ನವದೆಹಲಿ (ಡಿ. 25): ದೇಶದ ಯಾವುದೇ ನಾಗರಿಕರ ಕಂಪ್ಯೂಟರ್‌ಗಳ ಮಾಹಿತಿಯನ್ನು ಭೇದಿಸಲು ಅಥವಾ ಕಂಪ್ಯೂಟರ್‌ಗಳನ್ನೇ ವಶಕ್ಕೆ ಪಡೆಯಲು 10 ತನಿಖಾ ಸಂಸ್ಥೆಗಳಿಗೆ ಅಧಿಕಾರ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳ ದುರುಪಯೋಗ ತಡೆಯುವ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ.

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂತಹ ಜಾಲತಾಣಗಳನ್ನು ಕಿಡಿಗೇಡಿಗಳು ಗಲಭೆ ಸೃಷ್ಟಿಸಲು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ, ಕಾನೂನುಬಾಹಿರ ಮಾಹಿತಿಯನ್ನು ಹುಡುಕಿ ಅದನ್ನು ತೆಗೆದುಹಾಕುವಂತಹ ತಂತ್ರಜ್ಞಾವನ್ನು ಆನ್‌ಲೈನ್‌ ತಾಣಗಳಿಗೆ ಕಡ್ಡಾಯಗೊಳಿಸಲು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 79ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದೆ.

ಇದೇ ವೇಳೆ, ‘ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌’ ಬಳಸುತ್ತಿರುವ ಕಾರಣ ಸಂದೇಶ ಕಳುಹಿಸಿದವರನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ವಾಟ್ಸ್‌ಆ್ಯಪ್‌ನಂತಹ ತಾಣಗಳು ಹೇಳುತ್ತಿರುವ ಹಿನ್ನೆಲೆಯಲ್ಲಿ ಆ ತಂತ್ರಜ್ಞಾನವನ್ನೇ ನಿಲ್ಲಿಸುವ ಅಂಶವೂ 5 ಪುಟಗಳ ಕರಡು ನಿಯಮಗಳಲ್ಲಿದೆ ಎನ್ನಲಾಗಿದೆ. ಗೂಗಲ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವೀಟರ್‌ನಂತಹ ಕಂಪನಿಗಳ ಪ್ರತಿನಿಧಿಗಳ ಜತೆ ಈ ತಿದ್ದುಪಡಿ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಕಳೆದ ವಾರ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ತಿದ್ದುಪಡಿ ಬಗ್ಗೆ ಪ್ರತಿಕ್ರಿಯಿಸಲು ಜ.7ರವರೆಗೆ ಸಮಯಾವಕಾಶ ನೀಡಿದ್ದಾರೆ.

50 ಲಕ್ಷಕ್ಕಿಂತ ಅಧಿಕ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣಗಳು ಸರ್ಕಾರಗಳು ಯಾವುದೇ ಪ್ರಶ್ನೆ ಕೇಳಿದರೆ 72 ತಾಸುಗಳಲ್ಲಿ ಉತ್ತರಿಸಬೇಕು. ಕಾನೂನು ಜಾರಿ ಸಂಸ್ಥೆಗಳ ಜತೆಗಿನ ಸಮನ್ವಯಕ್ಕಾಗಿ ನೋಡಲ್‌ ವ್ಯಕ್ತಿಯನ್ನು ನೇಮಿಸುವ ಪ್ರಸ್ತಾಪವೂ ಇದೆ.