ಬೆಂಗಳೂರು(ನ.05):  ನ್ಯಾಷನಲ್‌ ವಾಟರ್‌ವೇಸ್‌-1 (ಎನ್‌ಡಬ್ಲು-1) ಹೆಸರಿನ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಒಳನಾಡು ಜಲಮಾರ್ಗ ಸಂಚಾರ ಆರಂಭಿಸಿರುವ ಹಡಗು ಅ.30ರಂದು ಕೋಲ್ಕತಾದಿಂದ ಹೊರಟಿದ್ದು, ಗಂಗಾ ನದಿ ಮೂಲಕವಾಗಿ ನ.12ರಂದು ಉತ್ತರಪ್ರದೇಶದ ವಾರಾಣಸಿಗೆ ಬಂದಿಳಿಯಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಲಿದ್ದಾರೆ. ಅನಂತರ ಪ್ರಯಾಗ್‌ರಾಜ್‌ನ ಇಫ್ಕೋದಿಂದ ಗೊಬ್ಬರವನ್ನು ಹೊತ್ತು ಇದು ಹಲ್ದಿಯಾಕ್ಕೆ ಹಿಂದಿರುಗಲಿದೆ. ಜಲಮಾರ್ಗ ವಿಕಾಸ ಯೋಜನೆ ಅಡಿಯಲ್ಲಿ ಪ್ರಾರಂಭವಾದ ಈ ಒಳನಾಡು ಜಲಸಾರಿಗೆ ಯೋಜನೆಯು ಪಶ್ಚಿಮ ಬಂಗಾಳದ ಹಲ್ದಿಯಾದಿಂದ ಉತ್ತರಪ್ರದೇಶದ ಅಲಹಾಬಾದ್‌ವರೆಗೆ ಅಭಿವೃದ್ಧಿಗೊಂಡಿದೆ. ಅಲಹಾಬಾದ್‌ನಿಂದ ಹಲ್ದಿಯಾ ನಡುವಿನ 1620 ಕಿ.ಮೀ ಮಾರ್ಗ ಹಾಗೂ ಯೋಜನೆಗೆ ಸಂಬಂಧಿಸಿದ ಇತರೆ ಕಾಮಗಾರಿಗಳಿಗಾಗಿ ಸರ್ಕಾರ 4200 ಕೋಟಿ ರು. ವೆಚ್ಚ ಮಾಡಿದೆ. ಒಟ್ಟಾರೆ ಯೋಜನೆ ವೆಚ್ಚ 5,369 ಕೋಟಿ ರುಪಾಯಿ. 2023ಕ್ಕೆ ಇದು ಪೂರ್ಣಗೊಳ್ಳಲಿದೆ.

ಗಂಗಾ ನದಿಯಲ್ಲಿ ಸಣ್ಣ ಹಡಗು, ರೋರೋ ಹಾಗೂ ಬಾಜ್‌ರ್‍ನಲ್ಲಿ ಸರಕು ಸಾಗಣೆ ಮೊದಲ ಸರಕು ಯಾವುದು? ಹಲ್ದಿಯಾದಿಂದ ವಾರಾಣಸಿಗೆ ಪೆಪ್ಸಿ ಪಾನೀಯ ಹಾಗೂ ಕುರುಕಲು ತಿನಿಸಿನ 16 ಕಂಟೇನರ್‌ ಮರಳಿ ಬರುವಾಗ ವಾರಾಣಸಿಯಿಂದ ಹಲ್ದಿಯಾಕ್ಕೆ ಇಫ್ಕೋ ಕಂಪನಿಯ ರಸಗೊಬ್ಬರ.

ಈಗ ಸಿದ್ಧವಾಗಿರುವ ಮಾರ್ಗ ಎಲ್ಲಿಂದ ಎಲ್ಲಿಗೆ?
ಪಶ್ಚಿಮ ಬಂಗಾಳದ ಹಲ್ದಿಯಾದಿಂದ ಉತ್ತರ ಪ್ರದೇಶದ ಅಲಹಾಬಾದ್‌

ಎಷ್ಟುದೂರ?
1620 ಕಿ.ಮೀ.
ವೆಚ್ಚ ಎಷ್ಟು?
4200 ಕೋಟಿ ರು.
ಹೇಗೆ ಸಾಗಣೆ?

