತನೆಗೂ ಆರೋಪಿಸಿ ಬಿಡುತ್ತೇವೆ. ಹಾಗೆಯೇ ಗಾಂಧಿಯ ತ್ವಿಕತೆ-ಪರಿಕಲ್ಪನೆಗಳನ್ನು ಸರಿಯಾಗಿ ಗ್ರಹಿಸುವಲ್ಲಿ ಆಧುನಿಕ -ತಾರ್ಕಿಕ ಮನೋಪ್ರವೃತ್ತಿ. ಕೆಲವು ಭಾವನಾತ್ಮಕ-ಮಾನಸಿಕ ಪ್ರತಿರೋಧಗಳನ್ನು ಎದುರಿಸುತ್ತದೆ. ಈ ಸವಾಲಿನ ಕೆಲವು ಆಯಾಮಗಳನ್ನಾದರೂ ನಾವು ಈಗಲಾದರೂ ಪ್ರಾಮಾಣಿಕವಾಗಿ ಪರಿಶೀಲಿಸಬೇಕು.
ಗಾಂಧಿಗೆ, ರಾಷ್ಟ್ರೀಯತೆ, ದೇಶಪ್ರೇಮ, ಸ್ವಾತಂತ್ರ್ಯ ಮುಖ್ಯವಾಗಿತ್ತು. ಆದರೆ ಸ್ವಾತಂತ್ರ್ಯ ಬಂದ ನಂತರ ಇಲ್ಲಿರುವ ಸಕಲ ಜಾತಿ-ಜನಾಂಗಗಳು ಒಂದು ಸಮುದಾಯ ವಾಗಿ, ಕುಟುಂಬವಾಗಿ ಬದುಕಬೇಕೆಂಬ ಆಸೆಯೂ ಇತ್ತು. ಈ ಚಿಂತನೆಯ ಮೊದಲ ಭಾಗವನ್ನು ನಾವೆಲ್ಲ ಒಪ್ಪುತ್ತೇವೆ. ಎರಡನೆಯ ಭಾಗಕ್ಕೆ ಬಂದಾಗ ಮಾತ್ರ ನಾವೆಲ್ಲ ನಮ್ಮ ನಮ್ಮ ಜಾತಿ-ಜನಾಂಗಗಳ ಗೋಡೆಯೊಳಗೇ ಜಡವಾಗಿ ಬದುಕಲು ಇಷ್ಟಪಡುತ್ತೇವೆ. ಮುಸ್ಲಿಮರಿಗೆ, ಪ್ರತ್ಯೇಕ ರಾಷ್ಟ್ರ ಬೇಡ, ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳು ಬೇಡ ಎಂದು ಗಾಂಧಿ ಹೋರಾಡಿದಾಗ ಅವರ ಮನಸ್ಸಿನಲ್ಲಿದ್ದ-ದೇಶವೆಂದರೆ- ಅದು ಮುಖ್ಯವಾಗಿ ಸಮುದಾಯ, ನಂತರ ರಾಷ್ಟ್ರದ ಕಲ್ಪನೆ- ಎಂಬ ಒಳನೋಟವನ್ನು ಗ್ರಹಿಸಲು ನಮಗೆ ಇನ್ನೂ ಸಾಧ್ಯವಾಗಿಲ್ಲ.
