ನವದೆಹಲಿ(ಆ.18) ನನ್ನ ಟೆಂಪಲ್‌ ರನ್‌ನಿಂದ ಸರ್ಕಾರದ ಕಾರ್ಯ ಚಟುವಟಿಕೆಗಳಿಗೆ ತೊಂದರೆಯಾಗಿಲ್ಲ. ನನ್ನ ಆಡಳಿತಕ್ಕೆ ಧಕ್ಕೆ ಆಗಿದೆಯೇ? ನನ್ನ ಆಡಳಿತ ಸುಸೂತ್ರವಾಗಿಯೇ ನಡೆಯುತ್ತಿದೆ ಎಂದು ಪದೇಪದೇ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ತಮ್ಮ ನಡೆಯನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

ಇಲ್ಲಿನ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ದೇವರ ಮೇಲೆ ನಂಬಿಕೆಯಿದೆ. ಅದ್ಯಾವುದೋ ದೇವರ ಕೃಪೆಯಿಂದ ಮುಖ್ಯಮಂತ್ರಿ ಆಗಿದ್ದೇನೆ ಎಂದರು.

ಸೆ.2ರಿಂದ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದೇನೆ. ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಬೆಳಗ್ಗೆ ಜನತಾ ದರ್ಶನ ನಡೆಸಿ, ಮಧ್ಯಾಹ್ನದ ಬಳಿಕ ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ. ರೈತ ಸ್ಪಂದನ ಕಾರ್ಯಕ್ರಮಗಳನ್ನು ನಡೆಸಿ ಬೆಳೆ ಪದ್ಧತಿ ಬದಲಾವಣೆಯ ಬಗ್ಗೆ ತಿಳಿಹೇಳುವ ಪ್ರಯತ್ನ ನಡೆಸಲಾಗುವುದು ಎಂದು ವಿವರಿಸಿದರು.

ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ:
ಮಹದಾಯಿ ನ್ಯಾಯಾಧಿಕರಣದ ಐ-ತೀರ್ಪು ಬಂದಿದ್ದು ಮುಂದಿನ ಕ್ರಮದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಕೆಲ ಕಾನೂನು ತಜ್ಞರು ನ್ಯಾಯಾಧಿಕರಣದ ಮುಂದೆ ಸ್ಪಷ್ಟೀಕರಣ ಅರ್ಜಿ ಸಲ್ಲಿಸುವಂತೆ ಹೇಳುತ್ತಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಮಹದಾಯಿ ಕುರಿತು ಸರ್ವ ಪಕ್ಷಗಳ ಸಭೆ ಕರೆದು ಸಮಾಲೋಚಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.