ಹಾಸನ: ಬುಧವಾರ ನಡೆದ ಸಮನ್ವಯ ಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ದೂರು ಕಾಂಗ್ರೆಸ್‌ ಸಚಿವರಿಂದ ವ್ಯಕ್ತವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಗುರುವಾರ ಹಾಸನದಲ್ಲಿ ಪ್ರತಿಕ್ರಿಯಿಸಿದ ರೇವಣ್ಣ, ತಾನು ಯಾವುದೇ ಇಲಾಖೆಗಳಲ್ಲಿ ವರ್ಗಾವಣೆ ಮಾಡಿ ಅಂತ ಯಾರಿಗೂ ಹೇಳಿಲ್ಲ. ಹಸ್ತಕ್ಷೇಪವನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನಾದರೂ ಹಸ್ತಕ್ಷೇಪ ಮಾಡಿದ್ದರೇ ಆ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ತಿಳಿಸಲಿ. ನನ್ನಿಂದ ಕಾಂಗ್ರೆಸಿಗರಿಗೆ ತೊಂದರೆ ಆಗಿದ್ದರೂ ಹೇಳಲಿ. ಈ ಬಗ್ಗೆ ಬೇಕಾದರೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕರೆದು ನನ್ನನ್ನು ಕೇಳಿದರೆ, ಸತ್ಯವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಮಾಟ, ಮಂತ್ರ ತಟ್ಟಲ್ಲ:  ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಯಾರಾದರೂ ಸಮ್ಮಿಶ್ರ ಸರ್ಕಾರ ಪತನವಾಗಲಿ ಅಥವಾ ನಮ್ಮ ಕುಟುಂಬದ ವಿರುದ್ಧ ಮಾಟ-ಮಂತ್ರ ಮಾಡಿಸಿದರೆ ಅದು ಅವರಿಗೇ ಉಲ್ಟಾ(ರಿವರ್ಸ್‌) ಆಗಲಿದೆ. ಈಶ್ವರ, ಶಿವ, ಶೃಂಗೇರಿಯ ಶಾರದೆ ಹಾಗೂ ಗುರುಗಳ ಅನುಗ್ರಹ ಇರುವವರೆಗೂ ನಮ್ಮ ಕುಟುಂಬಕ್ಕೆ ಏನೂ ಆಗುವುದಿಲ್ಲ ಎಂದರು.

ಲಂಕಾದಿಂದ ಆನೆ ತಜ್ಞರ ಕರೆಸಲು ಚಿಂತನೆ:  ರಾಜ್ಯದಲ್ಲಿನ ಕಾಡಾನೆಗಳ ಸಮಸ್ಯೆ ಮತ್ತು ಆನೆ ಕಾರಿಡಾರ್‌ ನಿರ್ಮಾಣ ಸಂಬಂಧ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದೆಹಲಿಗೆ ತೆರಲಿ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಲಾಗುತ್ತದೆ. ಶ್ರೀಲಂಕಾದಿಂದಲೂ ಆನೆ ತಜ್ಞರನ್ನು ಕರೆಯಿಸಿ ರಾಜ್ಯದಲ್ಲಿ ಕಾಡಾನೆಗಳನ್ನು ಹಿಡಿಯಲು ಚಿಂತನೆ ನಡೆಸಲಾಗುತ್ತಿದೆ ಎಂದರು.