ಮೊದಲು ಕೊಂಡೊಯ್ದಿದ್ದು ಪೆಪ್ಸಿ ಕಂಪನಿ ಉತ್ಪನ್ನಗಳನ್ನು:
ಕೇವಲ 4-5 ಮೀಟರ್‌ ಆಳದಷ್ಟುನೀರಿನಲ್ಲೂ ಸಾಗಬಹುದಾದ ಈ ಮಿನಿ ಬಾಜ್‌ರ್‍, ಪೆಪ್ಸಿ ಕಂಪನಿಯ 16 ಕಂಟೈನರ್‌ ಉತ್ಪನ್ನಗಳನ್ನು ಹೊತ್ತು ಕೊಲ್ಕತಾದಿಂದ ವಾರಾಣಸಿಗೆ ತನ್ನ ಮೊಟ್ಟಮೊದಲ ಪ್ರಯಾಣ ಬೆಳೆಸಿದೆ. ಇದು ಭಾರತದ ರಸ್ತೆ ಮೇಲೆ ಸರಕುಗಳನ್ನು ಹೊತ್ತು ಸಾಗುವ 16 ಟ್ರಕ್‌ ಲೋಡ್‌ಗೆ ಸಮನಾಗಿದೆ. ಮುಂದಿನ 9-10 ದಿನಗಳಲ್ಲಿ ಇದು ವಾರಣಾಸಿ ತಲುಪಲಿದೆ. 1500-2000 ಟನ್‌ ತೂಕದ ವಸ್ತುಗಳನ್ನು ಹೊತ್ತೊಯ್ಯಬಲ್ಲ ಈ ಬಾಜ್‌ರ್‍, ರಸ್ತೆಗಳ ಮೇಲೆ 140 ಲಾರಿಗಳ ಸಂಚಾರದ ಒತ್ತಡವನ್ನು ತಗ್ಗಿಸಲಿದೆ.

ನದಿಯಲ್ಲಿ ನೀರು ಕಡಿಮೆಯಾದಾಗ ಹಡಗು ಸಂಚಾರ ಹೇಗೆ?
ನಮ್ಮ ದೇಶದ ನದಿಗಳಲ್ಲಿ ಮಳೆಗಾಲದಲ್ಲಿ ನೀರಿನ ಹರಿವು ಜಾಸ್ತಿಯಿದ್ದು, ಬೇಸಿಗೆಯಲ್ಲಿ ತಗ್ಗುತ್ತದೆ. ಈ ಬದಲಾವಣಗೆಯು ಒಳನಾಡು ಜಲಮಾರ್ಗ ಯೋಜನೆಗೆ ದೊಡ್ಡ ಸವಾಲು. ಅಲ್ಲದೆ ಪ್ರತಿವರ್ಷವೂ ಹೂಳು ತುಂಬಿಕೊಳ್ಳುತ್ತದೆ. ಅದಕ್ಕಾಗಿ ನದಿಯ ಆಳ ಎಲ್ಲಿ ಹೆಚ್ಚಿದೆ ಎಂಬುದನ್ನು ಗುರುತಿಸಲಾಗಿದೆ. ಅತಿ ಹೆಚ್ಚು ಹೂಳು ತುಂಬಿರುವ ಸ್ಥಳಗಳಲ್ಲಿ ನೈಸರ್ಗಿಕ ಉಪಕರಣಗಳಿಂದ ಅಂದರೆ ಬಿದಿರು ಮತ್ತಿತರ ವಸ್ತುಗಳನ್ನು ಬಳಸಿ ಕಾಲುವೆ ನಿರ್ಮಿಸಿ ನೀರು ಸರಾಗವಾಗಿ ಒಂದೆಡೆ ಹರಿಯುವಂತೆ ಮಾಡಲಾಗುತ್ತದೆ. ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹೂಳು ತುಂಬಿರುವ ಜಾಗದಿಂದ ಮುಂದೆ ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೊಮ್ಮೆ ನೀರಿನ ಆಳ ಕಡಿಮೆ ಇದ್ದರೆ, ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಫ್ಲಾಟ್‌-ಬಾಟಮ್‌, ಲೋ ಡ್ರಾಫ್ಟ್‌ ವೆಸೆಲ್ಸ್‌ಗಳ ಬಳಕೆಗೆ ಅವಕಾಶವಿದೆ. ಜಲಚರಗಳಿಗೆ ತೊಂದರೆಯಾಗದಂತೆ ಗಂಟೆ 5 ಕಿ.ಮೀ. ವೇಗದಲ್ಲಿ ಮಾತ್ರ ಚಲಿಸಬೇಕೆಂಬ ನಿರ್ಬಂಧ ಇದೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಹಾರನ್‌ ಕೂಡ ಮಾಡುವಂತಿಲ್ಲ. ಜೊತೆಗೆ ಗಂಗಾ ನದಿಯ ಸ್ವಚ್ಛತೆಯ ದೃಷ್ಟಿಯಿಂದ ಲಿಕ್ವಿಫೈಡ್‌ ನ್ಯಾಚುರಲ್‌ ಗ್ಯಾಸ್‌ ಮಾತ್ರ ಬಳಕೆ ಮಾಡಲಾಗುತ್ತದೆ.

ಒಳನಾಡು ಜಲಸಾರಿಗೆಯ ಪ್ರಯೋಜನವೇನು?
ಪ್ರಸ್ತುತ ಒಳನಾಡಿನ ಜಲಮಾರ್ಗಗಳ ಮೂಲಕ ಭಾರತದ ಸರಕು ಸಾಗಣೆ ಕೇವಲ 0.5 ಪ್ರತಿಶತ ಮಾತ್ರ. ದೇಶದ ಒಟ್ಟು ಸರಕು ಸಾಗಣೆ ವೆಚ್ಚಗಳು ಭಾರತದ ಪ್ರಸಕ್ತ ಜಿಡಿಪಿಯಲ್ಲಿ ಶೇ.18ರಷ್ಟಿದೆ ಎಂದು ವಿಶ್ವಬ್ಯಾಂಕ್‌ ವರದಿ ಮಾಡಿದೆ. 1 ಲೀಟರ್‌ ತೈಲದಲ್ಲಿ ರೈಲಿನಲ್ಲಿ 85 ಟನ್‌ ಭಾರವನ್ನು 1 ಕಿ.ಮೀ. ಸಾಗಿಸಬಹುದು. ರಸ್ತೆ ಮಾರ್ಗದಲ್ಲಾದರೆ ಕೇವಲ 24 ಟನ್‌ ಸರಕನ್ನು ಕೊಂಡೊಯ್ಯಬಹುದು. ಅದೇ ಒಂದು ಲೀಟರ್‌ ತೈಲ ಬಳಕೆ ಮಾಡಿ ಜಲಮಾರ್ಗದ ಮೂಲಕವಾಗಿ 105 ಟನ್‌ ಸರಕನ್ನು ಕೊಂಡೊಯ್ಯಬಹುದು. ಅಂಕಿ ಅಂಶವೊಂದರ ಪ್ರಕಾರ ಜಲಮಾರ್ಗದ ಮೂಲಕ ಸಾಗಾಣಿಕೆಗೆ ಒಂದು ಕಿ.ಮೀ.ಗೆ 1.19 ರು. ವೆಚ್ಚ ತಗುಲಿದರೆ, ರಸ್ತೆ ಮಾರ್ಗ ಮೂಲಕ ಸರಕು ಸಾಗಾಣಿಕೆಗೆ ಒಂದು ಕಿ.ಮೀ.ಗೆ 2.28 ರು. ವೆಚ್ಚ ತಗುಲುತ್ತದೆ. ರೈಲ್ವೆ ಮುಖಾಂತರ ಸಾಗಾಣಿಕೆಗೆ 1.41 ರು. ವೆಚ್ಚವಾಗುತ್ತದೆ.

111 ಜಲಮಾರ್ಗ ಆರಂಭಿಸಲು ನಿರ್ಧಾರ
ಆರ್ಥಿಕ ಪ್ರಗತಿಯ ವೇಗ ಹೆಚ್ಚಿಸಲು ರಾಷ್ಟ್ರೀಯ ಜಲಮಾರ್ಗ ಕಾಯ್ದೆ-2016ರ ಅಡಿಯಲ್ಲಿ ದೇಶದ 111 ಜಲಮಾರ್ಗ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರ ಮೊದಲ ಭಾಗವಾಗಿ 5 ಒಳನಾಡು ಜಲಮಾರ್ಗವನ್ನು ಗುರುತಿಸಿ, ಅವು ರಾಷ್ಟ್ರೀಯ ಜಲಮಾರ್ಗ ಪ್ರಾಜೆಕ್ಟ್ನ ಭಾಗ ಎಂದು ಘೋಷಿಸಿದೆ. ದೇಶದಲ್ಲಿ ಅಂದಾಜು ನದಿ, ಕಾಲುವೆ, ಹಿನ್ನೀರು ಪ್ರದೇಶ ಸೇರಿದಂತೆ 14,500 ಕಿ.ಮೀ.ನಷ್ಟುಉದ್ದದ ಜಲಸಾರಿಗೆಗೆ ಅವಕಾಶವಿದೆ.

