ಅಹಮದಾಬಾದ್‌ (ಫೆ. 03): ಗುಜರಾತಿನ ಮೆಹ್ಸಾನಾ ಜಿಲ್ಲೆಯ ಊಂಝಾ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಆಶಾ ಪಟೇಲ್‌ ಅವರು ಶಾಸಕ ಸ್ಥಾನ ಹಾಗೂ ಪಕ್ಷದ ಸದಸ್ಯತ್ವ ಎರಡಕ್ಕೂ ಶನಿವಾರ ರಾಜೀನಾಮೆ ನೀಡಿದ್ದಾರೆ.

ಆಶಾ ಅವರ ತ್ಯಾಗಪತ್ರವನ್ನು ಸ್ಪೀಕರ್‌ ಅವರು ಅಂಗೀಕರಿಸಿದ್ದಾರೆ. ಇದು ‘ಆಪರೇಷನ್‌ ಕಮಲ’ ಎಂದು ವಿಶ್ಲೇಷಿಸಲಾಗುತ್ತಿದೆ. ಈ ರಾಜೀನಾಮೆಯೊಂದಿಗೆ ಗುಜರಾತಿನಲ್ಲಿ ಬಿಜೆಪಿ ಸರ್ಕಾರ ಪುನರಾಯ್ಕೆಯಾದ ಬಳಿಕ ಕಾಂಗ್ರೆಸ್‌ ತೊರೆದ ಶಾಸಕರ ಸಂಖ್ಯೆ ಎರಡಕ್ಕೇರಿಕೆಯಾಗಿದೆ.

ಪಕ್ಷದಲ್ಲಿ ಆಂತರಿಕ ಕಿತ್ತಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಆಶಾ ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಕಾಂಗ್ರೆಸ್‌ ಶಾಸಕ ಕುನ್ವರ್ಜಿ ಬವಲಿಯಾ ಅವರು ರಾಜೀನಾಮೆ ನೀಡಿ, ಬಿಜೆಪಿ ಸೇರಿ ಮಂತ್ರಿಯಾಗಿದ್ದರು. 2017ರ ವಿಧಾನಸಭೆ ಚುನಾವಣೆಯಲ್ಲಿ 99 ಸ್ಥಾನ ಗೆದ್ದಿದ್ದ ಬಿಜೆಪಿಯ ಬಲ ಬವಲಿಯಾ ಅವರಿಂದಾಗಿ 100ರ ಗಡಿ ಮುಟ್ಟಿತ್ತು. ಆಶಾ ಅವರೂ ಬಿಜೆಪಿ ಸೇರಬಹುದು ಎನ್ನಲಾಗುತ್ತಿದೆ.