ನವದೆಹಲಿ [ಜೂ.28] : ಆರು ವರ್ಷದ ಹಿಂದೆ ನಡೆದ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆಯ ಪ್ರಮುಖ ಆರೋಪಿಯಾಗಿರುವ ಶರದ್‌ ಕಲಾಸ್ಕರ್‌ ಕರ್ನಾಟಕ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. 

ಒಮ್ಮೆ ಹಿಂದಿನಿಂದ ದಾಭೋಲ್ಕರ್‌ಗೆ ತಲೆಗೆ ಹಾಗೂ ನೆಲದ ಮೇಲೆ ಬಿದ್ದ ಬಳಿಕ ಬಲ ಕಣ್ಣಿನ ಮೇಲೆ ಮತ್ತೊಮ್ಮೆ ಗುಂಡು ಹಾರಿಸಿದ್ದೆ ಎಂದು ಶರದ್‌ ಕಲಾಸ್ಕರ್‌ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ವಿಚಾರವಾದಿ ಗೋವಿಂದ ಪಾನ್ಸರೆ ಮತ್ತು ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಲ್ಲೂ ಭಾಗಿಯಾಗಿದ್ದಾಗಿ ಆತ ಹೇಳಿಕೊಂಡಿದ್ದಾನೆ.

ಶರದ್‌ ಕಲಾಸ್ಕರ್‌ನನ್ನು ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು. ಗೌರಿ ಲಂಕೇಶ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ಆರೋಪಪಟ್ಟಿದಾಖಲಿಸಿಕೊಳ್ಳಲಾಗಿತ್ತು. ಪ್ರಕರಣ ವಿಚಾರಣೆಯ ವೇಳೆ ದಾಭೋಲ್ಕರ್‌ ಕೊಲೆ ಸಂಚನ್ನು ಬಾಯಿಬಿಟ್ಟಿದ್ದಾನೆ.

ಪಾಲ್ಗಢ್‌ ಜಿಲ್ಲೆಯ ನಲ್ಲಸೋಪರದಲ್ಲಿ ಪಿಸ್ತೂಲ್‌ ತಯಾರಿಕಾ ಘಟಕವೊಂದರ ಮೇಲೆ ದಾಳಿ ನಡೆಸಿದ್ದ ಮಹಾರಾಷ್ಟ್ರ ಉಗ್ರ ನಿಗ್ರ ಪಡೆ ಶರದ್‌ ಕಲಾಸ್ಕರ್‌ನನ್ನು ಬಂಧಿಸಿತ್ತು. ವಿಚಾರಣೆ ವೇಳೆ ವಿಚಾರವಾದಿಗಗಳ ಹತ್ಯೆ ಮತ್ತು ಪತ್ರಕರ್ತೆ ಲಂಕೇಶ್‌ ಕೊಲೆ ಪ್ರಕರಣಕ್ಕೆ ಸಂಬಂಧ ಇರುವುದು ಕಂಡುಬಂದಿತ್ತು. ಬಳಿಕ ಈ ಮಾಹಿತಿಯನ್ನು ಮಹಾರಾಷ್ಟ್ರ ಎಟಿಎಸ್‌ ಕರ್ನಾಟಕ ಪೊಲೀಸರೊಂದಿಗೆ ಹಂಚಿಕೊಂಡಿತ್ತು. ಕರ್ನಾಟಕ ಪೊಲೀಸರ ವಿಚಾರಣೆಯ ವೇಳೆ ಶರದ್‌ ಕಲಾಸ್ಕರ್‌ ತಪ್ಪೊಪ್ಪಿಕೊಂಡಿದ್ದಾನೆ.