ಬೆಂಗಳೂರು : ಕಾಂಗ್ರೆಸ್ ನಾಯಕರೊಂದಿಗಿನ ಮಾತುಕತೆ ಹಿನ್ನೆಲೆಯಲ್ಲಿ ತುಸು ಮೃದು ಧೋರಣೆ ತಳೆದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಾಕಿ ಉಳಿಸಿಕೊಂಡಿದ್ದ ಹಲವು ನೇಮಕಗಳಿಗೆ ಹಸಿರು ನಿಶಾನೆ ತೋರಿದ್ದು, ಇನ್ನು ಕೆಲವನ್ನು ತಾಂತ್ರಿಕ ಕಾರಣ ನೀಡಿ ತಡೆ ಮುಂದು ವರೆಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ರಾಗಿ ಶಾಸಕ ಎಸ್.ಟಿ.ಸೋಮಶೇಖರ್, ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ (ಕೆಎಸ್‌ಐಸಿ) ಅಧ್ಯಕ್ಷರಾಗಿ ಶಾಸಕ ಕೆ.ಎನ್.ಸುಬ್ಬಾರೆಡ್ಡಿ, ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಅಧ್ಯಕ್ಷರಾಗಿ ಶಾಸಕ ಎನ್.ಎ.ಹ್ಯಾರಿಸ್ ಅವರನ್ನು ನೇಮಿಸಿ ಬುಧವಾರ ಆದೇಶ ಹೊರಡಿಸಲಾಗಿದೆ.

ಜೊತೆಗೆ ತಡೆಹಿಡಿಯಲ್ಪಟ್ಟಿದ್ದ ಪಟ್ಟಿಯಲ್ಲಿ ಇರದೇ ಇದ್ದ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾ ರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಶಾಸಕ ಪ್ರಸಾದ್ ಅಬ್ಬಯ್ಯ ಅವರನ್ನು ನೇಮಕ ಮಾಡಲಾಗಿದೆ. ಆದರೆ, ತಡೆಹಿಡಿಯಲ್ಪಟ್ಟಿದ್ದ ನೇಮಕಗಳ ಪೈಕಿ ಇನ್ನೂ ಆರಕ್ಕೆ ಮುಖ್ಯ ಮಂತ್ರಿಗಳು ಒಪ್ಪಿಗೆ ಸೂಚಿಸಿಲ್ಲ. 

ಈ ಬಗ್ಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದ್ದು, ನಂತರವೇ ಸ್ಪಷ್ಟ ಚಿತ್ರಣ  ಹೊರಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್ ಸಚಿವರಿಗೆ ಸಂಬಂಧಿಸಿದ ಖಾತೆಗಳ ಅಡಿಯಲ್ಲಿ ಬರುವ ಕೆಎಸ್‌ಐಸಿ ಮತ್ತು ಬಿಎಂಟಿಸಿಗಳ ನೇಮಕಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. 

ಮೊದಲ ಪಟ್ಟಿಯಲ್ಲಿ ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಶಾಸಕ ಶಿವರಾಂ ಹೆಬ್ಬಾರ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿತ್ತು. ಜೆಡಿಎಸ್ ಪಾಲಿಗೆ ಬಂದಿರುವ ಸಾರಿಗೆ ಇಲಾಖೆ ಅಡಿಯಲ್ಲಿ ಬರುವ ನಾಲ್ಕು ನಿಗಮಗಳ ಪೈಕಿ ಎರಡನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಂತಾಗಿದೆ. 

ಕಾಂಗ್ರೆಸ್ ಶಾಸಕರನ್ನು ಸೂಚಿಸಿ ಆ ಪಕ್ಷದ ನಾಯಕರು ಕಳುಹಿಸಿದ್ದ ಪಟ್ಟಿಯ ಪೈಕಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ದೆಹಲಿ ಪ್ರತಿನಿಧಿ, ಯೋಜನಾ ಮಂಡಳಿ ಉಪಾಧ್ಯಕ್ಷ, ಮಾಲಿನ್ಯ  ನಿಯಂತ್ರಣ ಮಂಡಳಿ ಅಧ್ಯಕ್ಷ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧ್ಯಕ್ಷ ಹಾಗೂ ಒಂದು ಸಂಸದೀಯ ಕಾರ್ಯದರ್ಶಿ ಸ್ಥಾನಗಳ ನೇಮಕಕ್ಕೆ ಮುಖ್ಯಮಂತ್ರಿಗಳು ಸಹಿ ಹಾಕಿಲ್ಲ.

ಈ ಪೈಕಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತಾಂತ್ರಿಕ ಪರಿಣತರನ್ನು ನೇಮಿಸಬೇಕು ಎಂದು ಆಡಳಿತ ಮಂಡಳಿಯ ನಿರ್ಣಯ ಆಗಿರುವುದರಿಂದ ಶಾಸಕರನ್ನು ನೇಮಿಸುವುದು ಬೇಡ ಎಂಬ ವಾದವನ್ನು ಜೆಡಿಎಸ್ ಮುಂದಿಟ್ಟಿದೆ. ಇನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ದೆಹಲಿ ಪ್ರತಿನಿಧಿ, ಯೋಜನಾ ಮಂಡಳಿ ಉಪಾಧ್ಯಕ್ಷ ಸ್ಥಾನಗಳು  ನೇರವಾಗಿ ಮುಖ್ಯಮಂತ್ರಿಗಳ ಅಡಿಯಲ್ಲಿ ಬರುವುದ
ರಿಂದ ಕಾಂಗ್ರೆಸ್ ಶಾಸಕರ ನೇಮಕ ಸರಿಯಲ್ಲ ಎಂಬ ಅಭಿಪ್ರಾಯವನ್ನು ಜೆಡಿಎಸ್ ನಾಯಕರು ಹೊಂದಿದ್ದಾರೆ. 

ಜೊತೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಜೆಡಿಎಸ್ ಪಾಲಿನ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಬರುವುದರಿಂದ ಅದಕ್ಕೆ ಕಾಂಗ್ರೆಸ್ ಶಾಸಕರು ಅಧ್ಯಕ್ಷರಾಗುವುದು ಬೇಡ ಎಂಬ ಪಟ್ಟನ್ನು ಆ ಖಾತೆಯ ಸಚಿವ ಎಚ್.ಡಿ.ರೇವಣ್ಣ ಹಿಡಿದಿದ್ದಾರೆ ಎನ್ನಲಾಗಿದೆ.  ಆದರೆ, ಎಂಟು ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೆ ಸಹಿ ಹಾಕಿ ಆದೇಶ ಹೊರಡಿಸಿದ್ದ ಮುಖ್ಯಮಂತ್ರಿಗಳು ಒಂದು ಸಂಸದೀಯ ಕಾರ್ಯದರ್ಶಿ ಸ್ಥಾನವನ್ನು ಮಾತ್ರ ತಡೆ ಹಿಡಿದಿದ್ದಾರೆ. ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ  ಅವರನ್ನು ಕಾಂಗ್ರೆಸ್ ಪಕ್ಷ ಸೂಚಿಸಿತ್ತು. ಆದರೆ, ಇದನ್ನು ತಡೆ ಹಿಡಿದಿರುವುಕ್ಕೆ ನಿರ್ದಿಷ್ಟ ಕಾರಣಗಳು ಮಾತ್ರ ಗೊತ್ತಾಗುತ್ತಿಲ್ಲ