ಬೆಂಗಳೂರು[ಅ.06]: ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡಲಾಗುವುದು ಎಂದು ಮೈತ್ರಿ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ, ಇದುವರೆಗೂ ಮನೆ ಕಟ್ಟಿಸಿಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಟಾಂಗ್‌ ಕೊಟ್ಟಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರದ ಕಾರ್ಯವೈಖರಿ ಸಮರ್ಥಿಸಿಕೊಂಡು ಹಿಂದಿನ ಸಮ್ಮಿಶ್ರ ಸರ್ಕಾರ ವಿರುದ್ಧ ಕಿಡಿಕಾರಿದರು. ಕೊಡಗು ಜಿಲ್ಲೆಯಲ್ಲಿ ನೆರೆಯಿಂದಾಗಿ ಜನರು ಬದುಕು ಕಳೆದುಕೊಂಡಿದ್ದರು. ಆಗಿನ ಮುಖ್ಯಮಂತ್ರಿಗಳು ಬಂದು ನೋಡಿ ಕಾಮಗಾರಿಗಳನ್ನು ನಡೆಸಿಕೊಡುವುದಾಗಿ ಹೇಳಿದರು. ಆದರೆ, ಕೆಲಸಗಳು ಮಾತ್ರ ಆಗಿಲ್ಲ. ಮನೆ ಕಳೆದುಕೊಂಡವರಿಗೆ 97 ಸಾವಿರ ರು. ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಹಣ ನೀಡದೆ ಲೂಟಿ ಹೊಡೆಯಲಾಗಿದೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರವು ಮನೆ ಕಳೆದುಕೊಂಡವರಿಗೆ 1 ಲಕ್ಷ ರು. ನೀಡುತ್ತಿದೆ. ನೆರೆ ವಿಚಾರದಲ್ಲಿ ರಾಜಕೀಯ ಮಾಡದೆ ಸರ್ಕಾರದ ಜತೆ ಸಹಕರಿಸಬೇಕು. ಹಿಂದಿನ ಸರ್ಕಾರದ ಅವಧಿಯಲ್ಲಿ ಸರ್ಕಾರದ ಖಜಾನೆ ಲೂಟಿಯಾಗಿದ್ದನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರ್ತಿ ಮಾಡುವ ಕೆಲಸ ಮಾಡುತ್ತಿದ್ದು, ಪರಿಹಾರ ಕಾರ್ಯಗಳು ಸುಸೂತ್ರವಾಗಿ ನಡೆಯಲಿವೆ. ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗುವುದು ವಿಳಂಬವಾಗಿಲ್ಲ. ಯಾವುದೇ ರಾಜ್ಯಗಳಿಗೆ ಪರಿಹಾರ ಬಿಡುಗಡೆ ಮಾಡಬೇಕಾದರೆ ಕೆಲವು ನಿಯಮ, ಕಾನೂನುಗಳು ಇರುತ್ತವೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರವೇ ಹಣ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡರು.

ನೆರೆ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಸ್ತುವಾರಿ ಸಚಿವರ ನೇಮಕಗೊಂಡ ಬಳಿಕ ಜಿಲ್ಲೆಯ ಜವಾಬ್ದಾರಿಗಳನ್ನು ನೀಡಿದರು. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಟೆಂಡರ್‌ ನೀಡದೆ ನೇರವಾಗಿ ಆರ್‌ಟಿಜಿಎಸ್‌ ಮೂಲಕ ಸಂತ್ರಸ್ತರ ಖಾತೆಗೆ ಹಣ ಜಮಾಯಿಸಲಾಗಿದೆ. ಸುಮಾರು 4 ಲಕ್ಷ ಜನರಿಗೆ 100 ಕೋಟಿ ರು.ನಷ್ಟುಪರಿಹಾರ ವಿತರಣೆ ಮಾಡಲಾಗಿದೆ. ಅಲ್ಲದೇ, ಮನೆ ಕಳೆದುಕೊಂಡವರಿಗೆ 5 ಲಕ್ಷ ರು. ದುರಸ್ತಿಗೆ ಒಂದು ಲಕ್ಷ ರು. ಬಾಡಿಗೆ ಮನೆಗೆ 10 ಸಾವಿರ ರು. ನೀಡಲಾಗುತ್ತಿದೆ. ಪರಿಹಾರದ ಹಣ ಮಧ್ಯವರ್ತಿಗಳ ಪಾಲಾಗದೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೇಂದ್ರವು ಸರ್ಕಾರವು 1200 ಕೋಟಿ ರು. ಪರಿಹಾರ ನೀಡಿದೆ. ಇದನ್ನು ಸಂತ್ರಸ್ತರ ನೆರವಿಗೆ ಬಳಕೆ ಮಾಡಲಾಗುವುದು. ದೇಶದ 13 ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿದೆ. 12 ರಾಜ್ಯಗಳಿಗೆ ಕೇಂದ್ರದ ತಂಡವು ತೆರಳಿ ಸಮೀಕ್ಷೆ ನಡೆಸಿದೆ. ಕಾಲ ಕಾಲಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದರು. ನೆರೆ ಪರಿಸ್ಥಿತಿ ಕಂಡು ಬಂದಾಗ ಉಸ್ತುವಾರಿ ಸಚಿವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪರಿಹಾರ ಒಂದು ವರ್ಷದ ನಂತರ ಬಂದಿದೆ. ಆ ಬಗ್ಗೆ ಯಾರು ಹೇಳಿಕೆ ನೀಡುತ್ತಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಡವಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಸದ್ಯಕ್ಕೆ ಬಿಡುಗಡೆ ಮಾಡಿರುವ ಪರಿಹಾರದ ಬಳಕೆ ಕುರಿತು ಪ್ರಮಾಣ ಪತ್ರ ಸಲ್ಲಿಸಿದ ತರುವಾಯ ಎರಡನೇ ಹಂತದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪಕ್ಷದ ಶಿಸ್ತು ಮತ್ತು ನಿಯಮದಡಿ ಎಲ್ಲರೂ ಸಂಯಮದಿಂದ ವರ್ತಿಸಬೇಕು. ಆ ರೀತಿ ನಡೆದುಕೊಳ್ಳದಿದ್ದರೆ ವಿವರಣೆ ಕೇಳಬೇಕಾಗುತ್ತದೆ. ಹೀಗಾಗಿ ಪಕ್ಷದ ಶಿಸ್ತು ಕಾಪಾಡುವ ಉದ್ದೇಶದಿಂದ ಸ್ಪಷ್ಟನೆ ಕೋರಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ಸಮರ್ಥಿಸಿಕೊಂಡ ಅವರು, ಪಕ್ಷದ ಅಧ್ಯಕ್ಷನಾದ ಬಳಿಕ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಲಾಗುತ್ತಿರುವೆ. ಪಕ್ಷದ ಸದಸ್ಯತ್ವ ಅಭಿಯಾನವು ಯಶಸ್ವಿಯಾಗಿ ನಡೆಯುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿಯೂ ಪಾದಯಾತ್ರೆ ನಡೆಸುತ್ತಿದ್ದೇವೆ. ಪಕ್ಷದ ಸಂಘಟನೆಯಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ರವಿಸುಬ್ರಮಣ್ಯ, ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಇತರರು ಉಪಸ್ಥಿತರಿದ್ದರು.