ಬದಲಿಗೆ ಪ್ರತಿಯೊಂದು ಜಾತಿ-ಉಪಜಾತಿ ಯನ್ನು ರಾಷ್ಟ್ರವನ್ನಾಗಿ, ಪ್ರತ್ಯೇಕತೆಯ ಘಟಕವನ್ನಾಗಿ ಮಾತ್ರ ಗ್ರಹಿಸುತ್ತೇವೆ. ನಮ್ಮ ಆದ್ಯತೆಗಳನ್ನು ನಾವು ಸರಿಯಾಗಿ ಗುರುತಿಸಿಕೊಳ್ಳಬೇಕೇ ಹೊರತು-ಗಾಂಧಿ ವಿಚಾರದ ಕಲ್ಪಿತ ಮಿತಿಗಳನ್ನು ಊಹಿಸುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ವಾಸ್ತವವನ್ನು ಗ್ರಹಿಸಿ, ಸರಿಯಾದ ಪ್ರಶ್ನೆಗಳನ್ನು ರೂಪಿಸುತ್ತಿದ್ದ ರೀತಿಯಲ್ಲೇ ನಮಗೂ, ಗಾಂಧಿಗೂ ಮೂಲಭೂತವಾದ ವ್ಯತ್ಯಾಸವಿದೆ. ಪ್ರತಿಯೊಂದು ತಲೆಮಾರಿಗೂ ಒಂದು ಅಥವಾ ಎರಡು ಮೂಲಭೂತ ಪ್ರಶ್ನೆಗಳಿರುತ್ತವೆ. ಗಾಂಧಿಯುಗದಲ್ಲಿ ವಸಾಹತುಶಾಹಿಯ ಪ್ರಭಾವವನ್ನು ಸರಿಯಾಗಿ ಗ್ರಹಿಸುವುದು, ದೇಶಕ್ಕೆ ಸ್ವಾತಂತ್ರ್ಯ ಪಡೆಯುವುದು ಮುಖ್ಯ ಪ್ರಶ್ನೆಯಾಗಿತ್ತು. ಗಾಂಧಿ ಇದರಿಂದ ಎಂದೂ ವಿಚಲಿತರಾಗಲಿಲ್ಲ. ಹಾಗೆಯೇ ಅಸ್ಪಶ್ಯತೆ, ಕೋಮು ಸೌಹಾರ್ದ, ಗ್ರಾಮ ಸ್ವರಾಜ್ಯ ಸಮಸ್ಯೆ ಗಳನ್ನು ಮುಖ್ಯ ಪ್ರಶ್ನೆಯೊಂದಿಗೆ ಹೆಣಿಗೆ ಹಾಕಿಕೊಂಡೇ ಹೋರಾಟ ಮಾಡಿದರು. ಹೀಗೆ ಪ್ರಶ್ನೆಗಳನ್ನು ಸರಿಯಾಗಿ ರೂಪಿಸಿಕೊಳ್ಳಲಾಗದೇ ಹೋದವರು ಹೆಣಿಗೆಯನ್ನೇ ಅರ್ಥ ಮಾಡಿಕೊಳ್ಳದೇ ಹೋದವರು. ಗಾಂಧಿಯನ್ನು ವಿರೋಧಿಸುವುದು ಮಾತ್ರವಲ್ಲ, ಬ್ರಿಟಿಷರಿಗೆ ಬೆಂಬಲ ಕೊಡಲು ಕೂಡ ಹೋದರು.
ನಮ್ಮ ಕಾಲದ ಮುಖ್ಯ ತಾತ್ವಿಕ ಸಮಸ್ಯೆಯೆಂದರೆ -ನಮಗೆ ಯಾವುದು ಪ್ರಸ್ತುತವಾದ ಪ್ರಶ್ನೆಗಳು ಎಂದು ಗುರುತಿಸಿಕೊಳ್ಳಲು ನಾವು ಫಲರಾಗಿರುವುದು ಮತ್ತು ಇಂತಹ ಪ್ರಶ್ನೆಗಳನ್ನು ಉಳಿದ ಸಮಸ್ಯೆಗಳ ಜೊತೆ ಹೆಣಿಗೆಯಲ್ಲಿ ಕಾಣಲು ಸಾಧ್ಯವಾಗದೇ ಇರುವುದು. ಅಸ್ಮಿತೆಯ ಪ್ರಶ್ನೆ, ವಲಸೆಯ ಪ್ರಶ್ನೆ, ನೆಮ್ಮದಿಗೆ ಅನುಗುಣವಾದ ತಂತ್ರಜ್ಞಾನ-ವಿಜ್ಞಾನದ ಸ್ವರೂಪ- ಇವು ಮಾತ್ರ ನಮ್ಮ ಕಾಲದ ಮುಖ್ಯ ಪ್ರಶ್ನೆಗಳೆಂದು ಒಂದು ಅಭಿಪ್ರಾಯವಿದೆ. ಇದನ್ನೆಲ್ಲ ಗುರುತಿಸಲು, ಹೊಸ ಹೆಣಿಗೆ ಸಾಧಿಸಲು ಗಾಂಧಿಯ ಮನೋಧರ್ಮ ನೆರವಿಗೆ ಬರುವಷ್ಟು ಮತ್ತೆ ಯಾರೂ ಬರುವುದಿಲ್ಲ.
