ಮಾಸ್ಕೋ(ನ.9): ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಭಾರತ ಇದೇ ಮೊದಲ ಬಾರಿಗೆ ತಾಲಿಬಾನಿ ನಾಯಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಭಾರತದ ಆಪ್ತ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಮಾಸ್ಕೋದಲ್ಲಿ ಆಫ್ಘಾನಿಸ್ತಾನ ಮತ್ತು ತಾಲಿಬಾನ್ ನಾಯಕರ ಅನಧಿಕೃತ ಮಟ್ಟದ ಚರ್ಚೆ ನಡೆಯಲಿದೆ. ಈ ಭೇಟಿ ವೇಳೆ ಭಾರತದ ನಾಯಕರೂ ಕೂಡ ಉಪಸ್ಥಿತರಿರಲಿದ್ದಾರೆ.

ಈ ಬಗ್ಗೆ ಭಾರತ ಸರ್ಕಾರ ಅಧಿಕೃತ ಹೇಳಿಕೆ ನೀಡಿದ್ದು, ಇದೇ ನವೆಂಬರ್‌ನಲ್ಲಿ ಮಾಸ್ಕೋ ಸಭೆಯಲ್ಲಿ ತಾಲಿಬಾನ್ ನಾಯಕರೊಂದಿಗೆ ಚರ್ಚೆ ನಡೆಯಲಿದೆ ವಿದೇಶಾಂಗ ಕಾರ್ಯದರ್ಶಿ ರವೀಶ್ ಕುಮಾರ್ ತಿಳಿಸಿದ್ದಾರೆ. ಆದರೆ ಈ ಸಭೆ ಅನಧಿಕೃತವಲ್ಲ ಎಂದೂ ಭಾರತ ಸ್ಪಷ್ಟಪಡಿಸಿದೆ.

ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗಾಗಿ ಇರುವ ಎಲ್ಲ ಮಾರ್ಗಗಳನ್ನೂ ಭಾರತ ಸರ್ಕಾರ ಉತ್ತೇಜಿಸುತ್ತದೆ. ಹೀಗಾಗಿ ತಾಲಿಬಾನ್ ನಾಯಕರೊಂದಿಗೆ ಮಾತಕತೆ ನಡೆಸಲು ಸಿದ್ಧವಾಗಿದೆಯಾದರೂ ಈ ಸಭೆ ಅನಧಿಕೃತ ಮಟ್ಟದಲ್ಲಿರುತ್ತದೆ ಎಂದು ರವೀಶ್ ಮಾಹಿತಿ ನೀಡಿದರು.