ಮೈಸೂರು : ಇಂದು ನಾನು ಬಿಜೆಪಿ ಬದ್ಧ ವಿರೋಧಿ. ನಾಳೆ ಕಾಂಗ್ರೆಸ್ ವಿರೋಧಿಯಾಗಿಯೂ ಬದಲಾದರೆ ಆಶ್ಚರ್ಯವಿಲ್ಲ ಎಂದು ಚಿತ್ರನಟ ಪ್ರಕಾಶ್ ರೈ ತಿಳಿಸಿದ್ದಾರೆ. ಮೈಸೂರು ಮತ್ತು ಮಂಡ್ಯ ನಗರಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜಸ್ಟ್ ಆಸ್ಕಿಂಗ್ ಕ್ಯಾಂಪೇನ್ ಬಗೆಗಿನ ಮಾಧ್ಯಮ ಸಂವಾದಗಳಲ್ಲಿ ಮಾತನಾಡಿ ಬಿಜೆಪಿ ವಿರುದ್ಧ ಮಾತನಾಡಿದ ಮಾತ್ರಕ್ಕೆ ನಾನು ಕಾಂಗ್ರೆಸ್, ಜೆಡಿಎಸ್ ಅಥವಾ ಕಮ್ಯುನಿಸ್ಟ್ ಪರ ಎಂದು ಭಾವಿಸಬೇಡಿ, ಕಾಂಗ್ರೆಸ್ ವಿರುದ್ಧವೂ ಮಾತನಾಡಲೂ ಸಿದ್ಧನಿದ್ದೇನೆ ಎಂದು ತಿಳಿಸಿದರು.

ಇಂದು ಬಿಜೆಪಿ ಬಣ್ಣ, ನಾಳೆ ಇನ್ನಿಬ್ಬರ ಬಣ್ಣ ಬಯಲು ಮಾಡಲು ನಾನು ರೆಡಿ. ಯಾವುದೇ ರಾಜಕೀಯ ಪಕ್ಷದ ಬಗ್ಗೆ ನನಗೆ ನಂಬಿಕೆಯಿಲ್ಲ. ಲಂಕೇಶ್ ಆಶಯದಂತೆ ನಿರಂತರ ವಿರೋಧ ಪಕ್ಷದಲ್ಲಿರುವುದಕ್ಕೆ ಬಯಸುತ್ತೇನೆ ಎಂದರು. 

ಕಾಗೆ ರಾಷ್ಟ್ರ ಪಕ್ಷಿ ಯಾಕಾಗಬಾರದು?

ಹಿಂದೂಗಳ ಸಂಖ್ಯೆ ಜಾಸ್ತಿ ಇದೆ ಎಂದು ಹಿಂದು ರಾಷ್ಟ್ರವಾಗುವುದಾದರೆ ಕಾಗೆಗಳ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಕಾಗೆಯನ್ನು ಏಕೆ ರಾಷ್ಟ್ರಪಕ್ಷಿ ಎಂದು ಘೋಷಣೆ ಮಾಡಬಾರದು ಎಂದು ಪ್ರಕಾಶ್ ರೈ ಹೇಳಿದರು. ಮಂಡ್ಯದಲ್ಲಿ ಪತ್ರಕರ್ತ ರೊಬ್ಬರ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.