ಮನುಷ್ಯ ತನ್ನ ಮೂಲಭೂತ ಸ್ವಭಾವದಲ್ಲೇ ತಕ್ಷಣಕ್ಕೆ, ವರ್ತಮಾನಕ್ಕೆ ಮಾತ್ರ ತೀವ್ರವಾಗಿ ಸ್ಪಂದಿಸುತ್ತಾನೆ. ಆದರೆ ಯಾವುದೇ ವಿದ್ಯಮಾನಕ್ಕೂ ತಕ್ಷಣದ, ವರ್ತಮಾನದ ಆಯಾಮವಿರುವಂತೆ, ಅನಂತಕಾಲದ, ಕಾಲಾತೀತವಾದ ಇನ್ನೊಂದು ಆಯಾಮವೂ ಇರುತ್ತದೆ. ಕೇವಲ ತಕ್ಷಣಕ್ಕೆ, ವರ್ತಮಾನಕ್ಕೆ ಮಾತ್ರ ಸ್ಪಂದಿಸುವವರೂ ಚರಿತ್ರೆಗೂ- ಅನಂತಕಾಲದ ಕಾಲಾತೀತ ಆಯಾಮಗಳಒಡನೆ, ವರ್ತಮಾನದಲ್ಲಿ ಸ್ಪಂದಿಸುವವರು ನಾಗರೀಕತೆಗೂ ಸ್ಪಂದಿಸುತ್ತಿರುತ್ತಾರೆ. ಗಾಂಧಿಗೆ ಅವರ ದೇಶ-ಕಾಲದ ಎಲ್ಲ ಸಮಸ್ಯೆಗಳನ್ನು ನಾಗರೀಕತೆಯ ಪ್ರಶ್ನೆಗಳಾಗಿ ಪರಿಭಾವಿಸಿ ವಿಶಾಲ ಪರಿಪ್ರೇಕ್ಷದಲ್ಲಿ ಚಿಂತಿಸುವ ಪರಿಪಾಠವಿತ್ತು. ಈ ರೀತಿಯ ಮಾನಸಿಕ ತೊಡಗುವಿಕೆಯಿಲ್ಲದ ನಮಗೆ ಗಾಂಧಿಯೇ ಒಂದು ವಿರೋಧಾಭಾಸವಾಗಿ ಕಾಣುತ್ತಾರೆ.
