Asianet Suvarna News Asianet Suvarna News

ಮುಸ್ಲಿಮರ ಒಪ್ಪದಿರುವುದು ಹಿಂದುತ್ವವಲ್ಲ: ಭಾಗವತ್‌

ಹಿಂದೂ ರಾಷ್ಟ್ರ ಎಂದರೆ, ಅಲ್ಲಿ ಮುಸ್ಲಿಮರಿಗೆ ಜಾಗವಿಲ್ಲ ಎಂದರ್ಥವಲ್ಲ. ನಾವು ಮುಸ್ಲಿಮರನ್ನು ಒಪ್ಪುವುದಿಲ್ಲ ಎಂದರೆ, ಅದು ಹಿಂದುತ್ವವಲ್ಲ. ಹಿಂದುತ್ವ ಎಂದರೆ ಭಾರತೀಯತೆ ಮತ್ತು ಒಳಗೊಳ್ಳುವಿಕೆ ಎಂದು ಭಾಗವತ್‌ ತಿಳಿಸಿದರು.

If Muslims are unwanted then there is no Hindutva Saya Mohan Bhagwat
Author
New Delhi, First Published Sep 19, 2018, 8:13 AM IST

ನವದೆಹಲಿ[ಸೆ.19]: ಮುಸ್ಲಿಮರ ಒಪ್ಪದಿರುವುದು ಹಿಂದುತ್ವವಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌ ಮಂಗಳವಾರ ತಿಳಿಸಿದ್ದಾರೆ. ಆರೆಸ್ಸೆಸ್‌ ಆಯೋಜಿಸಿರುವ ಮೂರು ದಿನಗಳ ‘ಭವಿಷ್ಯದ ಭಾರತ-ಆರೆಸ್ಸೆಸ್‌ ದೃಷ್ಟಿಕೋನ’ ಸಮಾವೇಶದ ಎರಡನೇ ದಿನ ಭಾಗವತ್‌ ಈ ಮಾತುಗಳನ್ನಾಡಿದರು. ಹಿಂದೂ ರಾಷ್ಟ್ರ ಎಂದರೆ, ಅಲ್ಲಿ ಮುಸ್ಲಿಮರಿಗೆ ಜಾಗವಿಲ್ಲ ಎಂದರ್ಥವಲ್ಲ. ನಾವು ಮುಸ್ಲಿಮರನ್ನು ಒಪ್ಪುವುದಿಲ್ಲ ಎಂದರೆ, ಅದು ಹಿಂದುತ್ವವಲ್ಲ. ಹಿಂದುತ್ವ ಎಂದರೆ ಭಾರತೀಯತೆ ಮತ್ತು ಒಳಗೊಳ್ಳುವಿಕೆ ಎಂದು ಭಾಗವತ್‌ ತಿಳಿಸಿದರು.

ನಿರ್ದಿಷ್ಟ ಪಕ್ಷಕ್ಕೆ ಬೆಂಬಲವಿಲ್ಲ:

ಯಾವುದೇ ನಿರ್ದಿಷ್ಟ ಪಕ್ಷದ ಪರವಾಗಿ ಕೆಲಸ ಮಾಡುವಂತೆ ಸಂಘ ತನ್ನ ಕಾರ್ಯಕರ್ತರಿಗೆ ತಿಳಿಸುವುದಿಲ್ಲ. ಆದರೆ, ದೇಶದ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸುವವರನ್ನು ಬೆಂಬಲಿಸಲು ಸಲಹೆ ನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಬಿಜೆಪಿ ಪರವಾಗಿ ಆರೆಸ್ಸೆಸ್‌ ಕಾರ್ಯ ನಿರ್ವಹಿಸುತ್ತದೆ ಎಂಬ ಭಾವನೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದರು.

ಅಧಿಕಾರ ಕೇಂದ್ರ ಸಂವಿಧಾನ:

ಅಧಿಕಾರ ಕೇಂದ್ರ, ಸಂವಿಧಾನದಲ್ಲಿ ನಿರ್ದೇಶಿಸಿದಂತಿರಬೇಕು ಎಂದು ಸಂಘ ಬಯಸುತ್ತದೆ. ಒಂದು ವೇಳೆ ಹಾಗಾಗದಿದ್ದಲ್ಲಿ ಅದು ತಪ್ಪು ಎಂದು ಅವರು ತಿಳಿಸಿದರು. ಆರೆಸ್ಸೆಸ್‌ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ ಎಂದು ಸೋಮವಾರವೇ ತಿಳಿಸಿದ್ದ ಭಾಗವತ್‌, ಸಂಘದ ಸಿದ್ಧಾಂತದ ಕುರಿತಂತೆ ಇರುವ ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಚ್ಚರಿಕೆಯ ಮಾತುಗಳನ್ನಾಡಿ ಗಮನ ಸೆಳೆದರು.

ಜಾಗತಿಕ ಬ್ರದರ್‌ಹುಡ್‌:

ಸಂಘ ಜಾಗತಿಕ ಸಹೋದರತ್ವದ ಬಗ್ಗೆ ಮಾತನಾಡುತ್ತದೆ. ಈ ಸಹೋದರತ್ವ(ಬ್ರದರ್‌ಹುಡ್‌) ವಿವಿಧತೆಯಲ್ಲಿ ಏಕತೆಯನ್ನು ಒಳಗೊಂಡಿದೆ. ಇದು ಹಿಂದುತ್ವದ ಸಂಪ್ರದಾಯ. ಹೀಗಾಗಿ ನಾವು ಇದನ್ನು ಹಿಂದೂ ರಾಷ್ಟ್ರ ಎನ್ನುತ್ತೇವೆ ಎಂದು ಭಾಗವತ್‌ ಹೇಳಿದರು. ಇತ್ತೀಚೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೆಸ್ಸೆಸ್‌ ಅನ್ನು ಮುಸ್ಲಿಂ ಬ್ರದರ್‌ಹುಡ್‌ ಜೊತೆ ಹೋಲಿಕೆ ಮಾಡಿರುವುದಕ್ಕೆ ಅವರ ಹೆಸರನ್ನು ಉಲ್ಲೇಖಿಸದೇ ಭಾಗವತ್‌ ತಿರುಗೇಟು ನೀಡಿದರು.

ರಾಜಕೀಯವಿಲ್ಲ:

ಸಂಘದ ಉದಯ ಕಾಲದಿಂದಲೂ, ಅದು ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದೆ. ಅದು ಚುನಾವಣೆಯಲ್ಲಿ ಸ್ಪರ್ಧಿಸಲಾರದು ಮತ್ತು ಚುನಾವಣಾ ರಾಜಕಾರಣದಲ್ಲಿ ಭಾಗವಹಿಸುವುದೂ ಇಲ್ಲ. ಆರೆಸ್ಸೆಸ್‌ ಕಾರ್ಯಕರ್ತರು ರಾಜಕೀಯ ಪಕ್ಷಗಳ ಪದಾಧಿಕಾರಿಗಳೂ ಆಗುವಂತಿಲ್ಲ ಎಂದು ಅವರು ಹೇಳಿದರು.

ನಾಗ್ಪುರ ಆರೋಪ ಆಧಾರ ರಹಿತ:

ಸರ್ಕಾರದ ಪ್ರಮುಖ ನಿರ್ಧಾರದ ಹಿಂದೆ ನಾಗ್ಪುರ(ಆರೆಸ್ಸೆಸ್‌ ಕೇಂದ್ರ ಕಚೇರಿ)ದ ನಿರ್ದೇಶನವಿದೆ ಎಂದು ಜನರು ಆಗಾಗ ಮಾತನಾಡುತ್ತಿರುತ್ತಾರೆ. ಇವೆಲ್ಲ ಆಧಾರ ರಹಿತ. ಸರ್ಕಾರದಲ್ಲಿ ಕೆಲಸ ಮಾಡುವವರೆಲ್ಲ ಹಿರಿಯರು ಮತ್ತು ರಾಜಕೀಯದಲ್ಲಿ ಅವರು ನಮಗಿಂತ ಹೆಚ್ಚು ಅನುಭವಿಗಳು. ಅವರು ನಮ್ಮ ಸ್ವಯಂ ಸೇವಕರು, ತಮ್ಮ ಕೆಲಸಗಳನ್ನು ಮಾಡುವಷ್ಟುಸಮರ್ಥರು ಎಂದು ಭಾಗವತ್‌ ಹೇಳಿದರು. ಕೇಂದ್ರ ಸರ್ಕಾರದ ನಿಲುವುಗಳ ಬಗ್ಗೆ ಟೀಕಿಸುವಾಗ ಆರೆಸ್ಸೆಸ್‌ ಕೇಂದ್ರ ಕಚೇರಿಯಾದ ನಾಗ್ಪುರದಿಂದ ಸಂದೇಶ ರವಾನೆಯಾಗಿರುವ ಸಾಧ್ಯತೆಯ ಬಗ್ಗೆ ಪ್ರತಿಪಕ್ಷಗಳು ಆರೋಪಿಸುವ ಬಗ್ಗೆ ಅವರು ಈ ಸ್ಪಷ್ಟನೆ ನೀಡಿದರು.
 

Follow Us:
Download App:
  • android
  • ios