ತಿರುವನಂತಪುರಂ: ಕೇರಳದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಪಂಪಾ ನದಿ ಉಕ್ಕಿ ಹರಿಯುತ್ತಿದ್ದು, ಶಬರಿಮಲೆ ಅಯ್ಯಪ್ಪ ದೇಗುಲದ ಸಂಪರ್ಕ ಕಡಿತಗೊಂಡಿದೆ. ಪಂಪಾ ತ್ರಿವೇಣಿ ಸೇತುವೆ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ಶಬರಿಮಲೆ ದೇಗುಲದ ದರ್ಶನಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.

ಈ ವಾರ ನಡೆಯುವ ನಿರಾಪುತಾರಿ ಆಚರಣೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಶಬರಿಮಲೆಯತ್ತ ಪ್ರಯಾಣ ಬೆಳೆಸಿದ್ದರು. ಭಕ್ತರಿಗೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ತಿಳಿಸಲಾಗಿದೆ.

1924ರ ಬಳಿಕ ಅತ್ಯಧಿಕ ಮಳೆ:  ಕೇರಳದಲ್ಲಿ ಕಳೆದ 5 ದಿನಗಳಿಂದ ಸುರಿದ ಮಳೆ 1924ರಲ್ಲಿ ವಾರವಿಡೀ ಸುರಿದ ಮಳೆಗಿಂತಲೂ ಅಧಿಕವೆನಿಸಿದೆ. ಮಳೆಯಿಂದಾಗಿ 10,000 ಕಿ.ಮಿ.ಯಷ್ಟುರಸ್ತೆ ಹಾನಿಗೊಳಗಾಗಿದೆ. 

ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 8316 ಕೋಟಿ ರು. ನಷ್ಟಸಂಭವಿಸಿದೆ. ಇದೇ ವೇಳೆ ಕೇರಳದಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಮತ್ತಿಬ್ಬರು ಬಲಿಯಾಗಿದ್ದು ಸಾವಿನ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಈ ಮುಂಗಾರು ಋುತುವಿನಲ್ಲಿ ಒಟ್ಟು 186 ಮಂದಿ ಸಾವನ್ನಪ್ಪಿದ್ದಾರೆ. ಆ.15ರ ವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.