ಜಾತಿ-ಜನಾಂಗ, ಧಾರ್ಮಿಕ ಸೀಮಿತ ರಾಷ್ಟ್ರೀಯತೆಯ ನೆಲೆಗಳಲ್ಲಿ ಯೋಚಿಸುವವರಿಗೆ ಕಡ್ಡಾಯವಾಗಿ ಅನ್ಯನೊಬ್ಬ ಇರಲೇಬೇಕು. ಇಲ್ಲದಿದ್ದರೂ ಕಲ್ಪಿಸಿಕೊಂಡು ಅವನಿಗೆ ಎಲ್ಲಾ ದುರ್ಗುಣಗಳನ್ನೂ ಆರೋಪಿಸಿ ಅವನನ್ನೂ ಸರ್ವನಾಶ ಮಾಡಲೇಬೇಕು. ಭಗವಂತನ, ಸತ್ಯದ, ಕಾಲದ ಅಂಶವನ್ನು ಆಯಾಮವನ್ನು ಎಲ್ಲರಲ್ಲೂ ಕಾಣಬಲ್ಲವರಾಗಿದ್ದ ಗಾಂಧಿಗೆ ‘ಅನ್ನ’ ಎಂಬ ಪರಿಕಲ್ಪನೆಯ ಅಗತ್ಯವೇ ಇರಲಿಲ್ಲ. (The 'other' is always an illusion) ಬ್ರಿಟಿಷರನ್ನು ಕೂಡ ಅವರು ಶತ್ರುಗಳೆಂದು ‘ಅನ್ಯ’ವೆಂದು ಪರಿಗಣಿಸಿರಲಿಲ್ಲ. ಗಾಂಧಿ ಚಿಂತನೆಯನ್ನ ಕುರಿತಂತೆ ನಮ್ಮ ಹಲವು ಪ್ರತಿರೋಧಗಳು ‘ಅನ್ಯ’ದ ಪರಿಕಲ್ಪನೆಯಿಂದ ಬಿಡುಗಡೆ ಪಡೆಯಲಾಗದ ನಮ್ಮ ಕಷ್ಟಗಳನ್ನು ಚಿಸುತ್ತದೆ. ಪ್ರಗತಿಪರರಿಗೂ, ಜಾತ್ಯತೀತವಾದಿಗಳಿಗೂ, ಸನಾತನಿಗಳಿಗೂ, ರಾಷ್ಟ್ರೀಯತೆಯ ವಕ್ತಾರರಿಗೂ ‘ಅನ್ಯ’ನೊಬ್ಬ ಬೇಕೇ ಬೇಕು ಅಲ್ಲವೇ?
ಇದಕ್ಕೆ ಹೊಂದಿಕೊಂಡ ಹಾಗೆ ಇನ್ನೊಂದು ಗ್ರಹಿಕೆಯ ಸಮಸ್ಯೆಯೂ ಇದೆ. ವ್ಯಕ್ತಿ ಯಲ್ಲಿ, ವಸ್ತುಸ್ಥಿತಿಯಲ್ಲಿ, ವಾಸ್ತವದಲ್ಲಿ ಇರುವ ಭಿನ್ನ, ಭಿನ್ನ ಸ್ತರಗಳನ್ನು ವೈವಿಧ್ಯಮಯ ವೆಂದು ಗ್ರಹಿಸಬೇಕೋ, ಇಲ್ಲ ದ್ವಂದ್ವಗಳು, ವಿರೋಧಾಭಾಸಗಳೆಂದು ಗ್ರಹಿಸಬೇಕೋ? ಬಹುಪಾಲು ಆಧುನಿಕ ಪ್ರಸ್ಥಾನಗಳು- ಆಯ್ಕೆ ಮಾಡಿಕೊಳ್ಳುವುದು ಎರಡನೇ ವಿಧಾನವನ್ನೇ. ಇದಕ್ಕೆ ವಿರುದ್ಧವಾಗಿ ವೈವಿಧ್ಯವನ್ನು, ಹಲವು ಸ್ತರಗಳನ್ನು ಒಂದೇ ವಿದ್ಯಮಾನದ ಇಘೆಐಘೆಖಿ ಆಗಿ ಗ್ರಹಿಸುವುದು ಗಾಂಧಿಯ ವಿಧಾನ.
