ಫರಿದಾಬಾದ್(ಜೂ.27): ಹರಿಯಾಣ ಕಾಂಗ್ರೆಸ್ ವಕ್ತಾರ ವಿಕಾಸ್ ಚೌಧರಿ ಅವರನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಟ್ಟು ಕೊಂದಿದ್ದು, ಕೊಲೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಲ್ಲಿನ ಫರಿದಾಬಾದ್’ನಲ್ಲಿ ಜಿಮ್ ಮುಗಿಸಿ ಮನೆಗೆ ತೆರಳುತ್ತಿದ್ದ ವಿಕಾಸ್ ಚೌಧರಿ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ಮಳೆಗರೆದಿದ್ದಾರೆ. ತೀವ್ರವಾಗಿ ಗಾಯಗೊಂಡ ವಿಕಾಸ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಅಸುನೀಗಿದರು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ ಜಂಗಲ್ ರಾಜ್ ಆಡಳಿತ ಜಾರಿಯಲ್ಲಿದ್ದು, ರಾಜಕೀಯ ವಿರೋಧಿಗಳನ್ನು ಕೊಲ್ಲುವ ಮೂಲಕ ಬಿಜೆಪಿ ಸರ್ಕಾರ ಅರಾಜಕತೆ ಹರಡುತ್ತಿದೆ ಎಂದು ಕಿಡಿಕಾರಿದೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಂತಕರಿಗಾಗಿ ತೀವ್ರ ಶೋಧ ಆರಂಭಿಸಿದ್ದಾರೆ.