ಬೆಂಗಳೂರು (ಜ. 31): ಸಾಮಾಜಿಕ ಜಾಲತಾಣಗಳಿಂದ ಎಷ್ಟು ಒಳ್ಳೆಯದಿದೆಯಾ ಅಷ್ಟೇ ಕೆಟ್ಟದ್ದು ಇದೆ. ಅತಿಯಾದರೆ ಯಾವುದೂ ಒಳ್ಳೆಯದಲ್ಲ ಎನ್ನುವುದು ಇದಕ್ಕೆ.

ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಬಳಸುತ್ತಾಳೆ ಎಂಬ ಸಿಟ್ಟಿನಿಂದ ತನ್ನ ಪ್ರಿಯತಮೆ ಮತ್ತು ಹಸುಗೂಸನ್ನು ಪ್ರಿಯಕರನೊಬ್ಬ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾದನಾಯ್ಕನಹಳ್ಳಿ ನಿವಾಸಿ ಸುಷ್ಮಾ (25) ಹತ್ಯೆಗೀಡಾದ ಮಹಿಳೆ.  ಬೆಂಗಳೂರು ನಿವಾಸಿ ಎಸ್‌.ಕೆ. ರಾಜು (28) ಕೊಲೆ‌ ಮಾಡಿದ ವ್ಯಕ್ತಿ. ಬಿಡದಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. 

ಬಿಡದಿ ಹೋಬಳಿಯ ಹೆಜ್ಜಾಲ–ಮುತ್ತುರಾಯನಪುರ ರಸ್ತೆಯಲ್ಲಿರುವ ಕುಂಬಳಗೂಡು ಅರಣ್ಯ ಪ್ರದೇಶದ ನೀಲಗಿರಿ ತೋಪಿನಲ್ಲಿ ಇದೇ ತಿಂಗಳ 20 ರಂದು  ಅರೆ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ದೇಹ ಪತ್ತೆಯಾಗಿತ್ತು.  ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಭರ್ಬರವಾಗಿ ಹತ್ಯೆ ಮಾಡಿ ದೇಹದ ಮೇಲೆ ಪೆಟ್ರೋಲ್ ಸುರಿದು ಸುಡಲಾಗಿತ್ತು.  ಅನುಮಾನಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು.