ನಾಗ್ಪುರ (ಜ. 18): ವಿಚ್ಛೇದನ ಪ್ರಕರಣ ವಿಚಾರಣೆಯನ್ನು ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಇತ್ಯರ್ಥ ಪಡೆಸಿದ ಪ್ರಸಂಗ ನಾಗ್ಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. 2013 ರಲ್ಲಿ ಸತಿ-ಪತಿಗಳಾಗಿದ್ದ ಅರ್ಜಿದಾರರು, ಅಮೆರಿಕದ ಮಿಚಿಗನ್‌ನಲ್ಲಿ ಕೆಲಸ ಮಾಡುತ್ತಿದ್ದರಾದರೂ, ವಿಚ್ಛೇದನ ಬಯಸಿ ನಾಗ್ಪುರದ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ದರು.

ನಿರೀಕ್ಷೆಯಂತೆ ಕೋರ್ಟ್ ವಿಚಾರಣೆಗೆ ಕರೆದಿದ್ದು, ಪತಿ ಹಾಜರಾದರು. ಆದರೆ 35 ವರ್ಷದ ಪತ್ನಿ ತಾನು ಶಿಕ್ಷಣ ಮುಂದುವರಿಸಿರುವ ಸಂಸ್ಥೆಯಲ್ಲಿ ದೀರ್ಘ ರಜೆ ನೀಡುವುದಿಲ್ಲ. ಆ ಕಾರಣಕ್ಕಾಗಿ ವಾಟ್ಸಾಪ್ ವಿಡಿಯೋ ಮೂಲಕ ವಿಚಾರಣೆ ನಡೆಸಿ ಎಂದು ಕೋರಿದ್ದರು. ಅದೇ ಪ್ರಕಾರ, ನ್ಯಾ.ಸ್ವಾತಿ ಚೌಹಾಣ್ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಅಮೆರಿಕದಲ್ಲಿದ್ದ ಪತ್ನಿಯನ್ನೂ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.