ಮುಖ್ಯಮಂತ್ರಿಯಾಗ್ತಾರಾ ಎಂ.ಬಿ ಪಾಟೀಲ್..?
ಮಾಜಿ ಜಲಸಂಪನ್ಮೂಲ ಸಚಿವರಾದ ಎಂ.ಬಿ ಪಾಟೀಲ್ ಅವರು ತಾವು ಮುಖ್ಯಮಂತ್ರಿಯಾಗುವ ಆಸೆ ಹೊಂದಿದ್ದು ಆದರೆ ದುರಾಸೆ ಇಲ್ಲ ಎಂದು ಮನದಾಳದ ಬಯಕೆಯನ್ನು ಬಿಚ್ಚಿಟ್ಟಿದ್ದಾರೆ.
ವಿಜಯಪುರ: ನನಗೆ ಮುಖ್ಯಮಂತ್ರಿಯಾಗುವ ಆಸೆ ಇದೆ. ದುರಾಸೆ ಇಲ್ಲ ಎಂದು ಮಾಜಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿತಾಂಡಾದ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಸುದ್ದಿಗಾರರ ಜೊತೆಗೆ ಮಾತನಾಡಿ, ನನಗೆ ಇನ್ನೂ 54 ವರ್ಷ. ಇನ್ನೂ ನನಗೆ ರಾಜಕೀಯ ಭವಿಷ್ಯವಿದೆ. ನನಗೆ ಮುಖ್ಯಮಂತ್ರಿ ಆಗುವ ಟೈಮ್ ಬರುತ್ತದೆ. ಸ್ವಾಭಾವಿಕವಾಗಿ ಸಿಎಂ ಆಗುವ ಆಸೆಯಿದೆ. ದುರಾಸೆ ಇಲ್ಲ ಎಂದರು.
ನಾನು ಮಿನಿಸ್ಟರ್ ಇದ್ದರೂ ಪವರ್‌ಫುಲ್, ಮಿನಿಸ್ಟರ್ ಅಲ್ಲದಿದ್ದರೂ ಪವರ್‌ಫುಲ್ ಎಂದ ಪಾಟೀಲ್, ನಾನು ಮತ್ತೆ ಜಲಸಂಪನ್ಮೂಲ ಸಚಿವನಾಗಿ ಈ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಇಚ್ಛೆ ಹೊಂದಿದ್ದೆ. ಆದರೆ ಈಗ ನನಗೆ ಸತ್ವ ಪರೀಕ್ಷೆ ಬಂದಿದೆ. ಮಾತೆ ದುರ್ಗಾದೇವಿ ಆಶೀರ್ವಾದದಿಂದ ಈ ಸತ್ವ ಪರೀಕ್ಷೆಯಲ್ಲಿ ಖಂಡಿತವಾಗಿ ಉತ್ತೀರ್ಣನಾಗುತ್ತೇನೆ. ದೇವಿ ನನ್ನ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದರು.