ಶ್ರೀನಗರ(ನ.22): ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ವಿಧಾನಸಭೆ ವಿಸರ್ಜನೆಯಾಗುತ್ತಿದ್ದಂತೇ ತೀವ್ರ ಗತಿಯ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಒಂದು ಕಡೆ ಸರ್ಕಾರ ರಚಿಸಲು ಪಿಡಿಪಿ, ನ್ಯಾಶನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದ್ದರೆ, ಇತ್ತ ಬಿಜೆಪಿ ಈ ಪ್ರಯತ್ನಗಳನ್ನು ತಡೆಯುವ ತಂತ್ರ ರೂಪಿಸುತ್ತಿದೆ.

ನಿನ್ನೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಣಯ ಕೈಗೊಂಡಿದ್ದರು. ಇದಾದ ಬಳಿಕ ಸರ್ಕಾರ ರಚನೆಗೆ ಬಿಜೆಪಿ ವಿರೋಧಿ ಬಣಗಳು ಒಂದಾಗಿದ್ದವು. ಆದರೆ ಈ ಪ್ರಯತ್ನಗಳಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು.

ಈ ಮಧ್ಯೆ ಇದೀಗ ಸರ್ಕಾರ ರಚನೆಗೆ ಶಾಸಕರ ಕುದುರೆ ವ್ಯಾಪಾರದಂತ ಪ್ರಯತ್ನಗಳು ನಡೆದಿದೆ ಎಂದು ಖುದ್ದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಮಾಡಿರುವ ಆರೋಪ ಕಣಿವೆಯಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಿದೆ. ರಾಜ್ಯಪಾಲರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಪಿಡಿಪಿ, ಎನ್ ಸಿ ಮತ್ತು ಕಾಂಗ್ರೆಸ್ ರಾಜ್ಯಪಾಲರು ಬಿಜೆಪಿ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿವೆ.

ಇನ್ನು ಪಾಕಿಸ್ತಾನದ ಅಣತಿಯಂತೆ ಕಣಿವೆಯಲ್ಲಿ ಮೂರು ಬಿಜೆಪಿ ವಿರೋಧ ಪಕ್ಷಗಳು ಒಂದಾಗಿವೆ  ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರ ರಚಿಸಲು ಪಿಡಿಪಿ, ಎನ್ ಸಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪಾಕಿಸ್ತಾನ ಸಹಾಯ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಮ್ ಮಾಧವ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಎನ್ ಸಿ ನಾಯಕ ಹಾಗೂ ಮಾಜಿ ಸಿಎಂ ಒಮರ್ ಅಬ್ದುಲ್ಲಾ, ರಾಮ್ ಮಾಧವ್ ತಮ್ಮ ಹೇಳಿಕೆಗೆ ಸಾಕ್ಷ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದೆಲ್ಲದರ ಮಧ್ಯೆ ಕಣಿವೆಯಲ್ಲಿ ನಡೆಯುತ್ತಿರುವ ಈ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.