ಸುಪ್ರೀಂ ಅಸ್ತಿತ್ವ ಅಪಾಯದಲ್ಲಿದೆ!

History will not pardon us justice Kurian Joseph writes letter to CJI Deepak Misra
Highlights

ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ನ ನಡುವೆ ನಡೆಯುತ್ತಿರುವ ಸಂಘರ್ಷ ಮತ್ತೊಂದು ಮಜಲಿಗೆ ಹೊರಳಿದ್ದು, ‘ಸುಪ್ರೀಂಕೋರ್ಟ್‌ನ ಜೀವ ಹಾಗೂ ಅಸ್ತಿತ್ವವೇ ಅಪಾಯದಲ್ಲಿದೆ’ ಎಂದು ಕಳವಳ ವ್ಯಕ್ತಪಡಿಸಿ ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂಕೋರ್ಟ್‌ನ ಇತರ 22 ನ್ಯಾಯಮೂರ್ತಿಗಳಿಗೆ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ಪತ್ರ ಬರೆದಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ನ ನಡುವೆ ನಡೆಯುತ್ತಿರುವ ಸಂಘರ್ಷ ಮತ್ತೊಂದು ಮಜಲಿಗೆ ಹೊರಳಿದ್ದು, ‘ಸುಪ್ರೀಂಕೋರ್ಟ್‌ನ ಜೀವ ಹಾಗೂ ಅಸ್ತಿತ್ವವೇ ಅಪಾಯದಲ್ಲಿದೆ’ ಎಂದು ಕಳವಳ ವ್ಯಕ್ತಪಡಿಸಿ ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂಕೋರ್ಟ್‌ನ ಇತರ 22 ನ್ಯಾಯಮೂರ್ತಿಗಳಿಗೆ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ಪತ್ರ ಬರೆದಿದ್ದಾರೆ.

‘ಸುಪ್ರೀಂಕೋರ್ಟ್‌ಗೆ ಇಬ್ಬರು ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಹೆಸರು ಅಂತಿಮಗೊಳಿಸಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿ 3 ತಿಂಗಳು ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ತ್ವರಿತವಾಗಿ ಇತ್ಯರ್ಥಪಡಿಸದಿದ್ದರೆ ಇತಿಹಾಸ ನಮ್ಮನ್ನು ಕ್ಷಮಿಸದು. ಇಬ್ಬರು ನ್ಯಾಯಮೂರ್ತಿಗಳ ನೇಮಕದ ಬಗ್ಗೆ ಆದೇಶ ಹೊರಡಿಸಲು ಮುಖ್ಯ ನ್ಯಾಯಮೂರ್ತಿಗಳು ಕೂಡಲೇ ಏಳು ಜಡ್ಜ್‌ಗಳ ಪೀಠ ರಚಿಸಬೇಕು’ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಏ.9ರಂದು ನ್ಯಾ

ಕುರಿಯನ್‌ ಜೋಸೆಫ್‌ ಈ ಪತ್ರ ಬರೆದಿದ್ದು, ಅದರಲ್ಲಿ, ಸುಪ್ರೀಂಕೋರ್ಟ್‌ನ ಶಿಫಾರಸಿನ ಕತೆ ಏನಾಯಿತು ಎಂಬುದು 3 ತಿಂಗಳು ಕಳೆದರೂ ನಮಗೆ ತಿಳಿಯುತ್ತಿಲ್ಲ ಎಂಬಂತಹ ಘಟನೆ ನಡೆಯುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು. ಅವಧಿ ಮುಗಿದ ಮೇಲೂ ಹೆರಿಗೆ ಸಹಜವಾಗಿ ಆಗದೆ ಇದ್ದರೆ ಸಿಸೇರಿಯನ್‌ ಮಾಡಬೇಕಾಗುತ್ತದೆ. ಸೂಕ್ತ ಸಮಯಕ್ಕೆ ಶಸ್ತ್ರಚಿಕಿತ್ಸೆ ನಡೆಸದಿದ್ದರೆ ಗರ್ಭದಲ್ಲಿಯೇ ಮಗು ಸಾಯುತ್ತದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

3 ತಿಂಗಳ ಹಿಂದೆ ಹಿರಿಯ ನ್ಯಾಯವಾದಿ ಇಂದು ಮಲ್ಹೋತ್ರಾ ಹಾಗೂ ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ಅವರನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಕ್ರಮ ಕೈಗೊಳ್ಳದೆ ಇರುವುದಕ್ಕೆ ಕುರಿಯನ್‌ ಜೋಸೆಫ್‌ ಈ ಪತ್ರ ಬರೆದಿದ್ದಾರೆ.

ಜೋಸೆಫ್‌ ಅವರ ಪತ್ರದ ಬಗ್ಗೆ ಇನ್ನೊಬ್ಬ ಹಿರಿಯ ನ್ಯಾಯಮೂರ್ತಿಗಳು ಸುದ್ದಿವಾಹಿನಿಗೆ ಪತ್ರಮುಖೇನ ಪ್ರತಿಕ್ರಿಯಿಸಿದ್ದು, ‘ಇದು ಬಹಳ ಬೇಸರದ ಸಂಗತಿ. ನಮಗೆ ಸಾಕಾಗಿಹೋಗಿದೆ. ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಯಾರಿಗೂ ಆತಂಕವೇ ಇಲ್ಲ’ ಎಂದು ಹೇಳಿದ್ದಾರೆ.

ಕಳೆದ ತಿಂಗಳಷ್ಟೇ ಇನ್ನೊಬ್ಬ ಹಿರಿಯ ನ್ಯಾಯಮೂರ್ತಿ ಜೆ.ಚಲಮೇಶ್ವರ್‌ ಕೂಡ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಇಂತಹುದೇ ಪತ್ರ ಬರೆದಿದ್ದರು. ಅದರಲ್ಲಿ, ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ಕರ್ನಾಟಕ ಹೈಕೋರ್ಟ್‌ಗೆ ಪದೋನ್ನತಿಗೊಳಿಸಲು ಕೊಲಿಜಿಯಂ ಶಿಫಾರಸು ಮಾಡಿದ್ದರೂ ಅದರ ವಿರುದ್ಧ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಕೇಂದ್ರ ಕಾನೂನು ಸಚಿವಾಲಯ ನೇರವಾಗಿ ಪತ್ರ ಬರೆದಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

loader