ನವದೆಹಲಿ(ಫೆ.26): ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಪಾಕ್ ನೆಲದಲ್ಲಿ ಭರ್ಜರಿ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಬಾಲಾಕೋಟ್‌ನಲ್ಲಿ ನಡೆಸಿದ ಬಾಂಬ್ ದಾಳಿಯಲ್ಲಿ ಸುಮಾರು 300 ಉಗ್ರರು ಸಾವನ್ನಪ್ಪಿದ್ದು, ಇದರಲ್ಲಿ ಜೆಇಎಂ ಸಂಘಟನೆಯ ಪ್ರಮುಖ ನಾಯಕರೂ ಕೂಡ ಹತರಾಗಿದ್ದಾರೆ ಎನ್ನಲಾಗಿದೆ.

ದಾಳಿಯಲ್ಲಿ ಪ್ರಮುಖವಾಗಿ ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅಳಿಯ ಮೌಲಾನಾ ಯುಸೂಫ್ ಅಜರ್ ಅಲಿಯಾಸ್ ಘೋರಿ ಕೂಡ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈತ 1999ರ ಏರ್ ಇಂಡಿಯಾ ವಿಮಾನ ಅಪಹರಣ ರೂವಾರಿಯಾಗಿದ್ದ. ಏರ್ ಇಂಡಿಯಾ ವಿಮಾನವನ್ನು ಕಂದಹಾರ್‌ಗೆ ಅಪಹರಿಸಿ ಭಾರತದ ಜೈಲಿನಲ್ಲಿದ್ದ ಉಗ್ರ ಮಸೂದ್ ಅಜರ್‌ನನ್ನು ಬಿಡುಗಡೆಗೊಳಿಸಲಾಗಿತ್ತು.

ಇನ್ನು ಭಾರತ ವಾಯುಸೇನೆ ಇಂದು ನಡೆಸಿದ  ಏರ್ ಸ್ಟ್ರೇಕ್‌ನಲ್ಲಿ ಕಾಶ್ಮೀರದ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದ ಮುಫ್ತಿ ಅಜಾರ್ ಖಾನ್  ಕೂಡ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದರೆ  ಈ ಕುರಿತು ಇನ್ನೂ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ.

ಬಾಲಕೋಟ್‌ನಲ್ಲಿ ಜೈಷ್ -ಇ- ಮೊಹಮ್ಮದ್ ಉಗ್ರರು ಅಡಗಿದ ನೆಲೆಗಳ ಚಿತ್ರಗಳು ಲಭ್ಯವಾಗಿದ್ದು, ಭಾರತೀಯ ವಾಯುಸೇನೆ ಧ್ವಂಸಗೊಳಿಸಿರುವ ಉಗ್ರರ ನೆಲೆಗಳ ಮೆಟ್ಟಿಲುಗಳ ಮೇಲೆ ಅಮೆರಿಕ, ಇಂಗ್ಲೆಂಡ್ ಹಾಗೂ ಇಸ್ರೇಲ್  ರಾಷ್ಟ್ರಗಳ ರಾಷ್ಟ್ರ ಧ್ವಜದ ಚಿತ್ರ ಕಂಡುಬಂದಿದೆ.