ನವದೆಹಲಿ[ಏ.30]: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಗುರುಗ್ರಾಮದಲ್ಲಿ ಯುವಕನೊಬ್ಬನನ್ನು ತನ್ನ 8 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಪ್ರಕರಣದಡಿಯಲ್ಲಿ ಬಂಧಿಸಲಾಗಿದೆ. ನಾಲ್ಕನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಾಲಕಿ ತನ್ನ ತಂದೆ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿರುವ ವಿಚಾರ ನೆರೆ ಮನೆಯವರಿಗೆ ತಿಳಿಸಿದಾಗ ಈ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.

ಪ್ರಕರಣದ ಕುರಿತಾಗಿ ಮಾಹಿತಿ ನೀಡಿರುವ ಅಪರಾಧ ವಿಭಾಗದ ಎಸಿಪಿ ಶಮ್ಶೇರ್ ಸಿಂಗ್ ಬಾಲಕಿ ಕಳೆದ ಕೆಲ ದಿನಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದಳು. ಇದನ್ನು ಕಂಡ ನೆರೆ ಮನೆಯವರು ಆಕೆಯನ್ನು ಮಾತನಾಡಿಸಿದಾಗ ತಂದೆ ಅತ್ಯಾಚಾರ ನಡೆಸುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದಾಳೆ. ಇದನ್ನು ಕೇಳಿದ ಅವರು ಪೊಲೀಸರುಗೆ ಮಾಹಿತಿ ನೀಡಿದ್ದಾರೆ. ಈ ಬಾಲಕಿಯ ತಾಯಿ ಕೆಲ ಸಮಯದ ಹಿಂದಷ್ಟೇ ನಿಧನರಾಗಿದ್ದಾರೆ. ಬಳಿಕ ಆಕೆ ತಂದೆಯೊಂದಿಗೇ ಇದ್ದಳು. ಆದರೆ ತಂದೆ ತನ್ನ ಮಗಳ ಮೇಲೇ ಲೈಂಗಿಕ ಶೋಷಣೆ ನಡೆಸಿದ್ದಾನೆ ಎಂದಿದ್ದಾರೆ. 

'ತನ್ನ ತಂದೆ ರಾತ್ರಿ ಹೊತ್ತು ಮದ್ಯ ಸೇವಿಸಿ ತನ್ನನ್ನು ರೇಪ್ ಮಾಡುತ್ತಿದ್ದರು. ಕಳೆದ ವಾರ ಎರಡು ಬಾರಿ ಅತ್ಯಾಚಾರ ನಡೆಸಿದ್ದರು ಎಂದು ಬಾಲಕಿ ತಿಳಿಸಿದ್ದಾಳೆ' ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸದ್ಯ ಬಾಲಕಿಯನ್ನು ಕೌನ್ಸೆಲಿಂಗ್ ಸೆಂಟರ್ ಗೆ ಕಳುಹಿಸಲಾಗಿದೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲೂ ಇಂತಹುದೇ ಪ್ರಕರಣ ಬೆಳಕಿಗೆ ಬಂದಿತ್ತು. 16 ವರ್ಷದ ಪ್ರಾಪ್ತ ಬಾಲಕಿಯನ್ನು ಆಕೆಯ ಚಿಕ್ಕಪ್ಪನೇ ಅತ್ಯಾಚಾರ ನಡೆಸಿದ್ದರು. ಬಾಲಕಿ ಗರ್ಭಿಣಿಯಾದಾಗ ಈ ವಿಚಾರ ಆಕೆಯ ಹೆತ್ತವರಿಗೆ ತಿಳಿದಿತ್ತು.