ರಾಷ್ಟ್ರೀಯ ಜಲ ಮಾರ್ಗಗಳು
ಎನ್‌ಡಬ್ಲ್ಯು-1: ಗಂಗಾ-ಭಾಗೀರಥಿ-ಹೂಗ್ಲಿ ನದಿ (ಅಲಹಾಬಾದ್‌ನಿಂದ ಹಲ್ದಿಯಾ- 1620 ಕಿ.ಮೀ) (ಈಗ ಆರಂಭವಾಗಿದೆ)
ಎನ್‌ಡಬ್ಲ್ಯು-2: ಬ್ರಹ್ಮಪುತ್ರಾ ನದಿ (ಧುಬ್ರಿಯಿಂದ ಸಾದಿಯ- 891 ಕಿ.ಮೀ)
ಎನ್‌ಡಬ್ಲ್ಯು-3: ಪಶ್ಚಿಮ ಕರಾವಳಿ ಕಾಲುವೆ (ಕೋಟಪುರಂನಿಂದ ಕೊಲ್ಲಂ) ಮತ್ತು ಉದ್ಯೋಗಮಂಡಲ್‌, ಚಂಪಕರ ಕಾಲುವೆಗಳು (205 ಕಿ.ಮೀ)
ಎನ್‌ಡಬ್ಲ್ಯು-4: ಗೋದಾವರಿ ಮತ್ತು ಕೃಷ್ಣಾ ನದಿಗಳಲ್ಲಿ ಕಾಕಿನಾಡ-ಪುದುಚೇರಿ ಕಾಲುವೆಗಳು (1078 ಕಿ.ಮೀ)
ಎನ್‌ಡಬ್ಲ್ಯು-5: ಬ್ರಹ್ಮಿಣಿ, ಮಹಾನದಿ ಮುಖಜ ಭೂಮಿಯ ನದಿಗಳು ಸೇರಿದಂತೆ ಪೂರ್ವ ಕರಾವಳಿ ಕಾಲುವೆ (588 ಕಿ.ಮೀ)

ನ್ಯಾಷನಲ್‌ ವಾಟರ್‌ವೇಸ್‌ ವಿಶೇಷತೆ ಏನು?
- ಮಿನಿ ಬಾಜ್‌ರ್‍ಗಳು ಕೇವಲ 4-5 ಮೀಟರ್‌ ಆಳದಷ್ಟುನೀರಿನಲ್ಲೂ ಸಾಗುತ್ತವೆ
- 2000 ಟನ್‌ ಹೊರುವ ಸಣ್ಣ ಹಡಗುಗಳು ರಸ್ತೆಯ ಮೇಲೆ 140 ಟ್ರಕ್‌ಗಳು ಸಂಚರಿಸುವುದನ್ನು ತಪ್ಪಿಸುತ್ತವೆ
- ಜಲಮಾರ್ಗ ಅಭಿವೃದ್ಧಿಯಾದಂತೆ ರಸ್ತೆಗಳ ಮೇಲಿನ ಸರಕು ಸಾಗಾಣಿಕೆ ತಗ್ಗುತ್ತದೆ
- ರಸ್ತೆ ಮಾರ್ಗದಲ್ಲಿ ಸರಕು ಸಾಗಾಣಿಕೆಗೆ ಹೋಲಿಸಿದರೆ ಜಲಮಾರ್ಗದಲ್ಲಿ ಖರ್ಚು ಕಡಿಮೆ
- ಗಂಗಾ ನದಿ ಹಾಗೂ ಇತರ ನದಿಗಳಲ್ಲಿ ಆರ್ಥಿಕ ಚಟುವಟಿಕೆ ಗರಿಗೆದರುತ್ತದೆ
- 25,000 ನೇರ ಹಾಗೂ 1,25,000 ಪರೋಕ್ಷ ಉದ್ಯೋಗ ಸೃಷ್ಟಿಸುತ್ತದೆ
- ಪೂರ್ವ ಮತ್ತು ಈಶಾನ್ಯ ರಾಜ್ಯಗಳ ಅಂತಾರಾಜ್ಯ ಸರಕು ಸಾಗಾಣಿಕೆ ಸುಲಭವಾಗಲಿದೆ
- ಒಳನಾಡು ಜಲಸಾರಿಗೆಯಲ್ಲಿ ಸಂಚಾರಿ ಪ್ರವಾಸೋದ್ಯಮವೂ ಹೆಚ್ಚಾಗುತ್ತದೆ

ಒಳನಾಡು ಜಲಮಾರ್ಗ ಬಳಕೆ
ಅಮೆರಿಕ-8.3%
ಯುರೋಪ್‌-7%
ಚೀನಾ-8.7%
ಭಾರತ-0.5%

1 ಟನ್‌ ಸರಕು ಸಾಗಣೆಗೆ ತಗಲುವ ವೆಚ್ಚ
ರಸ್ತೆ ಮಾರ್ಗ 2.28 ರು./ 1 ಕಿ.ಮೀ
ರೈಲು ಮಾರ್ಗ 1.41 ರು./1 ಕಿ.ಮೀ
ಜಲಮಾರ್ಗ 1.19 ರು./1 ಕಿ.ಮೀ

ಭಾರತದಲ್ಲಿ ಸರಕು ಸಾಗಣೆ ಹೇಗೆ?
ರಸ್ತೆ ಮಾರ್ಗ 65%
ರೈಲು ಮಾರ್ಗ 27%
ಜಲಮಾರ್ಗ 0.5%

ಕೀರ್ತಿ ತೀರ್ಥಹಳ್ಳಿ