ನಾವು ಗ್ರಹಿಸುವ ನೆಲೆಯೇ ಭಿನ್ನವಾಗಿದ್ದರೆ, ಗಾಂಧಿ ಕೈಗೆ ಸಿಗುವುದು ಕಗ್ಗಂಟಾಗುತ್ತದೆ. ಒಂದು ಪುಸ್ತಕವನ್ನು ಓದುವಾಗ, ವಿದ್ಯಮಾನವನ್ನು ಗ್ರಹಿಸುವಾಗ, ಆ ಪುಸ್ತಕದ ಒಳಗಿನಿಂದ ನೋಡಬೇಕು. ವಿದ್ಯಮಾನದ ಒಳಗಿನಿಂದ, ಕೇಂದ್ರದಿಂದ ನೋಡಬೇಕು. ಇಷ್ಟನ್ನೂ ಎಲ್ಲಾ ಚಿಂತನ ಕ್ರಮಗಳೂ ಒಪ್ಪುತ್ತವೆ. ಗಾಂಧಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಷ್ಟು ಮಾತ್ರ ಸಾಲದು-ಪುಸ್ತಕವನ್ನು ವಿದ್ಯಮಾನವನ್ನು, ಅದರ ಒಳಗಿನಿಂದ ಮಾತ್ರವಲ್ಲ, ನಮ್ಮ ಒಳಗಿನಿಂದಲೂ ಓದಬೇಕು-ಗ್ರಹಿಸಬೇಕು-ಅದೂ ಒಂದೇ ಪಟ್ಟಿನಲ್ಲಿ ಒಂದೇ ಸ್ತರದಲ್ಲಿ ಎಂದು ಒತ್ತಾಯಿಸುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬರಬೇಕು- ಹೌದು- ಆದರೆ ಅಂತರಂಗದ ಬದುಕಿನಲ್ಲಿಯೂ ನಾನು ಕಾನೂನುಗಳಿಂದ, ದೌರ್ಬಲ್ಯಗಳಿಂದ ಮುಕ್ತವಾಗಿದ್ದೇನೆಯೇ, ಸ್ವಾತಂತ್ರ್ಯ ಪಡೆದಿದ್ದೇನೆಯೇ ಎಂದು ಒಂದು ಆಧ್ಯಾತ್ಮಿಕ ಅಂತರ್ ಸಂಬಂಧದಲ್ಲಿ ಯೋಚಿಸುತ್ತಿದ್ದ ಗಾಂಧಿಯ ನೈತಿಕ ತೀವ್ರತೆ ಆಧ್ಯಾತ್ಮಿಕತೆಯ ಸ್ವರೂಪ ಅರ್ಥವಾಗುವುದು ಸುಲಭವಲ್ಲ. ಅದಕ್ಕೆ ಬೇಕಾದ ಸಿದ್ಧತೆಯೂ ನಮಗಿಲ್ಲ.
ಪರಂಪರೆ-ಪರಿವರ್ತನೆ, ಸಾತತ್ಯ ಇವುಗಳ ಅಂತರ್ ಸಂಬಂಧವನ್ನು ಗ್ರಹಿಸುವಲ್ಲಿ, ಆಧುನಿಕ ಚಿಂತನೆಗೆ ಇರುವ ಮಿತಿಯು ಕೂಡ ಗಾಂಧಿ ಕುರಿತ ಗೊಂದಲಗಳಿಗೆ ಕಾರಣವಾಗಿದೆ. ಯಾವಾಗಲೂ ಪರಂಪರೆಯ ಪರವಾಗಿ ಇರುವವರಿಗೆ ಗಾಂಧಿ ಕ್ರಾಂತಿಕಾರಿಯಾಗಿಯೂ, ಕ್ರಾಂತಿ-ಪರಿವರ್ತನೆಯ ಪರವಾಗಿಯೇ ಸದಾ ಯೋಚಿಸು ವವರಿಗೆ ಗಾಂಧಿ ಒಬ್ಬ ಗೊಡ್ಡು ಸನಾತನಿಯಾಗಿಯೇ ಕಾಣುತ್ತಾರೆ. ಹೊಸ ಪರಿಕಲ್ಪನೆ ಗಳನ್ನು, ಸಂಗತಿಗಳನ್ನು ಶೋಧಿಸುವಷ್ಟು ಸೃಜನಶೀಲತೆ, ಪ್ರತಿಭೆ ತನ್ನಲ್ಲಿ ಇಲ್ಲವೆಂದು, ಪ್ರಕೃತಿ-ಕಾಲದಷ್ಟೇ ಪುರಾತನವಾದ ಸತ್ಯ- ಅಹಿಂಸೆ, ಭೂತದಯೆಯಂತಹ ಪರಿಕಲ್ಪನೆ ಗಳು ಮಾತ್ರ ತನಗೆ ಗೊತ್ತೆಂದು ಗಾಂಧಿ ತಮ್ಮ ಬಗ್ಗೆ ತಾವೇ ತಮಾಷೆ ಮಾಡಿಕೊಳ್ಳುತ್ತಿದ್ದರು. ಸಾತತ್ಯ ಮತ್ತು ಪರಂಪರೆಯ ಗರ್ಭದಲ್ಲೇ ಪರಿವರ್ತನೆಯ ಕಿಡಿಗಳು, ಒತ್ತಾಯಗಳು ಮೂಡಿ ಬರುತ್ತವೆ, ಪರಿವರ್ತನೆಯ ಮೂಲಕವೇ ಸಾರ್ಥಕ್ಯವನ್ನು ಪಡೆಯುತ್ತದೆ ಎಂದು ನಂಬಿದ್ದ ಗಾಂಧಿ ಪರಂಪರೆ ಮತ್ತು ಪರಿವರ್ತನೆಯನ್ನು ವೈರುಧ್ಯ ನೆಲೆಗಳಲ್ಲಿ ಗ್ರಹಿಸದೆ ಒಟ್ಟಂದದಲ್ಲಿ ಗ್ರಹಿಸಬಲ್ಲವರಾಗಿದ್ದರು. ಈ ಕಾರಣಕ್ಕಾಗಿಯೇ ಎಲ್ಲ ಧಾರ್ಮಿಕ -ಸಾಂಸ್ಕೃತಿಕ ಸಂಸ್ಥೆ, ಪರಿಕಲ್ಪನೆಗಳನ್ನು ಹೊಸ ಕಾಲದ ಸಂವೇದನೆಗಳಿಗೆ ಅನುಗುಣವಾಗಿ, ನವೀಕರಿಸುವಷ್ಟು ಪ್ರಯೋಗಶೀಲರಾಗಿ ಇರಲೇಬೇಕು ಎಂದು ವಾದಿಸುತ್ತಿದ್ದರು.
ಹಾಗೆಯೇ ಹಿಂದೂಧರ್ಮ -ಸಮಾಜದ ಪುನರ್‌ವ್ಯಾಖ್ಯಾನವನ್ನು ಮಾಡಿದರೂ ಕೂಡ. ಇದು ನಿಜವಾದ CRITICAL INSIDER ಕಲ್ಪನೆ, ಈ ಕಲ್ಪನೆಯ ಬಗ್ಗೆ ಬಹಳ ಮಾತನಾಡಿದವರಲ್ಲ.CRITICAL ಆಗಿದ್ದರೆ ಹೊರತು ಗಾಂಧಿಯ ಮಾನದಂಡದಲ್ಲಿ- INSIDERಗಳಾಗಿರಲಿಲ್ಲ. ದ್ವಂದ್ವಾತ್ಮಕ ಪರಿಕಲ್ಪನೆಗಳ ನೆಲೆಯಲ್ಲೇ ನಿಂತು ಗ್ರಹಿಸುವವರಿಗೆ. ಸಂವೇದನೆಯ ಸ್ತರದಲ್ಲಿ ಐಘೆಖಐಈಉ್ಕ ಆಗುವುದು ಕಷ್ಟವೇ ಎಂಬುದನ್ನು ಕೂಡ ನಾವು ಗೌರವಿಸಬೇಕು.
