ಲಕ್ನೋ(ಜ.31): ಜ.30ನ್ನು ಭಾರತ ಹುತಾತ್ಮ ದಿನವನ್ನಾಗಿ ಆಚರಿಸುತ್ತದೆ. ಈ ದಿನ ರಾಷ್ಟ್ರಪತಿ ಮಹಾತ್ಮಾ ಗಾಂಧಿ ಅವರನ್ನು ನಾಥೂರಾಮ್ ಗೋಡ್ಸೆ ಗುಂಡಿಟ್ಟು ಕೊಂದ ದಿನ. ಈ ದಿನ ಭಾರತದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಲಕ್ಷಾಂತರ ಹುತಾತ್ಮರನ್ನು ನೆನೆಯಲಾಗುತ್ತದೆ.

ಆದರೆ ಲಕ್ನೋದಲ್ಲಿ ಹಿಂದೂ ಮಹಾಸಭಾ ನಾಯಕಿಯೊಬ್ಬರು ಮಹಾತ್ಮಾ ಗಾಂಧಿಜೀ ಫೋಟೋಗೆ ಗುಂಡಿಟ್ಟು ಹುತಾತ್ಮ ದಿನಾಚರಣೆಗೆ ಅವಮಾನಿಸಿದ ಘಟನೆ ನಡೆದಿದೆ.

ಹೌದು, ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರನ್ನು ಹತ್ಯೆ ಮಾಡಿದ್ದ ನಾಥುರಾಮ್ ಗೋಡ್ಸೆಗೆ ಮಾಲಾರ್ಪಣೆ ಮಾಡಿ, ಗಾಂಧೀಜಿ ಫೋಟೋಗೆ ಹಿಂದೂ ಮಹಾಸಭಾ ನಾಯಕಿ ಗುಂಡಿಕ್ಕಿರುವ ವಿಡಿಯೋ ವೈರಲ್ ಆಗಿದೆ.

ಹಿಂದೂಸಭಾದ ನಾಯಕಿ ಪೂಜಾ ಶಕುನ್ ಪಾಂಡೆ ಗಾಂಧಿಜೀ ಫೋಟೋಗೆ ನಕಲಿ ಬಂದೂಕಿನಿಂದ ಶೂಟ್ ಮಾಡುವ ಮೂಲಕ ಅವಮಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಪಾಂಡೆ ನಾವು ಇಂದು ಹೊಸ ಪರಂಪರೆ ಶುರು ಮಾಡಿದ್ದು, ಗಾಂಧಿ ಎಂಬ ರಾವಣನನ್ನು ಗೋಡ್ಸೆ ಎಂಬ ರಾಮ ಹೇಗೆ ಸಂಹರಿಸಿದ ಎಂಬುದನ್ನು ಈ ಆಚರಣೆಯ ಮೂಲಕ ತೋರಿಸಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಗಾಂಧಿಜೀ ಫೋಟೋಗೆ ಗುಂಡು ಹಾರಿಸಿದ ಆರೋಪದ ಮೇಲೆ ಪೂಜಾ ಶಕುನ್ ಪಾಂಡೆ ಸೇರಿದಂತೆ ಒಟ್ಟು ೧೩ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.