ಜಿಡಿಪಿಯಲ್ಲಿ ಚೀನಾಕ್ಕಿಂತ ನಾವೇ ಮುಂದೆ!
2017-18ನೇ ಸಾಲಿನ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಶೇ.7.7ರ ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ದಾಖಲಿಸುವ ಮೂಲಕ ‘ಅತಿವೇಗದಲ್ಲಿ ಪ್ರಗತಿ ಹೊಂದುತ್ತಿರುವ ದೇಶ’ ಎಂಬ ಹಿರಿಮೆಯನ್ನು ಭಾರತ ಉಳಿಸಿಕೊಂಡಿದೆ. ಇದೇ ವೇಳೆ, ಜಿಡಿಪಿ ಬೆಳವಣಿಗೆಯಲ್ಲಿ ನೆರೆಯ ಚೀನಾ (ಶೇ.6.8)ವನ್ನು ಕೊನೆಯ ತ್ರೈಮಾಸಿಕದಲ್ಲಿ ಹಿಂದಿಕ್ಕುವ ಮೂಲಕ ವಿಶ್ವದ ಗಮನ ಸೆಳೆದಿದೆ.
ನವದೆಹಲಿ (ಜೂ. 01): 2017-18ನೇ ಸಾಲಿನ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಶೇ.7.7ರ ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ದಾಖಲಿಸುವ ಮೂಲಕ ‘ಅತಿವೇಗದಲ್ಲಿ ಪ್ರಗತಿ ಹೊಂದುತ್ತಿರುವ ದೇಶ’ ಎಂಬ ಹಿರಿಮೆಯನ್ನು ಭಾರತ ಉಳಿಸಿಕೊಂಡಿದೆ. ಇದೇ ವೇಳೆ, ಜಿಡಿಪಿ ಬೆಳವಣಿಗೆಯಲ್ಲಿ ನೆರೆಯ ಚೀನಾ (ಶೇ.6.8)ವನ್ನು ಕೊನೆಯ ತ್ರೈಮಾಸಿಕದಲ್ಲಿ ಹಿಂದಿಕ್ಕುವ ಮೂಲಕ ವಿಶ್ವದ ಗಮನ ಸೆಳೆದಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಅಪನಗದೀಕರಣ ಹಾಗೂ ಕಳೆದ ವರ್ಷ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಳಿಕ ಜಿಡಿಪಿ ಈ ಪರಿಯಲ್ಲಿ ಬೆಳವಣಿಗೆ ಹೊಂದುತ್ತಿರುವುದು ಇದೇ ಮೊದಲು. ಹೀಗಾಗಿ ಅಪನಗದೀಕರಣ, ಜಿಎಸ್‌ಟಿಯಿಂದಾಗಿ ಸುದೀರ್ಘ 18 ತಿಂಗಳ ಕಾಲ ಆಗಿದ್ದ ಹಿನ್ನಡೆಯಿಂದ ಆರ್ಥಿಕತೆ ಚೇತರಿಸಿಕೊಂಡಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
2017-18ನೇ ಸಾಲಿನ ನಾಲ್ಕನೇ ತ್ರೈಮಾಸಿಕ (ಜನವರಿಯಿಂದ ಮಾಚ್‌ರ್)ದಲ್ಲಿ ಜಿಡಿಪಿ ಶೇ.7.7ರ ದರದಲ್ಲಿ ಪ್ರಗತಿ ಹೊಂದಿದೆಯಾದರೂ, ಒಟ್ಟಾರೆ ಕಳೆದ ಹಣಕಾಸು ವರ್ಷದಲ್ಲಿ ಶೇ.6.7ರ ಬೆಳವಣಿಗೆ ಸಾಧಿಸಿದೆ. 2016-17ರ ಶೇ.7.1 ಹಾಗೂ 2015-16ರ ಶೇ.8.2 ಮತ್ತು 2014-15ರ ಶೇ.7.4ಕ್ಕೆ ಹೋಲಿಸಿದರೆ ಈ ದರ ಕಡಿಮೆ ಇದೆ. 2017-18ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಶೇ.7.3ರ ಜಿಡಿಪಿ ದಾಖಲಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದಕ್ಕೂ ಮಿಗಿಲಾದ ಪ್ರಗತಿ ಕಂಡುಬಂದಿದೆ. ಈ ಕುರಿತು ಕೇಂದ್ರೀಯ ಸಾಂಖ್ಯಿಕ ಸಂಸ್ಥೆ ಗುರುವಾರ ಸಂಜೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.
ಜಿಡಿಪಿಯ ಈ ಬೆಳವಣಿಗೆಗೆ ಕೃಷಿ (ಶೇ.4.5), ಉತ್ಪಾದನೆ (ಶೇ.9.1) ಹಾಗೂ ನಿರ್ಮಾಣ ವಲಯ (ಶೇ.11.5) ಗಮನಾರ್ಹ ಕೊಡುಗೆ ನೀಡಿವೆ.
ಈ ವರ್ಷ ಉತ್ತಮ ಮುಂಗಾರು ಮಳೆಯಾಗುವ ಆಶಾಭಾವನೆ ಇರುವುದರಿಂದ ಹಾಗೂ ಹೂಡಿಕೆ ಹೆಚ್ಚಳವಾಗುವ ಸಂಭವ ಇರುವುದರಿಂದ ಜಿಡಿಪಿ ದರ ಶೇ.7ಕ್ಕಿಂತ ಹೆಚ್ಚೇ ಇರುವ ಸಾಧ್ಯತೆ ಇದೆ. ಆದರೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಹಾಗೂ ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚುತ್ತಿರುವ ಕೆಟ್ಟಸಾಲದಿಂದ ಹಿನ್ನಡೆಯಾಗುವ ಅಪಾಯವೂ ಇದೆ.