ಗಾಂಧಿವಾದವನ್ನು, ವ್ಯಕ್ತಿತ್ವವನ್ನು ಇತರ ‘ಇಸಂ’ಗಳು ಸಿದ್ಧಾಂತಗಳಂತೆ ನಿರ್ದಿಷ್ಟ ವಿಚಾರಗಳು, ಚಿಂತನ ಕ್ರಮದೊಡನೆ ಸಮೀಕರಿಸುವುದು ಸಾಧ್ಯವಿಲ್ಲ. ಇದೇ ಗಾಂಧಿವಾದದ ಹೆಗ್ಗಳಿಕೆ. ಪ್ರತಿ ಕ್ಷಣವೂ, ಪ್ರತಿ ಸನ್ನಿವೇಶಕ್ಕೆ ವಾಸ್ತವಕ್ಕೆ ಸ್ಪಂದಿಸಬೇಕು. ಹಾಗೆಯೇ ಒಳದನಿಗೂ ಗಮನ ಕೊಡಬೇಕು, ಪ್ರಯೋಗಶೀಲವಾಗಿದ್ದು, ನಮ್ಮ ನಮ್ಮ ಚಿಂತನೆಯನ್ನು ನಾವೇ ರೂಪಿಸಿಕೊಂಡು, ಕ್ರಿಯಾಶೀಲರಾಗಿರಬೇಕು ಎಂಬುದೇ ಗಾಂಧಿವಾದದ ತಿರುಳು. ಹೀಗೆ ಯೋಚಿಸಿದಾಗ ಮಾತ್ರ, ಎಡ-ಬಲದ ದ್ವಂದ್ವಗಳಿಂದ, ಇಸಂಗಳ ಸೀಮಿತ ಚೌಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ.
ಹಾಗೆ ನೋಡಿದರೆ ಗಾಂಧಿವಾದ, ಚಿಂತನೆಗಳಿಗೆ, ಗಾಂಧಿಯ ನಂತರ ಹೊಸ ರೂಪ ಕೊಟ್ಟವರಲ್ಲಿ ಸ್ವಘೋಷಿತ, ಸಾಂಸ್ಥಿಕ ಗಾಂಧಿವಾದಿಗಳಿಗಿಂತ ಹೆಚ್ಚಾಗಿ ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್‌ರಂತಹ ನಾಯಕರು, ಹಾಗೆಯೇ ತಮ್ಮ ತಮ್ಮ ವೈಯಕ್ತಿಕ ಸ್ತರದಲ್ಲಿ, ಸಂಘಟನೆಗಳಲ್ಲಿ ಗಾಂಧಿಯ ಪರಿಕಲ್ಪನೆಗಳನ್ನು ಪ್ರಯೋಗಿಸಿದ, ನವೀಕರಿಸಿದ, ವಿಜ್ಞಾನಿಗಳು, ಕಲಾವಿದರು, ರಾಜಕೀಯ- ಆರ್ಥಿಕ ಚಿಂತಕರೂ ಶಿಕ್ಷಣ ತಜ್ಞರೂ ಇದ್ದಾರೆ. (ಬಾಪುಕುಟಿ: ರಜನಿಭಕ್ಷಿ, ಕನ್ನಡಾನುವಾದ: ಕೆ. ವೆಂಕಟರಾಜು, ಅಭಿನವ- ಬೆಂಗಳೂರು). ಈ ಪಟ್ಟಿಗೆ ನಮ್ಮ ಕಾಲದಲ್ಲಿ, ನಮ್ಮ ನಡುವಿನಿಂದಲೇ ಸೇರಿದವರು ಹೆಗ್ಗೋಡಿನ ಚರಕಸಂಘದ ಬರಹಗಾರ-ಚಿಂತಕ-ನಿರ್ದೇಶಕ ಪ್ರಸನ್ನರವರು. ಇಂತಹವರೆಲ್ಲ ನೀಡುವ ಉತ್ತರಗಳು, ಸೂಚಿಸುವ ಪ್ರಯೋಗಗಳಿಗಿಂತಲೂ ಮುಖ್ಯವಾದದ್ದು ನಮ್ಮ ಕಾಲಕ್ಕೆ ಪ್ರಸ್ತುತವಾದ ಪ್ರಶ್ನೆಗಳನ್ನು ಇವರು ಎತ್ತುವ ರೀತಿ, ಹಾಗೆ ಎತ್ತುತ್ತಲೇ ಗಾಂಧಿವಾದವನ್ನು ನವೀಕರಿಸುವ ರೀತಿ. ಗಾಂಧಿವಾದವನ್ನು ನವೀಕರಿಸುವುದೆಂದರೆ ನಮ್ಮನ್ನು ನಾವು ತೊಡಗಿಸಿಕೊಳ್ಳುವ ರೀತಿಯೇ ಆಗಿದೆ.
