ನವದೆಹಲಿ (ಮಾ. 02): ಭಾರತೀಯ ವಾಯು ಪಡೆಗೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದ ಅಮೆರಿಕದ ಬಲಿಷ್ಠ ‘ಅಪಾಚೆ’ ಯುದ್ಧ ವಿಮಾನಕ್ಕೆ ಸರಿಸಾಟಿಯಾಗುವ ಹೊಸ ಹೆಲಿಕಾಪ್ಟರ್‌ಗಳನ್ನು ತಯಾರಿ ಮಾಡುವುದಕ್ಕೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ತಯಾರಿ ನಡೆಸಿದೆ.

ಇದಕ್ಕಾಗಿ ಆರಂಭಿಕ ಹಂತಗಳ ಕೆಲಸವನ್ನು ಎಚ್‌ಎಎಲ್‌ ಶುರು ಮಾಡಿದ್ದು. ಎಲ್ಲವೂ ಅಂದುಕೊಂಡಂತೆ ನಡೆದರೆ 2027ರ ವೇಳೆಗೆ ಸ್ವದೇಶಿ ನಿರ್ಮಿತ ಅಪಾಚೆ ಹೆಲಿಕಾಪ್ಟರ್‌ಗಳಷ್ಟೇ ಬಲಿಷ್ಠವಾದ ಯುದ್ದ ವಿಮಾನಗಳು ಲೋಕಾರ್ಪಣೆಗೊಳ್ಳಲಿದೆ.

ಪತಿ ಬಳಿಕ ಪತ್ನಿಗೆ 3 ಸ್ಟಾರ್: ಸೇನೆಯಲ್ಲಿ ಹೊಸ ಇತಿಹಾಸ

ಎರಡು ಎಂಜಿನ್‌ ಇರುವ ಹೆಲಿಕಾಪ್ಟರ್‌ ಇದಾಗಿರಲಿದ್ದು, ವಾಯು ದಾಳಿ, ವಾಯು ಸಾರಿಗೆ, ಯುದ್ಧ ಸಾಮಾಗ್ರಿಯನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇದಕ್ಕಿರಲಿದೆ. ಈ ವರ್ಷದೊಳಗೆ ಸರ್ಕಾರದಿಂದ ಅನುಮತಿ ಸಿಕ್ಕಿದರೆ 2027ರ ವೇಳೆಗೆ ಮೊದಲ ಹೆಲಿಕಾಪ್ಟರ್‌ ತಯಾರಾಗಲಿದೆ.

ಹಾಲಿ ಇರುವ ಎಂಐ-17 ವಿಮಾನಗಳ ಜಾಗವನ್ನು ಈ ವಿಮಾನಗಳು ಆಕ್ರಮಿಸಿಕೊಳ್ಳಲಿವೆ. 2023ಕ್ಕೆ ಎಂಐ-17 ವಿಮಾನಗಳು ಕಾರ್ಯಾಚರಣೆಯನ್ನು ನಿಲ್ಲಿಸಲಿದೆ ಎಂದು ಎಚ್‌ಎಎಲ್‌ ನಿರ್ದೇಶಕ ಆರ್‌. ಮಾಧವನ್‌ ಹೇಳಿದ್ದಾರೆ.

ಭಾರತ ವಿಶ್ವದ ಅತೀ ದೊಡ್ಡ ರಕ್ಷಣಾ ಸಾಮಗ್ರಿಗಳ ಆಮದುದಾರನಾಗಿದ್ದು, ಇವುಗಳನ್ನು ಕಡಿಮೆ ಮಾಡಲು ದೇಶೀಯವಾಗಿ 500 ಹೆಲಿಕಾಪ್ಟರ್‌ಗ ತಯಾರಿಕೆಗೆ ಸಿದ್ಧತೆ ಆರಂಭವಾಗಿದ್ದು, ಇದಕ್ಕೂ ಈ ವರ್ಷಾಂತ್ಯಕ್ಕೆ ಮುಂಚಿತವಾಗಿ ಸರ್ಕಾರದ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಮಾಧವನ್‌ ಹೇಳಿದ್ದಾರೆ.