ಗಾಂಧಿಯವರ ಮಾತುಗಳಲ್ಲೇ ಹೇಳಬಹುದಾದರೆ- ‘ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ರೂಪಿತವಾದ ಧರ್ಮದಲ್ಲಿ ಉತ್ಕೃಷ್ಟವಾಗಿರುವುದೆಂದರೆ- ವ್ಯಕ್ತಿಯು ಸರ್ವಜೀವ ಸೃಷ್ಟಿಯ ಅಖಂಡ ಸೇವೆಯಲ್ಲಿ ತನ್ಮಯವಾಗುವುದು. ಚೈತನ್ಯದ ಈ ಅಮರ್ಯಾದಿತ ಸಾಗರದಲ್ಲಿ ವ್ಯಕ್ತಿಯು ತನ್ನನ್ನು ಸಂಪೂರ್ಣವಾಗಿ ವಿಲೀನವಾಗಿಸಿ ಏಕರೂಪತೆಯನ್ನು ಸಾಧಿಸದ ಹೊರತು ಸತ್ಯದ ಸಾಕ್ಷಾತ್ಕಾರವಾಗಲಾರದು. ಆದುದರಿಂದ ಸಮಾಜ ಸೇವೆಯ ಹೊರತು ನನಗೆ ಗತ್ಯಂತರವಿಲ್ಲ. (IN SEARCH OF THE SUPREME-VOLUME II.PAGE 265-266).
ಗಾಂಧಿ ಬರೆದದ್ದು, ಬದುಕಿದ್ದು-ಹಂಬಲಿಸಿದ್ದು, ಇಡಿಯಾಗಿ, ಸಮಗ್ರವಾಗಿ, ಧರ್ಮ,ಸಂಸ್ಕೃತಿ, ರಾಜಕೀಯ, ಆರ್ಥಿಕತೆ,ನೈತಿಕತೆ, ಆಸ್ಪಶ್ಯತೆ, ಸ್ತ್ರೀ ಸುಧಾರಣೆ, ಪಾನನಿರೋಧ, ಗ್ರಾಮಸ್ವರಾಜ್ಯ, ವಿಕೇಂದ್ರೀಕರಣ,ಸ್ವಾತಂತ್ರ್ಯದ ಪ್ರಶ್ನೆ- ಎಲ್ಲದಕ್ಕೂ ಏಕಕಾಲದಲ್ಲೇ ಸಮಾನವಾದ ತೀವ್ರತೆಯಿಂದ, ಪ್ರಾಮುಖ್ಯತೆಯಿಂದ ಸ್ಪಂದಿಸುತ್ತಿದ್ದರು. ನಮ್ಮಲ್ಲಿ ಬಹುಪಾಲು ಜನಕ್ಕೆ ಹೀಗೆ ಇಡಿಯಾಗಿ, ಸಮಗ್ರವಾಗಿ ಸ್ಪಂದಿಸಲು ಬರುವುದಿಲ್ಲ. ಬದುಕಿನ ಕೆಲವು ಆಯಾಮಗಳಿಗೆ ಮಾತ್ರ ಸ್ಪಂದಿಸುತ್ತೇವೆ. ಹಾಗೆಯೇ ಗಾಂಧಿ-ಆದಷ್ಟು ಎಲ್ಲ ಜನರನ್ನು, ಎಲ್ಲ ಹಿನ್ನೆಲೆಯವರನ್ನು, ಸ್ವಭಾವದವರನ್ನು ಒಳಗು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು.
(ಲೇಖಕರು ಆದಾಯ ತೆರಿಗೆ ಇಲಾಖೆಯ ನಿವೃತ್ತ ಪ್ರಧಾನ ಮುಖ್ಯ ಆಯುಕ್ತರು ಮತ್ತು ಕನ್ನಡ ಬರಹಗಾರರು).